ADVERTISEMENT

ವಾಲ್ಮೀಕಿ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಾಸಕರ ನಿರ್ಲಕ್ಷ್ಯ

ವಾಲ್ಮೀಕಿ ಮಹಾಸಭಾದ ತಾಲ್ಲೂಕು ಘಟಕ ಖಂಡನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 4:16 IST
Last Updated 22 ಅಕ್ಟೋಬರ್ 2021, 4:16 IST

ಬಾಗೇಪಲ್ಲಿ: ‘ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಹಾಗೂ ಜನಪ್ರತಿನಿಧಿಗಳು ತಮ್ಮ ಅಧಿಕಾರಾವಧಿಯಲ್ಲಿ ವಾಲ್ಮೀಕಿ, ಅಂಬೇಡ್ಕರ್ ಭವನ ನಿರ್ಮಿಸದೆ ಜಿಲ್ಲಾಧಿಕಾರಿ ಅವರು ಅನುದಾನ ಬಿಡುಗಡೆ ಮಾಡುತ್ತಿಲ್ಲವೆಂದು ಆರೋಪ ಮಾಡುತ್ತಿರುವುದು ಸರಿಯಲ್ಲ’ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ದೇವಿಕುಂಟೆಡಿ ಸಿ. ಶ್ರೀನಿವಾಸ್ ಆರೋಪಿಸಿದರು.

ತಾಲ್ಲೂಕು ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಳೆದ ಏಳು ವರ್ಷಗಳಿಂದ ವಾಲ್ಮೀಕಿ, ಅಂಬೇಡ್ಕರ್ ಭವನ ನಿರ್ಮಿಸಲಾಗುವುದು ಎಂದು ಶಾಸಕರು ಭರವಸೆ ನೀಡುತ್ತಾ ಬಂದಿದ್ದಾರೆ. ಆದರೆ ಸರ್ಕಾರ, ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ಸಮುದಾಯದ ಮುಖಂಡರ ಜೊತೆ ಎಂದಿಗೂ ಚರ್ಚೆ ಮಾಡಿಲ್ಲ. ಕೇವಲ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ ಎಂದು ದೂರಿದರು.

ADVERTISEMENT

ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಿ ಭವನಗಳನ್ನು ನಿರ್ಮಿಸಬಹುದಿತ್ತು. ಈಗ ಪರಿಶಿಷ್ಟ ಜಾತಿ ಮತ್ತು ಪಂಗಡದ ಕೆಲವು ಮುಖಂಡರನ್ನು ಎತ್ತಿಕಟ್ಟಿ ವಾಲ್ಮೀಕಿ ಭವನಕ್ಕೆ ಜಿಲ್ಲಾಧಿಕಾರಿ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ವಾಲ್ಮೀಕಿ ಜಯಂತಿಯಂದು ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಕ್ಷೇತ್ರದಲ್ಲಿ ಯಾವುದೇ ಶಾಶ್ವತ ಅಭಿವೃದ್ಧಿ ಕಾಮಗಾರಿ ಆಗಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಮೀಸಲಾದ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. ಅನುದಾನ ಸರ್ಕಾರಕ್ಕೆ ವಾಪಸ್ ಹೋಗಿದೆ. ಇದು ಪರಿಶಿಷ್ಟ ಸಮುದಾಯಗಳಿಗೆ ಮಾಡಿರುವ ಅನ್ಯಾಯ ಎಂದು ದೂರಿದರು.

ಅಣ್ಣ-ತಮ್ಮಂದಿರಂತೆ ಇರುವ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಗೊಂದಲ ಸೃಷ್ಟಿಸಬಾರದು. ಶಾಸಕರು ಕೂಡಲೇ ಎಲ್ಲರನ್ನು ಒಗ್ಗೂಡಿಸಿಕೊಂಡು ವಾಲ್ಮೀಕಿ, ಅಂಬೇಡ್ಕರ್ ಭವನ ನಿರ್ಮಿಸಲು ಪೂರ್ವಭಾವಿ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.

ಮಹಾಸಭಾದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗೂಳೂರು ಲಕ್ಷ್ಮೀನಾರಾಯಣ ಮಾತನಾಡಿ, ಪಟ್ಟಣದ ದೇವರಾಜ ಅರಸು ಭವನದ ಜಾಗದಲ್ಲಿ ವಾಲ್ಮೀಕಿ ಭವನ ನಿರ್ಮಿಸಲಾಗುವುದು ಎಂದು ಶಾಸಕರು ತಿಳಿಸಿದ್ದರು. ವಾಲ್ಮೀಕಿ ಭವನ ಮಾಡದೇ ಅರಸು ಭವನಕ್ಕೆ ಭೂಮಿಪೂಜೆ ಮಾಡಿದರು. ಆಗ ನಾಯಕ ಸಮುದಾಯದ ಕೆಲವರು ವಾಲ್ಮೀಕಿ ಭವನ ಆಗಲೇಬೇಕು ಎಂದು ಮಾತನಾಡಿದರು. ಪೊಲೀಸರನ್ನು ಬಳಸಿ ಅಂತಹ ಮುಖಂಡರನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಿದ್ದಾರೆ ಎಂದು ಟೀಕಿಸಿದರು.

ಟಿಎಸ್‌ಪಿ, ಎಸ್‌ಟಿಪಿ ಯೋಜನೆಯಡಿ ಸರ್ಕಾರ ಕೋಟ್ಯಂತರ ಅನುದಾನವನ್ನು ಬಿಡುಗಡೆ ಮಾಡಿದೆ. ಆದರೆ, ಈ ಹಣವನ್ನು ಕೆಲವರಿಗೆ ಅನುಕೂಲ ಮಾಡಲು ರಸ್ತೆಗಳನ್ನು ಮಾಡಿಸಲಾಗಿದೆ. ಆ ರಸ್ತೆಗಳು ಅತ್ಯಂತ ಕಳಪೆಯಿಂದ ಕೂಡಿವೆ. ಸರ್ಕಾರದ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ಮುಖಂಡರಾದ ಪಾಳ್ಯಂ ಹರೀಶ್, ಕೃಷ್ಣಪ್ಪ, ರಾಜು, ಸೋಮಶೇಖರ್, ಮಂಜುನಾಥ್, ಅದಿನಾರಾಯಣ, ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.