
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರ ಯೋಜನಾ ಪ್ರಾಧಿಕಾರ ಮತ್ತು ನಗರಸಭೆಯಲ್ಲಿ ಅವ್ಯವಹಾರಗಳು ನಡೆದಿವೆ ಎಂದು ಆರೋಪಿಸಿರುವ ನಗರಸಭೆ ಮಾಜಿ ಸದಸ್ಯ ಮಹಮ್ಮದ್ ಸಾದಿಕ್ ಅವರು ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ದೂರಿನ ಜೊತೆಗೆ 351 ಪುಟಗಳ ಅಡಕಗಳನ್ನೂ ಸಲ್ಲಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರ ಯೋಜನಾ ಪ್ರಾಧಿಕಾರದ ಆಯುಕ್ತರು, ನಗರಸಭೆ ಆಯುಕ್ತರು, ಚಿಕ್ಕಬಳ್ಳಾಪುರ ಉಪನೋಂದಣಾಧಿಕಾರಿ ಮತ್ತು ನಗರಸಭೆ ಸದಸ್ಯ ಎಸ್.ಎಂ.ರಫೀಕ್ ಅವರ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೆ ತಾವು ಆರೋಪಿಸಿರುವ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ದಸ್ತಾವೇಜುಗಳನ್ನೂ ಸಲ್ಲಿಸಿದ್ದಾರೆ.
ಸರ್ಕಾರದ ಆದೇಶ ಉಲ್ಲಂಘನೆ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಇ–ಆಸ್ತಿ ತಂತ್ರಾಂಶವನ್ನು ಕಾವೇರಿ–2 ತಂತ್ರಾಂಶದೊಂದಿಗೆ ಸಂಯೋಜನೆಗೊಳಿಸಲು ಹಾಗೂ ಇ–ಆಸ್ತಿ ತಂತ್ರಾಂಶದಿಂದ ಮಾತ್ರ ಮಾಹಿತಿ ಪಡೆದು ನೋಂದಾಯಿಸಲು ಸರ್ಕಾರ ಆದೇಶಿಸಿದೆ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಯನ್ನು ಇ–ಆಸ್ತಿ ತಂತ್ರಾಂಶದಿಂದ ಮಾಹಿತಿ ಪಡೆಯದೆ ಬೇರೆ ಯಾವುದೇ ವಿಧಾನದಲ್ಲಿ ನೋಂದಣಿ ಮಾಡಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿ, ನೌಕರರ ವಿರುದ್ಧ ಕಾನೂನಿನ ಅನ್ವಯ ಕ್ರಮ ಹಾಗೂ ಇಲಾಖಾ ವಿಚಾರಣೆ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆದರೆ ಈ ಆದೇಶಗಳು ಉಲ್ಲಂಘನೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಸರ್ಕಾರದ ಆದೇಶದ ಪ್ರತಿಯನ್ನೂ ದೂರಿನೊಂದಿಗೆ ಅಡಕಗೊಳಿಸಲಾಗಿದೆ.
ಯಾವುದೇ ಸ್ಥಿರಾಸ್ತಿಗಳನ್ನು ನೋಂದಣಿ ಮಾಡಬೇಕಿದ್ದಲ್ಲಿ ಇ–ಆಸ್ತಿ ತಂತ್ರಾಂಶ ಕಾವೇರಿ–2ನಿಂದ ಮಾಹಿತಿ ಪಡೆದು ನೋಂದಾಯಿಸಲು ಸರ್ಕಾರ ಆದೇಶಿಸಿದೆ. ಪಿಐಡಿ ನಂಬರ್ ಕಡ್ಡಾಯ. ಪೌರಾಯುಕ್ತರು 2024ರ ಅ.24ರಿಂದ 12 ತಿಂಗಳಲ್ಲಿ ಎರಡು ಮೂರರಂತೆ ಸರಿ ಸುಮಾರು 19 ನಗರಾಭಿವೃದ್ಧಿ ಅನುಮೋದಿತ ಅಂತಿಮ ವಿನ್ಯಾಸದ ನಿವೇಶನಗಳಿಗೆ ಇ–ಆಸ್ತಿ ತಂತ್ರಾಂಶದ ಮಾಹಿತಿ ಪಡೆದು ಪಿಐಡಿ ನಂಬರ್ ನೀಡಿ ಖಾತೆ ಮಾಡಿದ್ದಾರೆ.
ಆದರೆ ಅದೇ 19 ಅಂತಿಮ ವಿನ್ಯಾಸ ನಕ್ಷೆಯಲ್ಲಿರುವ ಸರ್ಕಾರಿ ಉದ್ಯಾನ ಅಥವಾ ಸರ್ಕಾರಿ ರಸ್ತೆಗಳಿಗೆ ಕಾವೇರಿ ಇ–ಆಸ್ತಿ ತಂತ್ರಾಂಶದಿಂದ ಮಾಹಿತಿ ಪಡೆಯದೆ, ಪಿಐಡಿ ನಂಬರ್ ನೀಡದೆ, ಚಕ್ಕುಬಂದಿ ನಮೂದಿಸದೆ ಪೌರಾಯುಕ್ತರು ಪರಿತ್ಯಾಜ್ಯನಾ ಪತ್ರಗಳನ್ನು ನೋಂದಾಯಿಸಿಕೊಂಡಿದ್ದಾರೆ. ಇದು ಸರ್ಕಾರದ ಆದೇಶದ ಸ್ಪಷ್ಟ ಉಲ್ಲಂಘನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಈ ಬಗ್ಗೆ ನಗರಸಭೆಯು ನಿರ್ವಹಿಸಿರುವ ಆಸ್ತಿವಹಿ (ಪ್ರಾಪರ್ಟಿ ರಿಜಿಸ್ಟರ್) ಪರಿಶೀಲಿಸಲು ಲೋಕಾಯುಕ್ತರನ್ನು ಕೋರಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಸಹ ಮೇಲೆ ಹೇಳಿರುವ 19 ಅನುಮೋದಿತ ಅಂತಿಮ ವಿನ್ಯಾಸ ನಕ್ಷೆಯಲ್ಲಿ ನಾಗರಿಕ ಸೇವಾ ನಿವೇಶನದ ಸಂಖ್ಯೆ ನೀಡಿಲ್ಲ. ನೋಂದಣಿಯಾದ ಪರಿತ್ಯಾಜ್ಯನಾ ಪತ್ರಗಳಲ್ಲಿ ಈಗಿನ ಕಾನೂನಿನಂತೆ ಕಾವೇರಿ ತಂತ್ರಾಶದಿಂದ ಮಾಹಿತಿ ಪಡೆಯದೆ ನಗರಸಭೆಯಿಂದ ಪಿಐಡಿ ನಂಬರ್ ಪಡೆಯದೆ ಹಾಗೂ ಚಕ್ಕುಬಂದಿ ನಮೂದಿಸದೆ ಸರ್ಕಾರಿ ಆದೇಶಗಳನ್ನು ಗಾಳಿಗೆ ತೂರಿ ಪರಿತ್ಯಾಜ್ಯನಾ ಪತ್ರ ನೋಂದಾಯಿಸಿದ್ದಾರೆ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ. ಇದು ನಾಮಕಾವಸ್ತೆ ಎಂದು ಕಾಣುತ್ತಿದ್ದು ಸರ್ಕಾರಿ ಆದೇಶದ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರದಿಂದ ಅನುಮೋದಿಸಲಾಗಿರುವ ಬಡಾವಣೆಗಳಲ್ಲಿ ನಾಗರಿಕ ಸೇವಾ ನಿವೇಶನ (ಸಿ.ಎ ನಿವೇಶನ) ವಿವರಗಳ ಆಸ್ತಿ ಪುಸ್ತಕದಲ್ಲಿ ನಮೂದಿಸಿರುವ ನಾಗರಿಕ ಸೇವಾ ಮೀಸಲು ನಿವೇಶಗಳು ಎಷ್ಟು ಮತ್ತು ಯಾವ ಅಳತೆಯವು, ಕಾನೂನಿನ ಅನ್ವಯ ಮರು ಹಂಚಿಕೆ ಮಾಡಿರುವ ಬಗ್ಗೆ ಮಾಹಿತಿ ತರಿಸಿಕೊಂಡು ಪರಿಶೀಲಿಸಬೇಕು ಎಂದು ಸಾದಿಕ್ ಲೋಕಾಯುಕ್ತರನ್ನು ಕೋರಿದ್ದಾರೆ.
ನಗರಸಭೆ ಸದಸ್ಯ ಕೆಲವು ಸಿಬ್ಬಂದಿಯ ವಿರುದ್ಧ ಗಂಭೀರ ಆರೋಪಗಳನ್ನು ಸಹ ದೂರಿನಲ್ಲಿ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆಯೂ ಮನವಿ ಮಾಡಿದ್ದಾರೆ.
‘ಸರ್ಕಾರಿ ಆಸ್ತಿ ರಕ್ಷಣೆ ಅಗತ್ಯ’
ಚಿಕ್ಕಬಳ್ಳಾಪುರ ನಗರಸಭೆ ಮತ್ತು ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದಲ್ಲಿ ಅಕ್ರಮಗಳು ನಡೆದಿವೆ. ಈ ಬಗ್ಗೆ ನಾಗರಿಕರು ಧ್ವನಿ ಎತ್ತಬೇಕು. ಸರ್ಕಾರಿ ಆಸ್ತಿಗಳ ರಕ್ಷಣೆಗೆ ಮುಂದಾಗಬೇಕು’ ಎಂದು ಮಹಮ್ಮದ್ ಸಾದಿಕ್ ‘ಪ್ರಜಾವಾಣಿ’ಗೆ ತಿಳಿಸಿದರು. ಕೆಲವು ಕಡತಗಳನ್ನು ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದೇನೆ. ಆದರೆ ಆ ಕಡತಗಳನ್ನು ನೀಡುವರೇ ಇಲ್ಲವೇ ನೋಡಬೇಕು. ಬೀದಿ ದೀಪ ನಿರ್ವಹಣೆ ಸೇರಿದಂತೆ ಬಹಳಷ್ಟು ವಿಚಾರದಲ್ಲಿ ಸರ್ಕಾರದ ನೀತಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು. ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಲೋಕಾಯುಕ್ತರಿಗೆ ದೂರು ನೀಡಿದ್ದೇನೆ. ಹುಳುಕುಗಳು ಹೊರಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರಿ ಆಸ್ತಿಗಳಿಗೆ ಫಲಕಗಳೇ ಇಲ್ಲ!
ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿಗೊಂಡಿರುವ ಬಡಾವಣೆಗಳಲ್ಲಿನ ಸಿಎ ನಿವೇಶನಗಳು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುತ್ತವೆ. ಉದ್ಯಾನಗಳು ನಗರಸಭೆ ಒಡೆತನಕ್ಕೆ ಸೇರುತ್ತವೆ. ಆದರೆ ಪ್ರಾಧಿಕಾರದಿಂದ ಅನುಮೋದನೆ ಪಡೆದ ಬಡಾವಣೆಗಳಲ್ಲಿನ ಈ ಸರ್ಕಾರಿ ಆಸ್ತಿಗಳಲ್ಲಿ ‘ಇದು ಸರ್ಕಾರಿ ಆಸ್ತಿ’ ಎನ್ನುವ ಫಲಕಗಳೇ ಇಲ್ಲ. ಸರ್ಕಾರಿ ಸಂಸ್ಥೆಗಳೇ ತಮ್ಮ ಆಸ್ತಿಗಳ ರಕ್ಷಣೆಯ ವಿಚಾರವಾಗಿ ನಿರ್ಲಕ್ಷ್ಯ ತೋರುತ್ತಿರುವುದು ನಾನಾ ರೀತಿಯ ಅನುಮಾನಗಳಿಗೆ ಕಾರಣವಾಗಿದೆ. ಬಲಾಢ್ಯರು ಈ ಸರ್ಕಾರಿ ಸ್ವತ್ತುಗಳನ್ನು ಅತಿಕ್ರಮಿಸುವ ಅವಕಾಶಗಳೂ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.