ADVERTISEMENT

‘ಜನತಾ ಕರ್ಪ್ಯೂ’ ಬೆಂಬಲಿಸಿದ ಜನ, ಸ್ತಬ್ಧಗೊಂಡ ಚಿಕ್ಕಬಳ್ಳಾಪುರ ಜಿಲ್ಲೆ

ಬಾಗಿಲು ಮುಟ್ಟಿದ ಅಂಗಡಿ ಮುಗ್ಗಟ್ಟುಗಳು, ಜನ ಸಂಚಾರವಿಲ್ಲದೆ ಬಿಕೋ ಎಂದ ನಗರ, ಪಟ್ಟಣಗಳು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 13:21 IST
Last Updated 22 ಮಾರ್ಚ್ 2020, 13:21 IST
ನಗರದ ಪ್ರಮುಖ ವಾಣಿಜ್ಯ ಚಟುವಟಿಕೆಯ ಪ್ರದೇಶವಾದ ಬಜಾರ್ ರಸ್ತೆಯಲ್ಲಿ ಕಂಡುಬಂದ ದೃಶ್ಯವಿದು
ನಗರದ ಪ್ರಮುಖ ವಾಣಿಜ್ಯ ಚಟುವಟಿಕೆಯ ಪ್ರದೇಶವಾದ ಬಜಾರ್ ರಸ್ತೆಯಲ್ಲಿ ಕಂಡುಬಂದ ದೃಶ್ಯವಿದು   

ಚಿಕ್ಕಬಳ್ಳಾಪುರ: ಮಾರಣಾಂತಿಕ ಕೊರೊನಾ ವೈರಸ್ ಸೋಂಕು ಹರಡುವುದು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ‘ಜನತಾ ಕರ್ಪ್ಯೂ’ಗೆ ಜಿಲ್ಲೆಯಲ್ಲಿ ಭಾನುವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಗೌರಿಬಿದನೂರಿನ ವ್ಯಕ್ತಿಯಲ್ಲಿ ಕೋವಿಡ್‌–19 ಸೋಂಕು ಪತ್ತೆಯಾದ ಬೆನ್ನಲ್ಲೇ ಆತಂಕಗೊಂಡಿದ್ದ ಜಿಲ್ಲೆಯ ಜನರು ಭಾನುವಾರ ಜನರು ಸ್ವಯಂ ಪ್ರೇರಿತರಾಗಿ ಮನೆಯಲ್ಲಿಯೇ ಉಳಿದುಕೊಂಡು ಕರ್ಪ್ಯೂ ಬೆಂಬಲಿಸಿದರು. ಪರಿಣಾಮ, ಜಿಲ್ಲೆ ಎಲ್ಲ ನಗರ, ಪಟ್ಟಣಗಳು ದಿನವಿಡೀ ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.

ಜಿಲ್ಲಾ ಕೇಂದ್ರದಲ್ಲಿ ಎಲ್ಲ ವರ್ತಕರು ಸ್ವಯಂ ಪ್ರೇರಣೆಯಿಂದ ತಮ್ಮ ಅಂಗಡಿ, ಮುಗ್ಗಟ್ಟುಗಳು, ಹೋಟೆಲ್‌ಗಳು, ಬಂಕ್‌ಗಳನ್ನು ಮುಚ್ಚಿದ್ದರು. ನಾಗರಿಕರು ಸಹ ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ಅನವಶ್ಯಕವಾಗಿ ಮನೆಯಿಂದ ಹೊರಗೆ ಬರದೆ, ಪ್ರಧಾನಿ ಮೋದಿ ಅವರ ಕರೆಗೆ ಸ್ಪಂದಿಸಿದರು.

ADVERTISEMENT

ನಿತ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ವಾಯು ವಿಹಾರಕ್ಕೆ ಬರುತ್ತಿದ್ದ ನೂರಾರು ನಾಗರಿಕರು ಭಾನುವಾರ ಮನೆಯಿಂದ ಹೊರಗೆ ಹೆಜ್ಜೆ ಇಡಲಿಲ್ಲ. ಹೀಗಾಗಿ, ಕ್ರೀಡಾಂಗಣ ಭಣಗುಡುತ್ತಿತ್ತು. ಜನರು ಮನೆಯಲ್ಲಿಯೇ ಟಿವಿ ನೋಡುತ್ತಾ, ಪೇಪರ್‌ಗಳನ್ನು ಓದುತ್ತಾ ಕುಟುಂಬದವರೊಂದಿಗೆ ಕಾಲಕಳೆದರು.

ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ ಗಳ ಸಂಚಾರ ಸ್ಥಗಿತಗೊಂಡಿದ್ದವು. ಆಟೋಗಳು ರಸ್ತೆಗೆ ಇಳಿಯಲಿಲ್ಲ. ಬಸ್ ನಿಲ್ದಾಣ ಬಸ್‌ಗಳು ಹಾಗೂ ಜನರ ಸುಳಿವು ಇಲ್ಲದೇ ಬಿಕೋ ಎನ್ನುತ್ತಿದ್ದವು. ರೈಲು ನಿಲ್ದಾಣವೂ ಕಳೆಗುಂದಿತ್ತು.

ನಗರ, ಪಟ್ಟಣಗಳಲ್ಲಿ ಸರ್ಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಅಲ್ಲೊಂದು, ಇಲ್ಲೊಂದು ಔಷಧಿ ಮಳಿಗೆಗಳು ಬಾಗಿಲು ತೆರೆದಿದ್ದು ಗೋಚರಿಸಿತು.

ಗ್ರಾಮೀಣ ಪ್ರದೇಶಗಳಲ್ಲೂ ಜನರು ದೈನಂದಿನ ಚಟುವಟಿಕೆಗಳಿಗೆ ವಿರಾಮ ನೀಡಿದ್ದರು, ಕೃಷಿ ಕಾರ್ಯಗಳನ್ನು ಮುಂದೂಡಿ ಮನೆಯಲ್ಲಿಯೇ ಆರಾಮಗಾಗಿ ಕಾಲ ಕಳೆದರು. ಹೀಗಾಗಿ, ಹಳ್ಳಿಗಳೂ ಮೌನ ಹೊದ್ದಿದ್ದವು.

ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ –7ರಲ್ಲಿ ಕೂಡ ವಾಹನಗಳ ಸಂಚಾರ ಅತಿ ವಿರಳವಾಗಿತ್ತು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಜನರು ಸ್ವಯಂ ಪ್ರೇರಿತರಾಗಿ ಮನೆ ಸೇರಿಕೊಂಡು, ಒಗ್ಗಟ್ಟು ಪ್ರದರ್ಶಿಸಿದ್ದು ಎಂದು ಅನೇಕ ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.