ADVERTISEMENT

ರೈತರ ಸಮಸ್ಯೆ ಸ್ಥಳದಲ್ಲೇ ಬಗೆಹರಿಸಿ

ಸಹಕಾರ ಹಾಲು ಒಕ್ಕೂಟ ಮೆಗಾ ಡೇರಿಗೆ ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಭೇಟಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 9:10 IST
Last Updated 8 ಜುಲೈ 2020, 9:10 IST
ನಗರದಲ್ಲಿರುವ ಮೆಗಾ ಡೇರಿಗೆ ಸಚಿವ ಪ್ರಭು ಬಿ.ಚೌಹಾಣ್ ಭೇಟಿ‌ ನೀಡಿದರು
ನಗರದಲ್ಲಿರುವ ಮೆಗಾ ಡೇರಿಗೆ ಸಚಿವ ಪ್ರಭು ಬಿ.ಚೌಹಾಣ್ ಭೇಟಿ‌ ನೀಡಿದರು   

ಚಿಕ್ಕಬಳ್ಳಾಪುರ: ಜಾನುವಾರಗಳಿಗೆ ಅಗತ್ಯ ಮೇವು ಪೂರೈಕೆ ಮಾಡುವುದರ ಜತೆಗೆ ಅಧಿಕಾರಿಗಳು ಖುದ್ದಾಗಿ ಹಳ್ಳಿಗಳಿಗೆ ಭೇಟಿ ನೀಡಿ ಸರ್ಕಾರದ ಯೋಜನೆಗಳನ್ನು ಸಮರ್ಪಕಅನುಷ್ಠಾನಕ್ಕೆ ಕ್ರಮಕೈಗೊಳ್ಳಬೇಕು ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಬಿ.ಚವ್ಹಾಣ್ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಮೆಗಾ ಡೇರಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳು ಖುದ್ದಾಗಿ ತಾಲ್ಲೂಕುಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಬೇಕು. ಮುಂದಿನ ದಿನಗಳಲ್ಲಿ ರೈತರಿಂದ ಯಾವುದೇ ದೂರುಗಳು ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪಶು ಇಲಾಖೆ ವೈದ್ಯರು ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಅಗತ್ಯ ಚಿಕಿತ್ಸೆ ಪೂರೈಸಬೇಕು. ಸರ್ಕಾರದಿಂದ ಪಶು ಸಂಗೋಪನೆ ಇಲಾಖೆಗೆ ಬರುವ ಔಷಧಿಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕ ನಾಗರಾಜ್ ಮಾತನಾಡಿ, ಜಿಲ್ಲೆಯಾದ್ಯಂತ 59 ಪಶು ಚಿಕಿತ್ಸಾಲಯಗಳಿವೆ. 15 ಪ್ರಾಥಮಿಕ ಪಶು ಚಿಕಿತ್ಸಾಲಯಗಳು 75 ಪಶು ವೈದ್ಯಾಧಿಕಾರಿಗಳು, 6 ಸಂಚಾರಿ ಪಶು ಚಿಕಿತ್ಸಾಲಯಗಳಿವೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು ಬಹುತೇಕ ಅರಣ್ಯ ಪ್ರದೇಶದಲ್ಲಿ ಮೇವು ಬೆಳೆಯುತ್ತಿದೆ. 6 ತಾಲ್ಲೂಕುಗಳಲ್ಲಿ ರೈತರಿಗೆ ಪಶುಪಾಲನಾ ಇಲಾಖೆಯಿಂದ ಮೇವಿನ ಬೀಜದ ಪೊಟ್ಟಣಗಳು ರೈತರಿಗೆ ವಿತರಿಸಲಾಗಿದೆ. ಅದರಿಂದಲೂ ಮೇವು ಬೆಳೆಯುತ್ತಿರುವುದರಿಂದ ಜಿಲ್ಲೆಯಲ್ಲಿ ಮೇವಿನ ಉತ್ಪಾದನೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಜಿಲ್ಲಾ ಸಹಾಯಕ ನಿರ್ದೇಶಕ ಡಾ.ಎಂ.ಆರ್.ಜ್ಞಾನೇಶ್ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಗೆ 2019-20ನೇ ಸಾಲಿನಲ್ಲಿ ₹2 ಕೋಟಿ 86 ಲಕ್ಷ ಕುರಿ ಪರಿಹಾರ ಧನ ಬರಬೇಕಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್, ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಎನ್.ಸಿ ವೆಂಕಟೇಶ್, ಚಂದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.