ಚಿಕ್ಕಬಳ್ಳಾಪುರ: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ತಾಲ್ಲೂಕಿನ ನಂದಿಗಿರಿಧಾಮಕ್ಕೆ ವಾರದ ದಿನಗಳಲ್ಲಿ ವಿಧಿಸಿರುವ ಪ್ರವಾಸಿಗರ ಪ್ರವೇಶ ನಿರ್ಬಂಧವನ್ನು ಮೇ 9ರವರೆಗೆ ವಿಸ್ತರಿಸಲಾಗಿದೆ.
ಗಿರಿಧಾಮದ ಆರಂಭದಿಂದ 7.70 ಕಿ.ಮೀ ವರೆಗೆ ರಸ್ತೆ ನವೀಕರಣ ಕಾಮಗಾರಿ ಕೈಗೊಳ್ಳಲಾಗಿದ್ದು ಏ.25ರವರೆಗೆ ವಾರದ ದಿನಗಳಲ್ಲಿ (ಸೋಮವಾರದಿಂದ ಶುಕ್ರವಾರದವರೆಗೆ) ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದರು. ವಾರಾಂತ್ಯದ ಶನಿವಾರ ಮತ್ತು ಭಾನುವಾರ ಮಾತ್ರ ಗಿರಿಧಾಮ ಪ್ರವೇಶಿಸಲು ಅವಕಾಶ ನೀಡಲಾಗಿತ್ತು.
ರಸ್ತೆ ನವೀಕರಣ ಪೈಕಿ 4.10 ಕಿ.ಮೀ ಉದ್ದದ ಕಾಮಗಾರಿ ಪೂರ್ಣವಾಗಿದೆ. ಬಾಕಿ 3.60 ಕಿ.ಮೀ ಉದ್ದದ ರಸ್ತೆ ಡಾಂಬರ್ ಹಾಕುವ ಕಾಮಗಾರಿ ಪೂರ್ಣಗೊಳಿಸಲು 10 ದಿನದ ಅವಶ್ಯವಿದೆ. ಆದ್ದರಿಂದ ಮೇ.9ರವರೆಗೆ ಪ್ರವೇಶ ನಿರ್ಬಂಧ ವಿಸ್ತರಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮತ್ತು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ಸಹ ಕೋರಿಕೆ ಸಲ್ಲಿಸಿದ್ದರು. ಈ ಕೋರಿಕೆಗಳನ್ನು ಪರಿಗಣಿಸಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ನಿರ್ಬಂಧದ ಅವಧಿ ವಿಸ್ತರಿಸಿದ್ದಾರೆ.
ಗಿರಿಧಾಮದ ರಸ್ತೆಯು ತೀರಾ ಕಿರಿದಾಗಿದೆ. ಅಪಾಯಕಾರಿ ತಿರುವುಗಳು ಇವೆ. ಆದ್ದರಿಂದ ರಸ್ತೆಗೆ ಡಾಂಬರ್ ಹಾಕಲು ರಸ್ತೆ ಸಂಚಾರ ಬಂದ್ ಮಾಡಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.