ADVERTISEMENT

ಚಿಕ್ಕಬಳ್ಳಾಪುರ: ಮದ್ಯದಂಗಡಿಗಳಿಗೆ ಮುಗಿಬಿದ್ದ ಜನರು

ನಸುಕಿನಲ್ಲೇ ಮದ್ಯ ಖರೀದಿಗೆ ಮಳಿಗೆಗಳ ಎದುರು ಉದ್ದನೆಯ ಸಾಲು, ಬಿರು ಬಿಸಿಲು ಲೆಕ್ಕಿಸದೆ ಕಾಯ್ದು ಖರೀದಿಸಿದ ಮದ್ಯ ಪ್ರಿಯರು

​ಪ್ರಜಾವಾಣಿ ವಾರ್ತೆ
Published 4 ಮೇ 2020, 12:46 IST
Last Updated 4 ಮೇ 2020, 12:46 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ದಿಬ್ಬೂರು ಗ್ರಾಮದಲ್ಲಿ ಮದ್ಯದಂಗಡಿ ಎದುರು ಮದ್ಯ ಖರೀದಿಗಾಗಿ ಸರದಿ ಸಾಲಿನಲ್ಲಿ ನಿಂತ ಜನರು
ಚಿಕ್ಕಬಳ್ಳಾಪುರ ತಾಲ್ಲೂಕಿನ ದಿಬ್ಬೂರು ಗ್ರಾಮದಲ್ಲಿ ಮದ್ಯದಂಗಡಿ ಎದುರು ಮದ್ಯ ಖರೀದಿಗಾಗಿ ಸರದಿ ಸಾಲಿನಲ್ಲಿ ನಿಂತ ಜನರು   

ಚಿಕ್ಕಬಳ್ಳಾಪುರ: ಲಾಕ್‌ಡೌನ್‌ನಿಂದಾಗಿ ಸುಮಾರು ಒಂದೂವರೆ ತಿಂಗಳಿಂದ ಮದ್ಯಪಾನ ಮಾಡಲಾಗದೆ ಚಡಪಡಿಸುತ್ತಿದ್ದ ಮದ್ಯ ಪ್ರಿಯರೆಲ್ಲ ಸೋಮವಾರ ಜಿಲ್ಲೆಯಾದ್ಯಂತ ಬಾಗಿಲು ತೆರೆದ ಆಯ್ದ ಮದ್ಯದಂಗಡಿಗಳ ಎದುರು ನಸುಕಿನಲ್ಲಿಯೇ ಸಾಲುಗಟ್ಟಿ ಮದ್ಯ ಖರೀದಿಗೆ ಮುಗಿಬಿದ್ದಿದ್ದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೋಮವಾರದಿಂದ ಮದ್ಯ ಮಾರಾಟಕ್ಕೆ ಷರತ್ತು ಬದ್ಧ ಅವಕಾಶ ನೀಡಿದ್ದ ವಿಷಯ ತಿಳಿದು ಮದ್ಯಕ್ಕಾಗಿ ಮಳಿಗೆಗಳತ್ತ ದೌಡಾಯಿಸಿದವರು ತಲೆ ಸುಡುವ ಬಿರು ಬಿಸಿಲು ಲೆಕ್ಕಿಸದೆ ಸರದಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿದರು.

ಮದ್ಯದಂಗಡಿಗಳ ಮುಂದೆ ಜನರ ನೂಕು ನುಗ್ಗಲನ್ನು ತಡೆಯುವ ಉದ್ದೇಶದಿಂದಲೇ ಮಾಲೀಕರು ಭಾನುವಾರವೇ ತಲೆಬೇಲಿ ಅಳವಡಿಸಿ, ಅಂತರ ಕಾಯ್ದುಕೊಳ್ಳು ಚೌಕ ಬರೆಸಿದ್ದರು. ಆದರೂ, ಸೋಮವಾರ ಬೆಳಿಗ್ಗೆ 9 ರಿಂದ ಮದ್ಯ ಮಾರಾಟ ಆರಂಭವಾಗುತ್ತಿದ್ದಂತೆ ಅನೇಕ ಕಡೆಗಳಲ್ಲಿ ಮದ್ಯ ಖರೀದಿಗೆ ಬಂದವರು ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದ ಚಿತ್ರಣಗಳು ಗೋಚರಿಸಿದವು.

ADVERTISEMENT

ಜಿಲ್ಲೆಯಲ್ಲಿ 69 ಸಿಎಲ್‌–2( ಚಿಲ್ಲರೆ ಮದ್ಯದಂಗಡಿಗಳು– ವೈನ್‌ಶಾಪ್‌ ಹಾಗೂ ಎಂ.ಆರ್.ಪಿ ಮದ್ಯದಂಗಡಿ) ಮತ್ತು 21 ಸಿಎಲ್‌–11ಸಿ (ಎಂಎಸ್ಐಎಲ್) ಸೇರಿದಂತೆ ಒಟ್ಟು 90 ಮದ್ಯದಂಗಡಿ ತೆರೆಯಲು ಗುರುತಿಸಲಾಗಿತ್ತು.

ಆದರೆ, ಕೊನೆಯ ಕ್ಷಣದಲ್ಲಿ ಜಿಲ್ಲಾಡಳಿತ ಕೋವಿಡ್ ಪ್ರಕರಣಗಳು ಪತ್ತೆಯಾದ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ನಗರಗಳ ವ್ಯಾಪ್ತಿಯಲ್ಲಿನ 16 ಮದ್ಯದಂಗಡಿ ತೆರೆಯುವ ತೀರ್ಮಾನವನ್ನು ಕಾಯ್ದಿರಿಸಿದ ಕಾರಣಕ್ಕೆ ಸೋಮವಾರ ಈ ಎರಡು ನಗರಗಳನ್ನು ಹೊರತುಪಡಿಸಿದಂತೆ ಜಿಲ್ಲೆಯಾದ್ಯಂತ 74 ಮದ್ಯದಂಗಡಿಗಳು ಪುನಃ ವಹಿವಾಟು ಆರಂಭಿಸಿದವು.

ಚಿಂತಾಮಣಿ, ಬಾಗೇಪಲ್ಲಿ, ಶಿಡ್ಲಘಟ್ಟ ಮತ್ತು ಗುಡಿಬಂಡೆ ಸೇರಿದಂತೆ ನಗರ ಪ್ರದೇಶಗಳಲ್ಲಿ 22 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 52 ವೈನ್‌ಶಾಪ್‌ಗಳ ಸೋಮವಾರ ಗ್ರಾಹಕರಿಗೆ ಮದ್ಯ ಮಾರಾಟ ಮಾಡಿದವು. ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರಿನ ಮದ್ಯ ಪ್ರಿಯರು ಸಮೀಪದ ಹಳ್ಳಿಗಳಿಗೆ ಹೋಗಿ ಮದ್ಯ ಖರೀದಿಸಿ ತಂದ ಚಿತ್ರಣಗಳು ಕಂಡುಬಂದವು.

ಜಿಲ್ಲೆಯಲ್ಲಿ ಸೋಮವಾರ ನಗರ, ಪಟ್ಟಣ ಪ್ರದೇಶಗಳಲ್ಲಿರುವ 32 ಸಿಎಲ್‌–2 ಮದ್ಯದಂಗಡಿಗಳ ಪೈಕಿ ಸದ್ಯ 19, ಅದೇ ರೀತಿ ಎಂಎಸ್ಐಎಲ್‌ನ 6 ಮಳಿಗೆಗಳ ಪೈಕಿ 3 ಅಂಗಡಿಗಳು ವಹಿವಾಟು ನಡೆಸಿದವು. ‌ಇನ್ನುಳಿದಂತೆ ಗ್ರಾಮೀಣ ಪ್ರದೇಶಗಳಲ್ಲಿ 37 ಸಿಎಲ್-2, 15 ಎಂಎಸ್ಐಎಲ್‌ ಮಳಿಗೆಗಳು ವ್ಯಾಪಾರ ನಡೆಸಿದವು.

ಸರ್ಕಾರದ ನಿಯಮದಂತೆ ಮದ್ಯದಂಗಡಿಗಳಲ್ಲಿ ಒಬ್ಬರು ಏಕಕಾಲದಲ್ಲಿ ಗರಿಷ್ಠ 2.3 ಲೀಟರ್‌ (ವಿಸ್ಕಿ, ರಮ್, ಜಿನ್‌) ಮದ್ಯ ಹಾಗೂ 18 ಲೀಟರ್‌ ಬಿಯರ್‌ ಖರೀದಿಸಬಹುದಾಗಿತ್ತು. ಆದರೆ, ಹೆಚ್ಚಿನ ದಾಸ್ತಾನು ಇಲ್ಲದ ಕಾರಣಕ್ಕೆ ಮದ್ಯದಂಗಡಿಯವರು ಒಬ್ಬರಿಗೆ ಸ್ವಲ್ಪ ಪ್ರಮಾಣದ ಮದ್ಯ ನೀಡಿ ಕಳುಹಿಸುತ್ತಿದ್ದರು.

ಗ್ರಾಹಕರ ದಾಂಗುಡಿಯಿಂದಾಗಿ ಜಿಲ್ಲೆಯ ಬಹುಪಾಲು ಮದ್ಯದಂಗಡಿಗಳಲ್ಲಿನ ಮದ್ಯದ ದಾಸ್ತಾನು ಮಧ್ಯಾಹ್ನದ ಹೊತ್ತಿಗೆ ಬರಿದಾಗಿತ್ತು. ಹೀಗಾಗಿ, ಮಳಿಗೆ ಮಾಲೀಕರು ಅಬಕಾರಿ ಇಲಾಖೆಗೆ ಸಂಜೆ ಹೊತ್ತಿಗೆ ಬೇಡಿಕೆ ಸಲ್ಲಿಸಿದರು. ಮದ್ಯ ಮಾರಾಟಕ್ಕೆ ಸಂಜೆ 7ರ ವರೆಗೆ ಅನುಮತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.