
ಮಂಚೇನಹಳ್ಳಿ: ಮಂಚೇನಹಳ್ಳಿಯನ್ನು ಮೂರು ವರ್ಷಗಳ ಹಿಂದೆ ರಾಜ್ಯ ಸರ್ಕಾರವು ತಾಲ್ಲೂಕು ಕೇಂದ್ರವಾಗಿ ಘೋಷಿಸಿತ್ತು. ಈಗಿನ ಸಂಸದ ಡಾ.ಕೆ.ಸುಧಾಕರ್ ಅಂದು ಶಾಸಕರಾಗಿದ್ದ ವೇಳೆ ಈ ತಾಲ್ಲೂಕು ರಚನೆಗೆ ಕಾರಣರಾದರು.
ಹೀಗೆ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾದರೂ ಅಭಿವೃದ್ಧಿ ವಿಚಾರದಲ್ಲಿ ಇಂದಿಗೂ ವೇಗ ದೊರೆತಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಚೇನಹಳ್ಳಿಯ ಅಭಿವೃದ್ಧಿಗೆ ಕನಿಷ್ಠ ಕೊಡುಗೆಗಳನ್ನಾದರೂ ನೀಡಲಿ ಎನ್ನುವುದು ಈ ತಾಲ್ಲೂಕಿನ ಜನರ ಆಗ್ರಹ.
ನೂತನ ತಾಲ್ಲೂಕಿಗೆ ಬೇಕಾದ ಅಧಿಕೃತ ಸರ್ಕಾರಿ ಕಚೇರಿಗಳನ್ನು ಒದಗಿಸಲು ಮತ್ತು ಮೂಲ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಒದಗಿಸುತ್ತದೆಯೇ ಎಂದು ತಾಲ್ಲೂಕಿನ ಜನ ನಿರೀಕ್ಷೆಯಲ್ಲಿದ್ದಾರೆ.
ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ನೀಡಿದರೆ ಹೊಸ ರೂಪ ನೀಡಿದಂತಾಗುತ್ತದೆ. ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದಿರುವ ಈ ತಾಲ್ಲೂಕು ಕೇಂದ್ರಕ್ಕೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು, ಅಗತ್ಯ ಅಧಿಕಾರಿಗಳನ್ನು ನೇಮಿಸಬೇಕು ಎನ್ನುವ ಆಗ್ರಹ ಜನರದ್ದು.
ಕಂದಾಯ ಇಲಾಖೆಯ ಕಟ್ಟಡವನ್ನು ಹೊರತುಪಡಿಸಿದರೆ ತಾಲ್ಲೂಕು ಮಟ್ಟದಲ್ಲಿ ಇರಬೇಕಾದ ಯಾವುದೇ ಸರ್ಕಾರಿ ಕಚೇರಿ, ಕಟ್ಟಡಗಳು ಇಲ್ಲಿಯವರೆಗೆ ನಿರ್ಮಾಣವಾಗಿಲ್ಲ. ಸರ್ಕಾರಿ ಆಸ್ಪತ್ರೆ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ.ವೈದ್ಯರ ಹಾಗೂ ಸಿಬ್ಬಂದಿ ನೇಮಕ, ಸೇರಿದಂತೆ ಹಲವು ಕೆಲಸಗಳು ಇನ್ನು ಬಾಕಿ ಉಳಿದಿವೆ.
ತುರ್ತು ಚಿಕಿತ್ಸೆ ಸಂದರ್ಭದಲ್ಲಿ ಜನರು ಅನಿವಾರ್ಯವಾಗಿ ಗೌರಿಬಿದನೂರು ಅಥವಾ ಚಿಕ್ಕಬಳ್ಳಾಪುರ ತೆರಳುವರು.
ಮಂಚೇನಹಳ್ಳಿ ತಾಲ್ಲೂಕಿನಲ್ಲಿ ಬಹುತೇಕ ಇಲಾಖೆಗಳಲ್ಲಿ ಗೌರಿಬಿದನೂರು ಅಧಿಕಾರಿಗಳೇ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಭಾರ ಸಿಬ್ಬಂದಿ ನೆಚ್ಚಿ ಕೆಲಸ ಮಾಡುತ್ತಿರುವುದರಿಂದ ಗುಣಮಟ್ಟದ ಕೆಲಸ ಆಗುತ್ತಿಲ್ಲ. ಈ ಬಾರಿಯ ಬಜೆಟ್ ನಲ್ಲಿ ಸಿಬ್ಬಂದಿ ನೇಮಕಕ್ಕೆ ಆದ್ಯತೆ ನೀಡಬೇಕು ಎಂದು ನಾಗರಿಕರು ಆಗ್ರಹಿಸುವರು.
ನೂತನ ತಾಲ್ಲೂಕಿನಲ್ಲಿ ಪದವಿ ಕಾಲೇಜು, ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಇಲ್ಲ. ವಿದ್ಯಾರ್ಥಿಗಳು ಚಿಕ್ಕಬಳ್ಳಾಪುರವನ್ನೇ ನೆಚ್ಚಿಕೊಂಡಿದ್ದಾರೆ. ಶಾಲಾ ಕಾಲೇಜಿಗೆ ಹೋಗಿ ಬರಲು ಬಸ್ ನಿಲ್ದಾಣ ಸಹ ಇಲ್ಲ. ಬಹುಪಾಲು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಆದರೆ ರೈತರಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆಯೂ ಇಲ್ಲ.
ಬಜೆಟ್‌ನಲ್ಲಿ ಶಾಲಾ ಕಾಲೇಜು, ಕೈಗಾರಿಕೆ, ಆಸ್ಪತ್ರೆ, ಮಾರುಕಟ್ಟೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಅಭಿವೃದ್ಧಿ ಕೆಲಸಗಳಿಗೆ ಹಣ ದೊರೆಯುವ ನಿರೀಕ್ಷೆ ಅಪಾರವಾಗಿದೆ.
ನನೆಗುದಿಗೆ ಬಿದ್ದ ಕೈಗಾರಿಕೀಕರಣ
ಡಾ.ಕೆ.ಸುಧಾಕರ್ ಶಾಸಕರಾಗಿದ್ದ ವೇಳೆ ಮಂಚೇನಹಳ್ಳಿ ತಾಲ್ಲೂಕಿನಲ್ಲಿ ಕೈಗಾರಿಕೆಗಳಿಗಾಗಿ ಎರಡು ಸಾವಿರ ಎಕರೆ ಜಮೀನು ಗುರುತಿಸಿದ್ದರು. ಆದರೆ ಇಷ್ಟು ಪ್ರಮಾಣದ ಸರ್ಕಾರಿ ಜಮೀನು ಒಂದೇ ಕಡೆ ಲಭ್ಯವಾಗದೆ ಚದುರಿದ ರೀತಿಯಲ್ಲಿ ಇತ್ತು. ಈ ಸರ್ಕಾರಿ ಜಮೀನು ಮತ್ತು ವಶಕ್ಕೆ ಪಡೆಯಬೇಕಾದ ಜಮೀನುಗಳ ಕುರಿತು ಇನ್ನೂ ಚರ್ಚೆಗಳು ನಡೆದಿದ್ದವು. ಅಷ್ಟರಲ್ಲಿ ಚುನಾವಣೆ ಬಂದಿತು. ಸುಧಾಕರ್ ಸೋಲು ಅನುಭವಿಸಿದರು. ಆ ನಂತರ ಮಂಚೇನಹಳ್ಳಿ ಕೈಗಾರಿಕೀಕರಣದ ಬಗ್ಗೆ ಮಾತುಗಳೇ ಕೇಳಿ ಬರಲಿಲ್ಲ.
ಬಸ್ ನಿಲ್ದಾಣ ನಿರ್ಮಿಸಿ
ಮಂಚೇನಹಳ್ಳಿಯಲ್ಲಿ ಬಸ್ ನಿಲ್ದಾಣವನ್ನು ಆದ್ಯತೆ ಮೇರೆಗೆ ನಿರ್ಮಿಸಬೇಕು. ಬಸ್ ನಿಲ್ದಾಣ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಆಗುತ್ತಿದೆ. ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೊಠಡಿ ಮತ್ತು ಪ್ರಯೋಗಾಲಯ ನಿರ್ಮಿಸಲು ಅನುದಾನ ನೀಡಬೇಕು – ಎಂ. ಆರ್. ಲಕ್ಷ್ಮಿ ನಾರಾಯಣ್, ರೈತ ಸಂಘ ಜಿಲ್ಲಾ ಅಧ್ಯಕ್ಷ ಮಂಚೇನಹಳ್ಳಿ
ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಹಣ ನೀಡಿ ಮಂಚೇನಹಳ್ಳಿ ತಾಲ್ಲೂಕು ಘೋಷಣೆಯಾದ ಬಳಿಕ ಪ್ರಾರಂಭವಾದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಈವರೆಗೂ ಸಿಬ್ಬಂದಿ ನೇಮಕವಾಗಿಲ್ಲ. ಪಂಚಾಯಿತಿ ಕಟ್ಟಡ ನ್ಯಾಯಾಲಯ ಸೇರಿದಂತೆ 18 ಸರ್ಕಾರಿ ಕಚೇರಿಗಳು ನಿರ್ಮಾಣವಾಗಲು ಬಜೆಟ್ ನಲ್ಲಿ ಹಣ ಮೀಸಲಿರಿಸಬೇಕು – ಹನುಮೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ
ಘಾಟಿ ರಸ್ತೆ ವಿಸ್ತರಿಸಿ ತಾಲ್ಲೂಕಿನಲ್ಲಿ ಹೊಸ ಕನ್ನಡ ಭವನ ನಿರ್ಮಾಣವಾಗಬೇಕು. ಘಾಟಿ ಸುಬ್ರಹ್ಮಣ್ಯ ರಸ್ತೆಯನ್ನು ದ್ವಿಪಥ ರಸ್ತೆ ಮಾಡಬೇಕು. ತಿರುವುಗಳಲ್ಲಿ ಅಪಘಾತ ತಪ್ಪಿಸಲು ರಸ್ತೆ ವಿಸ್ತರಿಸಿ ಸೂಚನಾ ಫಲಕ ಅಳವಡಿಸಬೇಕು ರೈತರಿಗೆ ಗುಣ ಮಟ್ಟದ ವಿದ್ಯುತ್ ರಸ ಗೊಬ್ಬರಗಳಿಗೆ ರಿಯಾಯಿತಿ ಸೇರಿದಂತೆ ಮೂಲ ಸೌಕರ್ಯಗಳಿಗೆ ಬಜೆಟ್‌ನಲ್ಲಿ ಅನುದಾನ ನೀಡಬೇಕು – ಎಚ್. ಎನ್. ಕಿರಣ್ ಕುಮಾರ್, ಹಳೇಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.