ADVERTISEMENT

ಮಕರ ಸಂಕ್ರಾಂತಿ: ಖರೀದಿ ಭರಾಟೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 13:12 IST
Last Updated 13 ಜನವರಿ 2020, 13:12 IST
ನಗರದ ಬಜಾರ್ ರಸ್ತೆಯಲ್ಲಿ ಜನರು ಹಬ್ಬಕ್ಕಾಗಿ ಕಬ್ಬು, ಅವರೆಕಾಯಿ ಖರೀದಿಸಿದರು.
ನಗರದ ಬಜಾರ್ ರಸ್ತೆಯಲ್ಲಿ ಜನರು ಹಬ್ಬಕ್ಕಾಗಿ ಕಬ್ಬು, ಅವರೆಕಾಯಿ ಖರೀದಿಸಿದರು.   

ಚಿಕ್ಕಬಳ್ಳಾಪುರ: ಮಕರ ಸಂಕ್ರಾತಿ ಹಬ್ಬದ ಮುನ್ನಾ ದಿನವಾದ ಸೋಮವಾರ ನಗರದ ಮಾರುಕಟ್ಟೆಯಲ್ಲಿ ಕಬ್ಬು, ಗೆಣಸು, ಕಡಲೆಕಾಯಿ, ಅವರೆಕಾಯಿ, ಹೂವಿನ ಮಾರಾಟ ಜೋರಾಗಿ ಕಂಡುಬಂತು.

ಭಾನುವಾರ ಸಂಜೆಯೇ ನಗರದ ಬಜಾರ್ ರಸ್ತೆ, ಎಂ.ಜಿ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕಬ್ಬು ರಾಶಿಗಟ್ಟಲೇ ತಂದಿಡಲಾಗಿತ್ತು. ಸೋಮವಾರ ಬೆಳಿಗ್ಗೆಯಿಂದಲೇ ವ್ಯಾಪಾರಿಗಳು ಮಾರುಕಟ್ಟೆಯಲ್ಲಿ ಕಬ್ಬು ಪೈಪೋಟಿಯಲ್ಲಿ ಮಾರಾಟ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು. ವ್ಯಾಪಾರಸ್ಥರು ರಸ್ತೆ ಬದಿಯಲ್ಲಿ ತಾವು ತಂದಿದ್ದ ವಸ್ತುಗಳ ರಾಶಿ ಹಾಕಿಕೊಂಡು ಗ್ರಾಹಕರನ್ನು ಸೆಳೆಯುವ ಕಸರತ್ತು ನಡೆಸಿದ್ದರು.

ಮಾರುಕಟ್ಟೆಯಲ್ಲಿ ಜೋಡಿ ಕಬ್ಬು ₹ 60ರಿಂದ ₹100ರ ವರೆಗೆ ಮಾರಾಟವಾಗುತ್ತಿತ್ತು. ಕಡಲೆಕಾಯಿ ಕೆ.ಜಿಗೆ ₹ 70, ಅವರೆಕಾಯಿ ₹ 40, ಗೆಣಸು ₹ 40 ಇದ್ದರೆ, ಹೂವಿನ ಬೆಲೆ ಸ್ವಲ್ಪ ಏರಿಕೆಯಾಗಿತ್ತು. ಕೆ.ಜಿ ಸೇವಂತಿಗೆಗೆ ₹ 60, ರೋಜಾ ₹ 80, ಚೆಂಡುಹೂವು ₹ 30ಕ್ಕೆ ಮಾರಾಟವಾಗುತ್ತಿದ್ದವು.

ADVERTISEMENT

ಬಾಗಿನ ಸಾಮಗ್ರಿಗಳ ಜತೆಗೆ ಎಳ್ಳು, ಅಚ್ಚುಬೆಲ್ಲ, ಬಿಳಿಬೆಲ್ಲ, ಸಕ್ಕರೆ ಅಚ್ಚು, ಕಬ್ಬಿನ ಜಲ್ಲೆ, ಎಳ್ಳು–ಬೆಲ್ಲ ಮಿಶ್ರಣ ಮಾಡಿದ ಪ್ಯಾಕೆಟ್‌ಗೆ ಬೇಡಿಕೆ ಇತ್ತು. ಬಜಾರ್‌ ರಸ್ತೆಯಲ್ಲಿ ಹಬ್ಬದ ಖರೀದಿಗೆ ಬಂದ ಜನರ ದಟ್ಟಣೆಯಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.