ADVERTISEMENT

ಚಿಕ್ಕಬಳ್ಳಾಪುರ: 27 ಸಾವಿರ ಕುಟುಂಬಕ್ಕೆ ತಲುಪದ ಅನ್ನಭಾಗ್ಯ ಹಣ

ಜಿಲ್ಲೆಯಲ್ಲಿ ಇನ್ನೂ ಇ–ಕೆವೈಸಿಗೆ ಬಾಕಿ ಇವೆ ಖಾತೆಗಳು

ಡಿ.ಎಂ.ಕುರ್ಕೆ ಪ್ರಶಾಂತ
Published 14 ಅಕ್ಟೋಬರ್ 2023, 6:26 IST
Last Updated 14 ಅಕ್ಟೋಬರ್ 2023, 6:26 IST
   

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ ಪಡಿತರ ಅಕ್ಕಿಗೆ ಬದಲು ಹಣ ನೀಡುತ್ತಿದೆ. ಅರ್ಹರಿಗೆ ನೇರ ನಗದು ಪಾವತಿ (ಡಿಬಿಟಿ) ಮೂಲಕ ಹಣ ಪಾವತಿ ಆಗುತ್ತಿದೆ. ಆದರೆ ಜಿಲ್ಲೆಯಲ್ಲಿ ಇಂದಿಗೂ 27 ಸಾವಿರ ಅರ್ಹ ಪಡಿತರ ಚೀಟಿದಾರ ಕುಟುಂಬಗಳು ಹಣ ಪಡೆಯಲು ಸಾಧ್ಯವಾಗಿಲ್ಲ. ಇವರ ಖಾತೆಗಳಿಗೆ ಹಣ ಡಿಬಿಟಿ ಆಗಿಲ್ಲ.

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸದೆ ಇರುವುದು ಸೇರಿದಂತೆ ತಾಂತ್ರಿಕ ಕಾರಣಗಳಿಂದ ಅನ್ನಭಾಗ್ಯದ ಹಣ ತಲುಪಿಲ್ಲ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ ಈ ಬಗ್ಗೆ ಪಡಿತರ ಚೀಟಿದಾರರಿಗೆ ತಿಳಿ ಹೇಳುತ್ತಿದ್ದಾರೆ.  

ಸರ್ಕಾರದ ಆದೇಶದ ಅನ್ವಯ ರಾಜ್ಯದಲ್ಲಿ ಅಂತ್ಯೋದಯ ಪಡಿತರ ಚೀಟಿ ಮತ್ತು ಆದ್ಯತಾ ಪಡಿತರ ಚೀಟಿ ಹೊಂದಿರುವವರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ 5 ಕೆ.ಜಿ ಅಕ್ಕಿಯೊಂದಿಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿ ನೀಡುತ್ತಿದೆ. ಆದರೆ ಅಕ್ಕಿ ಕೊರತೆ ಕಾರಣದಿಂದ 5 ಕೆ.ಜಿ ಅಕ್ಕಿ ಬದಲು ಪ್ರತಿ ಕೆ.ಜಿಗೆ ₹ 34ರಂತೆ ಪಡಿತರ ಚೀಟಿಯಲ್ಲಿರುವ ಕುಟುಂಬದ ಮುಖ್ಯಸ್ಥರ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ.

ADVERTISEMENT

ಜಿಲ್ಲೆಯಲ್ಲಿ ಇಂದಿಗೂ ಸುಮಾರು 27 ಸಾವಿರ ಅನ್ನಭಾಗ್ಯ ಫಲಾನುಭವಿ ಕುಟುಂಬಗಳು ಬ್ಯಾಂಕ್ ಖಾತೆ ಹೊಂದಿಲ್ಲ. ಖಾತೆ ಹೊಂದಿದ್ದರೂ ಆಧಾರ್ ಜೋಡಣೆ ಆಗಿಲ್ಲ. ಇ–ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಡಿಬಿಟಿ ಮೂಲಕ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆ ಸಾಧ್ಯವಾಗಿಲ್ಲ.

ಫಲಾನುಭವಿಗಳಿಗೆ ಅನ್ನಭಾಗ್ಯದ ಹಣವನ್ನು ಡಿಬಿಟಿ ಮಾಡಲು ಆರಂಭಿಸಿದಾಗ 51 ಸಾವಿರಕ್ಕೂ ಹೆಚ್ಚು ಪಡಿತರ ಚೀಟಿದಾರ ಕುಟುಂಬಗಳು ಇ–ಕೆವೈಸಿ ಮಾಡಿಸಿರಲಿಲ್ಲ. ಇದರಿಂದ ಇವರ ಖಾತೆಗಳಿಗೆ ಹಣ ಜಮೆ ಆಗಿರಲಿಲ್ಲ. ಹಂತ ಹಂತವಾಗಿ ಈ ಬಗ್ಗೆ ಪಡಿತರಚೀಟಿದಾರರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮನವರಿಕೆ ಮಾಡಿಕೊಟ್ಟ ನಂತರ ಇ–ಕೆವೈಸಿ ಪ್ರಕ್ರಿಯೆಗಳು ಹೆಚ್ಚಿದವು. 

ಜಿಲ್ಲೆಯಲ್ಲಿ ಜುಲೈನಲ್ಲಿಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿ ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಮೂಲಕ ಒಟ್ಟು ₹17.85 ಕೋಟಿ ಬಿಡುಗಡೆ ಆಗಿತ್ತು. ಆದರೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಫಲಾನುಭವಿಗಳ ಖಾತೆ ಇ–ಕೆವೈಸಿ ಆಗದ ಕಾರಣ ₹ 14.40 ಕೋಟಿ ಫಲಾನುಭವಿಗಳಿಗೆ ಡಿಬಿಟಿ ಆಗಿದೆ. 

...

‘ಅಂಚೆ ಕಚೇರಿ ಖಾತೆಗೂ ಡಿಬಿಟಿ’

‘ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸಬೇಕು. ಹೀಗೆ ಇ–ಕೆವೈಸಿ ಆಗದ ಫಲಾನುಭವಿಗಳಿಗೆ ಡಿಬಿಟಿ ಸಾಧ್ಯವಾಗುತ್ತಿಲ್ಲ. ಜುಲೈನಲ್ಲಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾದ 51 ಸಾವಿರ ಪಡಿತರಚೀಟಿದಾರರಿಗೆ ಡಿಬಿಟಿ ಸಾಧ್ಯವಾಗಿರಲಿಲ್ಲ. ಈಗ 27 ಸಾವಿರವಿದೆ’ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕರ ಪೂರೈಕೆ ಇಲಾಖೆ ಜಂಟಿ ನಿರ್ದೇಶಕಿ ಪಿ.ಸವಿತಾ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ತಿಂಗಳು ಡಿಬಿಟಿ ಆಗಿದ್ದವರಲ್ಲಿ 1500 ಕಾರ್ಡ್‌ದಾರರ ಹಣ ವಾಪಸ್ ಬಂದಿದೆ. ಕುಟುಂಬದ ಮುಖ್ಯಸ್ಥರು ನಿಧನರಾಗಿದ್ದರೆ ಮತ್ತೊಂದು ಖಾತೆ ತೆರೆದಿದ್ದರೆ ಅಂತಹವರಿಗೆ ಹಣ ತಲುಪದೆ ವಾಪಸ್ ಬಂದಿದೆ. ಬ್ಯಾಂಕ್‌ಗಳಲ್ಲಿ ಜನ ದಟ್ಟಣೆಯ ಕಾರಣದಿಂದ ಖಾತೆ ಮಾಡಿಸಲು ಮತ್ತು ಇ–ಕೆವೈಸಿ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ.

ಬ್ಯಾಂಕ್ ಮಾತ್ರವಲ್ಲ ಅಂಚೆ ಕಚೇರಿಯಲ್ಲಿಯೂ ಖಾತೆ ಆರಂಭಿಸಬಹುದು. ಆ ಖಾತೆಗೆ ಆಧಾರ್ ಲಿಂಕ್ ಮಾಡಿದರೆ ಹಣ ಡಿಬಿಟಿ ಆಗುತ್ತದೆ. ಸುಮಾರು ಜನರು ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವ ಮೂಲಕ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.