ADVERTISEMENT

ಲೋಕಸಭಾ ಚುನಾವಣೆ: ಸಿಪಿಎಂ ಪ್ರಣಾಳಿಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 13:26 IST
Last Updated 13 ಏಪ್ರಿಲ್ 2024, 13:26 IST
ಬಾಗೇಪಲ್ಲಿಯಲ್ಲಿ ಸಿಪಿಎಂ ಮುಖಂಡರು ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು
ಬಾಗೇಪಲ್ಲಿಯಲ್ಲಿ ಸಿಪಿಎಂ ಮುಖಂಡರು ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು   

ಬಾಗೇಪಲ್ಲಿ: ಲೋಕಸಭಾ ಚುನಾವಣೆಗೆ ಸಿಪಿಎಂ ಅಭ್ಯರ್ಥಿ ಎಂ.ಪಿ.ಮುನಿವೆಂಕಟಪ್ಪ ಸ್ಪರ್ಧೆ ಮಾಡುತ್ತಿದ್ದು, ಇದರ ಭಾಗವಾಗಿ ಪಕ್ಷದಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜು ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಸಿಪಿಎಂ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಭಾರತ ಗಣರಾಜ್ಯವು ಪ್ರಸ್ತುತವಾಗಿ ಅಸ್ತಿತ್ವದ ಬೆದರಿಕೆ ಎದುರಿಸುತ್ತಿದೆ. ಸಂವಿಧಾನದ ಪ್ರಕಾರ ಭಾರತ ಗಣರಾಜ್ಯದ ಸ್ವರೂಪ, ರಕ್ಷಣೆಯನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು ಎಂದರು.

ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಸೋಲಿಸಲು, ಸಂಸತ್ತಿನಲ್ಲಿ ಸಿಪಿಎಂ ಮತ್ತು ಎಡಪಕ್ಷಗಳ ಸ್ಥಾನ ಹೆಚ್ಚಿಸಿ ಕೇಂದ್ರದಲ್ಲಿ ಪರ್ಯಾಯ ಜಾತ್ಯತೀತ ಸರ್ಕಾರ ರಚನೆ ಆದಾಗ ಮಾತ್ರ ದೇಶ ಉಳಿಯಲಿದೆ. ಜಾತ್ಯತೀತ, ಪ್ರಜಾಸತ್ತಾತ್ಮಕ ಅಸ್ತಿತ್ವಕ್ಕೆ ಪ್ರಧಾನ ಮಂತ್ರಿ ನರೇಂದ್ರಮೋದಿ ಧಕ್ಕೆ ತಂದಿದ್ದಾರೆ ಎಂದರು.

ADVERTISEMENT

ಸರ್ಕಾರವು ದೇಶದಲ್ಲಿ ಕಾರ್ಮಿಕರ ಹಕ್ಕುಗಳನ್ನು ನಾಶಮಾಡಲು ಫ್ಯಾಸಿಸ್ಟ್ ವಿಧಾನ ಅನುಸರಿಸಿದೆ. ಮತಾಂಧ ಸಿದ್ಧಾಂತಗಳನ್ನು ಬಳಸಿಕೊಂಡು ಜನರನ್ನು ಧಾರ್ಮಿಕ ಮಾರ್ಗಗಳಲ್ಲಿ ವಿಭಜಿಸುತ್ತಿದೆ ಎಂದರು.

ರಾಜ್ಯದ ಪೈಕಿ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಗೆ ಮಾತ್ರ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ಅಭ್ಯರ್ಥಿ ಎಂ.ಪಿ.ಮುನಿವೆಂಕಟಪ್ಪ ಅವರನ್ನು ಮತದಾರರು ಬೆಂಬಲಿಸಬೇಕು ಎಂದರು.

ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಕೆ.ಎನ್.ಉಮೇಶ್ ಮಾತನಾಡಿ, ಬಿಜೆಪಿಯನ್ನು ಸೋಲಿಸಲು, ಎಡಪಕ್ಷಗಳನ್ನು ಬಲಪಡಿಸಲು ಮತ್ತು ಕೇಂದ್ರದಲ್ಲಿ ಪರ್ಯಾಯ ಜಾತ್ಯತೀತ ಸರ್ಕಾರ ರಚನೆ ಆಗಲು ಸಿಪಿಎಂ ಬೆಂಬಲಿಸುವಂತೆ ಮತದಾರರಿಗೆ ಮನವಿ ಮಾಡಿದರು.

ಸಿಪಿಎಂ ಅಭ್ಯರ್ಥಿ ಎಂ.ಪಿ.ಮುನಿವೆಂಕಟಪ್ಪ, ತಾಲ್ಲೂಕು ಕಾರ್ಯದರ್ಶಿ ಎಂ.ಎನ್. ರಘುರಾಮರೆಡ್ಡಿ, ಮುಖಂಡ ಡಾ.ಅನಿಲ್ ಕುಮಾರ್, ಸಾವಿತ್ರಮ್ಮ, ಬಿಳ್ಳೂರು ನಾಗರಾಜು, ದೇವಿಕುಂಟೆ ಶ್ರೀನಿವಾಸ್, ಮುನಿಕೃಷ್ಣಪ್ಪ, ಸಿದ್ದಗಂಗಪ್ಪ, ಅಶ್ವತ್ಥಪ್ಪ, ಜಯರಾಮರೆಡ್ಡಿ, ಜಿ.ಕೃಷ್ಣಪ್ಪ, ಮುನಿಯಪ್ಪ, ಸೋಮಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.