ADVERTISEMENT

ಶಿಡ್ಲಘಟ್ಟ: ಲಂಡನ್‌ ಸ್ಥಿತಿಗತಿ ತೆರೆದಿಟ್ಟ ವೈದ್ಯ ದಂಪತಿ

‘ಪ್ರಜಾವಾಣಿ‘ಯೊಂದಿಗೆ ಅನುಭವ ಹಂಚಿಕೊಂಡ ಡಾ.ಸಿರೀಶ್

ಡಿ.ಜಿ.ಮಲ್ಲಿಕಾರ್ಜುನ
Published 12 ಏಪ್ರಿಲ್ 2020, 19:30 IST
Last Updated 12 ಏಪ್ರಿಲ್ 2020, 19:30 IST
ಡಾ.ಸಿರೀಶ್ ಕುಟುಂಬ
ಡಾ.ಸಿರೀಶ್ ಕುಟುಂಬ   

ಶಿಡ್ಲಘಟ್ಟ: ನಗರದ ದೇಶದಪೇಟೆಯ ನಿವಾಸಿ ಬಿ.ಎಸ್.ಬಸವರಾಜ್ ಅವರ ಮಗ ಡಾ.ಸಿರೀಶ್, ಬ್ರಿಟನ್ ರಾಜಧಾನಿ ಲಂಡನ್‌ನಿಂದ 60 ಮೈಲು ದೂರದ ಬೆಡ್ ಫೋರ್ಡ್‌ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಅಲ್ಲಿನ ತಮ್ಮ ಅನುಭವವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಡಾ.ಸಿರೀಶ್ ಮತ್ತು ಪತ್ನಿ ಡಾ.ಸ್ಮಿತಾ ಇಬ್ಬರೂ ವೈದ್ಯರಾಗಿರುವುದರಿಂದ ಇತರಂತೆ ಮನೆಯಲ್ಲಿಯೇ ಉಳಿದು ಕೆಲಸ ಮಾಡುವಂತಿಲ್ಲ. ತಮ್ಮ ವೈದ್ಯಕೀಯ ಸೇವೆ ಹಾಗೂ ಅಲ್ಲಿನ ಸ್ಥಿತಿಗತಿಗಳ ಕುರಿತ ಕೆಲವು ಸಂಗತಿಗಳನ್ನು ಅವರು ತೆರೆದಿಟ್ಟಿದ್ದಾರೆ.

ವೈದ್ಯಕೀಯ ವೃತ್ತಿ ನಮಗೆ ಒಳ್ಳೆಯದು ಮತ್ತು ಕೆಟ್ಟದ್ದು ಎರಡನ್ನೂ ಪರಿಚಯಿಸುತ್ತದೆ. ಯಾವುದೇ ಸಾವು ನೋವುಗಳಿಲ್ಲದೆ ಕೊರೊನಾ ಸಣ್ಣ ಪ್ರಮಾಣದ ಸಾಂಕ್ರಾಮಿಕ ವ್ಯಾಧಿಯಾಗಲೆಂದು ನಾವೆಲ್ಲಾ ಆಶಿಸಿದ್ದೆವು. ಆದರೆ ಬ್ರಿಟನ್‌ ವಾಸ್ತವ ಕಠೋರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಲಂಡನ್‌ನಲ್ಲಿಯೂ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್ ಡೌನ್ ಜಾರಿಗೊಳಿಸಲಾಗಿದೆ. ನಾವಿಬ್ಬರೂ ವೈದ್ಯರಾಗಿರುವುದರಿಂದ ಕೆಲಸಕ್ಕೆ ಹೋಗಲೇಬೇಕು. ನಮ್ಮ ಕೆಲಸದ ವಾತಾವರಣ ಕೂಡ ಬದಲಾಗಿದೆ. ತುರ್ತು ಪರಿಸ್ಥಿತಿಯಿರುವ ರೋಗಿಗಳನ್ನು ಮಾತ್ರ ಪರೀಕ್ಷಿಸುವುದು, ಆದಷ್ಟೂ ದೂರವಾಣಿ ಮತ್ತು ಆನ್‌ಲೈನ್ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಮುಖಾಮುಖಿ ಸಂಪರ್ಕವನ್ನು ಕಡಿಮೆ ಮಾಡಿಕೊಂಡಿದ್ದೇವೆ. ಆರೋಗ್ಯ ಸಿಬ್ಬಂದಿಯನ್ನು ಸೋಂಕಿನಿಂದ ಸಾಧ್ಯವಾದಷ್ಟು ರಕ್ಷಿಸಲು ಈ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಶಾಲೆಗಳು ಮುಚ್ಚಿದ ಕಾರಣ ಮಕ್ಕಳು ಆನ್ ಲೈನ್ ಮೂಲಕವೇ ಪಾಠ ಕಲಿಯುತ್ತಿದ್ದಾರೆ. ನಾವು ಪ್ರತಿದಿನ ಆಸ್ಪತ್ರೆಗೆ ಹೋಗುವಾಗ ಟ್ರಾಫಿಕ್ ಇಲ್ಲದ ಕಾರಣ ಬೇಗ ಹೋಗುವಂತಾಗಿದೆ. ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರಿಗೆಂದು ಸೂಪರ್ ಮಾರ್ಕೆಟ್ ಗಳಲ್ಲಿ ಪ್ರತ್ಯೇಕ ಸಮಯ ನಿಗದಿಪಡಿಸಿರುವುದರಿಂದ ಆ ಸಮಯದಲ್ಲಿ ನಾವು ಹೋಗಿ ಅಗತ್ಯ ವಸ್ತುಗಳನ್ನು ಖರೀದಿಸಬೇಕಾಗಿದೆ ಎಂದರು.

ಪ್ರತಿ ದಿನ ಸಂಜೆ 5ಕ್ಕೆ ಅಗತ್ಯ ಮಾಹಿತಿಗಳಾದ ಕೊರೊನಾ ಹೊಸ ಪ್ರಕರಣಗಳು, ಜನರಿಗೆ ಲಭ್ಯವಿರುವ ನೆರವು, ಹಣಕಾಸಿನ ವಿಷಯ, ಯೋಜನೆಗಳು ಮೊದಲಾದವುಗಳನ್ನು ಸರ್ಕಾರದ ವಕ್ತಾರರು ತಿಳಿಸುತ್ತಾರೆ ಎಂದರು.

ಬಸ್ ರೈಲು ಸೇವೆ: ವಿಮಾನ ಸಂಚಾರ ಬಹುತೇಕ ರದ್ದಾಗಿದೆ. ಕೆಲವಷ್ಟೇ ಬಸ್ ಮತ್ತು ರೈಲಿನ ಸೇವೆ ಲಭ್ಯವಿದೆ. ಬ್ರಿಟನ್ ದೇಶದಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆ ಉಚಿತ. ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಲಾಕ್ ಡೌನ್ ನಿಂದ ತೊಂದರೆಯಾಗಬಾರದೆಂದು ಶೇ 80 ರಷ್ಟು ಸಂಬಳ ನೀಡುವುದಾಗಿ ಸರ್ಕಾರ ಹೇಳಿದೆ ಎಂದು ತಿಳಿಸಿದರು.

ಆತಂಕದ ಛಾಯೆ
ಕೆಲವರಂತೂ ಇಲ್ಲಿ ತುಂಬಾ ಆತಂಕಕ್ಕೆ ಒಳಗಾಗಿದ್ದಾರೆ. ಏಕೆಂದರೆ ಈ ದೇಶದಲ್ಲಿ ವಯಸ್ಸಾದವರು ಹೆಜ್ಜು ಜನರಿದ್ದು, ಅನೇಕ ಸ್ವಯಂ ಸೇವಕರು ಅಂತಹವರಿಗೆ ನೆರವು ನೀಡುತ್ತಿದ್ದಾರೆ. ಈಗಾಗಲೇ ಅನಾರೋಗ್ಯ ಸಮಸ್ಯೆ ಇರುವವರು ಮತ್ತು ವಯಸ್ಸಾದವರು ಹೊರಗೆ ಬರಲೇಬೇಡಿ ಎಂದು ಸರ್ಕಾರ ಸೂಚಿಸಿದೆ. ಆಹಾರ, ಔಷಧಿ ತರಲು, ವೈದ್ಯರೊಂದಿಗೆ ಚಿಕಿತ್ಸೆ ಪಡೆಯಲು ಮಾತ್ರ ಹೊರಗೆ ಹೋಗಬೇಕು. ಬೆಳಗಿನ ವಾಯುಸಂಚಾರಕ್ಕೆ ಹೋಗುವವರು ಎರಡು ಮೀಟರ್ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ಅಲ್ಲಿನ ಸ್ಥಿತಿಗತಿ ಬಗ್ಗೆ ಡಾ.ಸಿರೀಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.