ADVERTISEMENT

ಆಮಿಷಗಳಿಗೆ ಒಳಗಾಗಿ ಅಭ್ಯರ್ಥಿಗಳಿಗೆ ಮತ ಹಾಕುವುದು ಅನೀತಿ: ಪ್ರೊ.ಕೆ.ಎಂ.ಜಯರಾಮಯ್ಯ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2021, 11:30 IST
Last Updated 30 ಡಿಸೆಂಬರ್ 2021, 11:30 IST
ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ. ವಿದ್ಯಾಸಂಸ್ಥೆಯ ಆವರಣದಲ್ಲಿ ಗುರುವಾರ ಮತದಾರರ ಸ್ವಾಭಿಮಾನದ ಆಂದೋಲನದ ಅಡಿಯಲ್ಲಿ ನಡೆದ “ಮತದಾರರ ಜಾಗೃತಿ ಸಮಾವೇಶ” ಕಾರ್ಯಕ್ರಮದಲ್ಲಿ ಮತದಾರರ ಸ್ವಾಭಿಮಾನದ ರೂವಾರಿ ಪ್ರೊ.ಕೆ.ಎಂ.ಜಯರಾಮಯ್ಯ ಮಾತನಾಡಿದರು
ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ. ವಿದ್ಯಾಸಂಸ್ಥೆಯ ಆವರಣದಲ್ಲಿ ಗುರುವಾರ ಮತದಾರರ ಸ್ವಾಭಿಮಾನದ ಆಂದೋಲನದ ಅಡಿಯಲ್ಲಿ ನಡೆದ “ಮತದಾರರ ಜಾಗೃತಿ ಸಮಾವೇಶ” ಕಾರ್ಯಕ್ರಮದಲ್ಲಿ ಮತದಾರರ ಸ್ವಾಭಿಮಾನದ ರೂವಾರಿ ಪ್ರೊ.ಕೆ.ಎಂ.ಜಯರಾಮಯ್ಯ ಮಾತನಾಡಿದರು   

ಶಿಡ್ಲಘಟ್ಟ: ರಾಜಕಾರಣ ಉದ್ಯೋಗ ಅಥವಾ ದುಡಿಮೆಯಲ್ಲ, ಅದೊಂದು ಸಮಾಜಸೇವೆ. ಪ್ರಜಾತಂತ್ರ ವ್ಯವಸ್ಥೆ ಎಷ್ಟೊಂದು ಹದಗೆಟ್ಟಿದೆಯೆಂದರೆ ಜನಸಾಮಾನ್ಯರು ಜನಪ್ರತಿನಿಧಿ ಆಗದಂತಾಗಿದೆ. ಅಮೂಲ್ಯವಾದ ಮತದಾನದ ಹಕ್ಕನ್ನು ಮಾರಿಕೊಳ್ಳುತ್ತಿರುವುದರಿಂದ ದಳ್ಳಾಳಿಗಳು ಎಂ.ಎಲ್.ಎ ಆಗುತ್ತಿದ್ದಾರೆ. ಈ ನೀತಿಗೆಟ್ಟ ರಾಜಕಾರಣವನ್ನು ಸಹಿಸಲಾಗದು ಎಂದು ಮತದಾರರ ಸ್ವಾಭಿಮಾನದ ರೂವಾರಿ ಪ್ರೊ.ಕೆ.ಎಂ.ಜಯರಾಮಯ್ಯ ತಿಳಿಸಿದರು.

ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ. ವಿದ್ಯಾಸಂಸ್ಥೆಯ ಆವರಣದಲ್ಲಿ ಗುರುವಾರ ಮತದಾರರ ಸ್ವಾಭಿಮಾನದ ಆಂದೋಲನದ ಅಡಿಯಲ್ಲಿ ನಡೆದ “ಮತದಾರರ ಜಾಗೃತಿ ಸಮಾವೇಶ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಣ, ಮದ್ಯ ಮತ್ತು ಇತರ ಉಡುಗೊರೆಯ ಆಮಿಷಗಳಿಗೆ ಒಳಗಾಗಿ ಚುನಾವಣಾ ಅಭ್ಯರ್ಥಿಗಳಿಗೆ ಮತ ಹಾಕುವುದು ಅನೀತಿಯ ರಾಜಕಾರಣ. ರಾಜಕಾರಣ ಇಂತಹ ಕೆಟ್ಟ ಸ್ಥಿತಿ ತಲುಪುವುದನ್ನು ನಾವು ನೋಡಿಕೊಂಡು ಇರುವುದು ಹೇಗೆ? ಈಗ ನಮ್ಮಲ್ಲಿ ಉಳಿದಿರುವ ದಾರಿ ಎಂದರೆ ಜನರ ಬಳಿ ಹೋಗಿ ನಮ್ಮ ಮತವನ್ನು ಮಾರಿಕೊಳ್ಳುವುದು ಬೇಡ. ಪ್ರತಿಯೊಂದು ಮತ ಅಮೂಲ್ಯವಾದದ್ದು ಎಂದು ತಿಳಿ ಹೇಳುವ ಆಂದೋಲನ ಪ್ರಾರಂಭಿಸುವುದು ಇಂದಿನ ಅಗತ್ಯವಾಗಿದೆ. ಭಕ್ತರಹಳ್ಳಿಯಿಂದ ಪ್ರಾರಂಭವಾದ ಈ ಆಂದೋಲನ ರಾಜ್ಯದಾದ್ಯಂತ ಮುಂದುವರೆಸಲಾಗುವುದು ಎಂದರು.

ADVERTISEMENT

ಹದಿನೆಂಟು ವರ್ಷ ಮೇಲ್ಪಟ್ಟ ಯುವಕರ ಮತಕ್ಕೆ ಹಣ ನೀಡಿ ಅವರನ್ನು ಭ್ರಷ್ಟರನ್ನಾಗಿ ಮಾಡಿದರೆ, ಮುಂದೆ ದೇಶದ ಭವಿಷ್ಯವೇನು. ನೈತಿಕತೆ ಅಧಃಪತನವಾದರೆ ಮುಂದಿನ ಕತೆಯೇನು. ಆಮಿಷಕ್ಕೆ ಬಲಿಯಾದರೆ ಜನಪ್ರತಿನಿಧಿಯನ್ನು ಪ್ರಶ್ನಿಸಲು ಆಗದು. ಹಣ ಹಂಚುವವರು ಮುಂದೆ ಗೆದ್ದು ಹಣ ಲೂಟಿ ಮಾಡುತ್ತಾರೆ. ಮತವನ್ನು ಮಾರಿಕೊಳ್ಳಬೇಡಿ ಎಂಬ ಆದೋಲನದ ಮೂಲಕ ಪ್ರಜಾತಂತ್ರವನ್ನು ಸದೃಢಗೊಳಿಸುವ ಪ್ರಯತ್ನಕ್ಕೆ ಕೈಹಾಕಿದ್ದೇವೆ ಎಂದು ಹೇಳಿದರು.

ಜನಪ್ರತಿನಿಧಿಗಳು ಲಜ್ಜೆಗೆಟ್ಟವರು ಎಂದು ಗುತ್ತಿಗೆದಾರರೇ ಹೇಳಿದ್ದಾರೆ. ಈ ನೀತಿಗೆಟ್ಟ ರಾಜಕಾರಣಕ್ಕೆ ಕಡಿವಾಣ ಹಾಕಬೇಕು. ಪ್ರತಿಯೊಬ್ಬರೂ ಮನಸ್ಸು ಮಾಡಬೇಕು. ಆಮಿಷಗಳಿಗೆ ಬಲಿಯಾಗದಿದ್ದಾಗ ಮಾತ್ರ ಉತ್ತಮ ವ್ಯವಸ್ಥೆ ರೂಪುಗೊಳ್ಳಲು ಸಾಧ್ಯ. ಈ ಕಿಡಿಯು ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಹೊತ್ತಿಸುವ ಉದ್ದೇಶ ನಮ್ಮದು ಎಂದರು.

ಸಮಾಜವಾದಿ ಹಾಗೂ ರೈತ ಮುಖಂಡ ಎನ್.ಜಿ.ರಾಮಚಂದ್ರ ಮಾತನಾಡಿ, ನಮ್ಮಗಳ ಬದುಕನ್ನು ರೂಪಿಸುವ, ಸಂರಕ್ಷಣೆಗಾಗಿಯೇ ಇರುವ ಮತದಾನದ ಹಕ್ಕನ್ನು ಮಾರಾಟಕ್ಕೆ ಇಡಬಾರದು. ಇದು ಮಾರುವ ಸರಕಲ್ಲ. ನಮ್ಮ ಬದುಕು ಸಂಸ್ಕೃತಿಯನ್ನು ಕಾಪಾಡುವ ಹಕ್ಕು. ಮತವನ್ನು ಮಾರಿಕೊಳ್ಳುವುದರಿಂದ ಶಾಸಕರು, ಸಂಸದರು ಸರ್ಕಾರಿ ಇಲಾಖೆಗಳನ್ನು ಪರ್ಸೆಂಟೇಜ್ ಕೊಡುವ ಏಜೆನ್ಸಿಗಳಂತೆ ಬಳಸಿಕೊಳ್ಳುತ್ತಿದ್ದಾರೆ. ನಾವು ದುರ್ಬಲರಾಗುತ್ತಾ ಸಾಗುತ್ತಿದ್ದೇವೆ. ಜನತಂತ್ರದಲ್ಲಿ ಜನಸಾಮಾನ್ಯನೊಬ್ಬ ಚುನಾವಣೆಯಲ್ಲಿ ಸ್ಪರ್ಧಿಸದಂತಾಗಿರುವುದು ದುರ್ದೈವ ಎಂದು ಹೇಳಿದರು.

ಮೈಸೂರು ಬದುಕು ಟ್ರಸ್ಟ್ ನ ನಿರ್ದೇಶಕ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಇ.ಧನಂಜಯ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಯಾವ ಆಮಿಷಕ್ಕೂ ಒಳಗಾಗುವುದಿಲ್ಲ ಎಂಬ ನಿರ್ಧಾರಕ್ಕೆ ನಾವೆಲ್ಲಾ ಬರೋಣ. ಗ್ರಾಮ ಸ್ವರಾಜ್ಯದ ಪರಿಕಲ್ಪನೆಗೆ ಅರ್ಥ ಬರಲು ಮತ ಮಾರಿಕೊಳ್ಳಬಾರ್ದೆಂದು ಸಂಕಲ್ಪ ತೊಡೋಣ ಎಂದರು.

ಬಿ.ಎಂ.ವಿ. ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಭಕ್ತರಹಳ್ಳಿಯ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಈ ಸಮಾವೇಶದಲ್ಲಿ ಭಾಗಿಯಾಗಿದ್ದರು.

ಬಿ.ಎಂ.ವಿ. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ, ಟ್ರಸ್ಟಿ ಸಂತೆ ನಾರಾಯಣಸ್ವಾಮಿ, ಮುಖ್ಯ ಶಿಕ್ಷಕರಾದ ಪಂಚಮೂರ್ತಿ, ವೆಂಕಟಮೂರ್ತಿ ಹಾಜರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.