ADVERTISEMENT

ಒಳ ಮೀಸಲಾತಿಯಿಂದ ಅನ್ಯಾಯ ಸರಿಪಡಿಸಲಿ

ಜಿಲ್ಲೆಯಲ್ಲಿ ಮಾದಿಗ ಚೈತನ್ಯ ರಥ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 13:23 IST
Last Updated 20 ಜನವರಿ 2021, 13:23 IST
ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಸದಾಶಿವ ವರದಿ ಜಾರಿ ಹೋರಾಟ ಸಮಿತಿ ಮಹಾ ಸಂಚಾಲಕ ಹೆಣ್ಣೂರು ಲಕ್ಷ್ಮೀನಾರಾಯಣ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಸದಾಶಿವ ವರದಿ ಜಾರಿ ಹೋರಾಟ ಸಮಿತಿ ಮಹಾ ಸಂಚಾಲಕ ಹೆಣ್ಣೂರು ಲಕ್ಷ್ಮೀನಾರಾಯಣ ಅವರು ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಉಪಜಾತಿಗಳು ಇವೆ. ಕಡಿಮೆ ಸಂಖ್ಯೆಯಲ್ಲಿ ಇರುವವರಿಗೆ ಹೆಚ್ಚು ಅವಕಾಶಗಳು, ಹೆಚ್ಚು ಸಂಖ್ಯೆಯಲ್ಲಿ ಇರುವವರಿಗೆ ಕಡಿಮೆ ಅವಕಾಶಗಳು ದೊರೆಯುತ್ತಿವೆ. ಜನಸಂಖ್ಯೆಗೆ ಅನುಗುಣವಾಗಿ ಮಾದಿಗರಿಗೆ ಯಾವ ಕ್ಷೇತ್ರಗಳಲ್ಲಿಯೂ ಅವಕಾಶಗಳು ದೊರೆಯುತ್ತಿಲ್ಲ. ಒಳ ಮೀಸಲಾತಿಯಿಂದ ಈ ಅನ್ಯಾಯ ಸರಿಪಡಿಸಬೇಕು’ ಎಂದು ನ್ಯಾಯಮೂರ್ತಿ ಸದಾಶಿವ ವರದಿ ಜಾರಿ ಹೋರಾಟ ಸಮಿತಿ ಮಹಾ ಸಂಚಾಲಕ ಹೆಣ್ಣೂರು ಲಕ್ಷ್ಮೀನಾರಾಯಣ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಆಯೋಜಿಸಿದ್ದ ಮಾದಿಗ ಚೈತನ್ಯ ರಥ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ರಾಜ್ಯವನ್ನು ಆಳ್ವಿಕೆ ಮಾಡಿದ ಕಾಂಗ್ರೆಸ್, ಬಿಜೆಪಿ,ಜೆಡಿಎಸ್ ಪಕ್ಷಗಳು ಮಾದಿಗ ಜನಾಂಗಕ್ಕೆ ಮೋಸ ಮಾಡುತ್ತ ಬಂದಿವೆ. ಮಾದಿಗರ ಜನಸಂಖ್ಯೆ ನೋಡಿ ಬಿಜೆಪಿ ಸರ್ಕಾರ ಗೋವಿಂದ ಕಾರಜೋಳ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಿದ್ದಾರೆ’ ಎಂದು ಹೇಳಿದರು.

‘ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಒಳ ಮೀಸಲಾತಿ ಜಾರಿಮಾಡುತ್ತೇವೆ ಎನ್ನುತ್ತ ಮೂಗಿಗೆ ತುಪ್ಪ ಸವರುತ್ತ ಬಂದಿವೆ. ಒಳ ಮೀಸಲಾತಿ ಜಾರಿಯಾದರೆ ಮಾದಿಗರಿಗೆ ಹೆಚ್ಚು ಅವಕಾಶಗಳು ಸಿಕ್ಕುತ್ತವೆ ಎನ್ನುವುದು ತಪ್ಪು ಅಭಿಪ್ರಾಯ. ಮೀಸಲಾತಿ ಅವಕಾಶ ಒಂದೇ ಜಾತಿಯ ಕೈಯಲ್ಲಿ ಕೇಂದ್ರೀಕೃತ ಆಗಬಾರದು. ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಮಾದಿಗರಿಗಿಂತ ಕೆಳಮಟ್ಟದಲ್ಲಿ ಇರುವ ಅಥವಾ ಇನ್ನೂ ಗುರುತಿಸಲು ಸಾಧ್ಯವಾಗದೆ ಅಪಮಾನದಿಂದಲೇ ಬದುಕುತ್ತಿರುವ ಜಾತಿಗಳನ್ನು ಗುರುತಿಸಿ ಒಳ ಮೀಸಲಾತಿ ನೀಡಬೇಕು’ ತಿಳಿಸಿದರು.

ADVERTISEMENT

‘ರಾಜ್ಯಗಳು ಒಳ ಮೀಸಲಾತಿ ಜಾರಿ ಮಾಡಬಹುದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಆದರೆ, ರಾಜ್ಯ ಸರ್ಕಾರಗಳು ಒಳ ಮೀಸಲಾತಿ ಜಾರಿ ಮಾಡದೆ ಮಾದಿಗರನ್ನು ಕೆರಳುವಂತೆ ಮಾಡುತ್ತಿದೆ. ಆದ್ದರಿಂದ, ಮಾರ್ಚ್ 8 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅದರ ಭಾಗವಾಗಿ ರಾಜ್ಯದಾದ್ಯಂತ ಮಾದಿಗ ಚೈತನ್ಯ ರಥ ಯಾತ್ರೆ ಪ್ರಾರಂಭ ಮಾಡಲಾಗುತ್ತಿದೆ’ ಎಂದರು.

ನ್ಯಾಯಮೂರ್ತಿ ಸದಾಶಿವ ವರದಿ ಜಾರಿ ಹೋರಾಟ ಸಮಿತಿಯ ಮುಖಂಡ ಎ.ಹರಿರಾಮ್ ಮಾತನಾಡಿ, ‘ಎಲ್ಲಾ ವರ್ಗದ ಜನರಿಗೆ ಸಮಾನ ಅವಕಾಶಗಳು ಸಿಕ್ಕಾಗ ಮಾತ್ರ ನಮ್ಮ ದೇಶ ಅಭಿವೃದ್ಧಿಯಾಗಲು ಸಾಧ್ಯ. ಈ ದೇಶದಲ್ಲಿ ಅನೇಕ ಜಾತಿಗಳು ಇಂದಿಗೂ ಮೂಲಭೂತ ಹಕ್ಕುಗಳಿಂದ ವಂಚಿತವಾಗಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಸ್ಪೃಶ್ಯತೆ ಆಚರಣೆ ಅಪರಾಧ ಎಂದು ನಮ್ಮ ಸಂವಿಧಾನ ಹೇಳುತ್ತದೆ. ಆದರೆ ನಮ್ಮ ಸಾಮಾಜಿಕ ಪರಿಸ್ಥಿತಿಯಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ. ಈಗಲೂ ದಲಿತರಿಗೆ ದೇವಾಲಯಗಳಿಗೆ ಪ್ರವೇಶ ನೀಡುವುದಿಲ್ಲ. ಗ್ರಾಮಗಳಲ್ಲಿ ನೀರು ಕೊಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಮಾನತೆ ತರುವುದು ಕಷ್ಟದ ಕೆಲಸ’ ಎಂದು ಹೇಳಿದರು.

‘ಇವತ್ತು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ, ಆದರೆ ಸಾಮಾಜಿಕವಾಗಿ ಅತ್ಯಂತ ಹೀನಾಯ ಸ್ಥಿತಿಯಲ್ಲಿರುವ ಜಾತಿಗಳಿಗೆ ಆದ್ಯತೆ ನೀಡಬೇಕು. ಅದಕ್ಕೆ ಒಳಮೀಸಲಾತಿ ಜಾರಿಯಾಗಬೇಕು. ಒಳಮೀಸಲಾತಿ ನೀಡುವುದರಿಂದ ಎಲ್ಲರಲ್ಲಿಯೂ ಸಮಾನತೆ ಬರುತ್ತದೆ. ಸಮಾನ ಅವಕಾಶ ಒದಗುತ್ತದೆ. ಇದರಿಂದ ಯಾರೂ ಯಾರನ್ನೂ ದ್ವೇಷಿಸುವ ಸಂದರ್ಭ ಇಲ್ಲ. ಯಾರ ಬಗ್ಗೆ ಅಸೂಯೆ ಪಡುವ ಕಾರಣಗಳೂ ಇಲ್ಲ. ಸಿಟ್ಟಿಗೂ ಅವಕಾಶ ಇಲ್ಲ’ ಎಂದರು.

ಹೋರಾಟ ಸಮಿತಿಯ ಮುಖಂಡರಾದ ಹೊಸಕೋಟೆಯ ಸುಬ್ಬರಾಜು, ನಾಗರಾಜು, ಸಂದೀಪ್ ಚಕ್ರವರ್ತಿ, ರಾಜಶೇಖರ್, ನಾರಾಯಣಸ್ವಾಮಿ, ಮಂಜುನಾಥ್, ವಕೀಲರಾದ ಎನ್ ದಿಲಿಪ್ ಕುಮಾರ್, ಮುನಿರಾಜು, ಉಪನ್ಯಾಸಕ ಪಿ. ಶ್ರೀನಿವಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.