
ಶಿಡ್ಲಘಟ್ಟ: ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಪಂಚಾಯಿತಿ ಅಧ್ಯಕ್ಷೆ ದ್ಯಾವಮ್ಮ ಕೆಂಪಣ್ಣ ಅಧ್ಯಕ್ಷತೆಯಲ್ಲಿ ಶುಕ್ರವಾರ ಗ್ರಾಮಸಭೆ ನಡೆಯಿತು. ಗ್ರಾಮಸಭೆಯಲ್ಲಿ ಪಿಡಿಒ ಯಮುನಾರಾಣಿ ಅವರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸಭೆಯಲ್ಲಿ ಈಗಾಗಲೇ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿ, ಕೈಗೊಳ್ಳಬೇಕಾದ ಕಾಮಗಾರಿಗಳು ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದಕ್ಕಿಂತಲೂ ಹೆಚ್ಚು ಪಿಡಿಒ ವಿರುದ್ಧ ದೂರುವುದರಲ್ಲೇ ಗ್ರಾಮಸಭೆಯ ಬಹುತೇಕ ಸಮಯ ಕಳೆಯಿತು.
‘ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಪಿಡಿಒ ಭೇಟಿ ಕೊಡುವುದೇ ಇಲ್ಲ. ಗ್ರಾಮಸ್ಥರ ಸಮಸ್ಯೆಗಳನ್ನು ಕೇಳುವುದಿಲ್ಲ. ನರೇಗಾ ಸೇರಿದಂತೆ ವಿವಿಧ ಯೋಜನೆಗಳ ಕಾಮಗಾರಿ ನಡೆಯುವ ಸ್ಥಳಕ್ಕೂ ಭೇಟಿ ನೀಡದೆ ಕಚೇರಿಯಲ್ಲೇ ಕುಳಿತುಕೊಂಡಿರುತ್ತಾರೆ. ನಾವು ಏನಾದರೂ ಕುಂದುಕೊರತೆ ಹೊತ್ತು ಕಚೇರಿಗೆ ಬಂದರೆ, ಅವರು ನಮ್ಮ ಕೈಗೆ ಸಿಗುವುದಿಲ್ಲ’ ಎಂದು ದೂರಿದರು.
‘ಗ್ರಾಮಸಭೆಗೂ ಮೊದಲು ಹಳ್ಳಿಗಳಲ್ಲಿ ವಾರ್ಡ್ ಸಭೆ ಮಾಡಬೇಕು. ವಾರ್ಡ್‌ವಾರು ಸಭೆಗಳು ನಡೆದಿವೆಯೇ ಇಲ್ಲವಾ ಎನ್ನುವ ಮಾಹಿತಿಯೂ ನಮಗಿಲ್ಲ. ಗ್ರಾಮಸಭೆಗೂ ಕರಪತ್ರ ಹಂಚಿಕೆ ಮಾಡಿಲ್ಲ. ಗ್ರಾಮಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಬಿಟ್ಟರೆ ಸಾರ್ವಜನಿಕರು ಇಲ್ಲ’ ಎಂಬ ಆಕ್ಷೇಪಗಳು ತೂರಿಬಂದವು.
ಗ್ರಾಮ ಪಂಚಾಯಿತಿಯಲ್ಲಿ ಸಂವಿಧಾನ ದಿನಾಚರಣೆ ಆಚರಣೆ ಮಾಡಿಲ್ಲ. ಈ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಕುರಿತು ಪೂರ್ವಭಾವಿ ಸಭೆ ನಡೆಸಿ ವರದಿ ಕಳುಹಿಸುವಂತೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ನೊಟೀಸ್ ಕಳುಹಿಸಿದ್ದರೂ ಪೂರ್ವಭಾವಿ ಸಭೆ ನಡೆಸಿಲ್ಲ ಎಂದು ದೂರಿದರು.
ಗ್ರಾಮಸಭೆ ದಿನದಂದೇ ಮಕ್ಕಳ ಗ್ರಾಮಸಭೆ ಮಾಡುವುದಾಗಿ ಸಾರ್ವಜನಿಕ ಪ್ರಕಟಣೆಯನ್ನು ಪಂಚಾಯಿತಿಯ ಮಾಹಿತಿ ಕೇಂದ್ರದಲ್ಲಿ ಹಾಕಲಾಗಿದೆ. ಆದರೆ, ಮಕ್ಕಳ ಗ್ರಾಮಸಭೆ ಮಾಡಿಲ್ಲ. ಮಕ್ಕಳ ಸಮಸ್ಯೆಗಳ ಬಗ್ಗೆ ಚರ್ಚೆಯನ್ನೂ ನಡೆಸಿಲ್ಲ. ಅವರ ಹಕ್ಕುಗಳಿಗೆ ಚ್ಯುತಿ ತಂದಿದ್ದೀರಿ ಎಂದು ದೂರಿದರು. ಸಭೆಯಲ್ಲಿ ಕೆಲ ಇಲಾಖೆಗಳಿಂದ ಸಿಗುವ ಸವಲತ್ತು, ಯೋಜನೆಗಳ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ವೇತಾ ಹರೀಶ್, ಕಾರ್ಯದರ್ಶಿ ಮಹಾಲಿಂಗಪ್ಪ, ರೇಷ್ಮೆ ಇಲಾಖೆ ವಿಸ್ತರಣಾಕಾರಿ ಸೋಮಣ್ಣ, ಪಶುಪಾಲನಾ ಇಲಾಖೆಯ ಡಾ.ಮುನಿಶಾಮಿ, ಸದಸ್ಯರಾದ ರವಿಕುಮಾರ್, ಮಂಜುನಾಥ್, ಚನ್ನೇಗೌಡ, ಕೃಷ್ಣಪ್ಪ, ಸುಜಾತ ವೆಂಕಟೇಶ್ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.