ಚಿಂತಾಮಣಿಯಲ್ಲಿ ಶುಕ್ರವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಜೆಡಿಎಸ್ ಯುವ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಿದರು
ಚಿಂತಾಮಣಿ: ರಾಜಕಾರಣಿಗಳಿಗೆ ಅಧಿಕಾರದ ಹಪಾಹಪಿ ಇರಬಾರದು. ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡುವ ಬದಲು ಸಮಾಜ ಕಟ್ಟಲು, ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲು ಕ್ರಾಂತಿಕಾರಿಕ ಹೆಜ್ಜೆ ಇಡಬೇಕು ಎಂದು ರಾಜ್ಯ ಜೆಡಿಎಸ್ ಪಕ್ಷದ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದ ಹೊರವಲಯ ಮುನುಗನಹಳ್ಳಿ ಬಳಿಯ ಜೆಡಿಎಸ್ ಪಕ್ಷದ ಕಾರ್ಯಾಲಯದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬೃಹತ್ ಕಾರ್ಯಕರ್ತರ ಸಮಾವೇಶ ಹಾಗೂ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಮಾತನಾಡಿದರು.
ವ್ಯಕ್ತಿಗತ ಟೀಕೆ ಮಾಡಬಾರದು. ವಿಷಯಾಧಾರಿತ ಚರ್ಚೆ, ವಿಶ್ಲೇಷಣೆಗಳನ್ನು ಮಾಡಬೇಕು. ರಾಜ್ಯದ ಅಭಿವೃದ್ಧಿ ಯೋಜನೆ ಹಾಗೂ ಮುನ್ನಡೆಸುವಾಗ ಆಗುವ ಲೋಪಗಳನ್ನು ಟೀಕೆ ಮಾಡಬೇಕು. ಯುವಕರು ಸಮೃದ್ಧ ಕರ್ನಾಟಕವನ್ನು ಕಟ್ಟಲು ಮುಂದೆ ಬರಬೇಕು. ಕೇವಲ ಅಧಿಕಾರಕ್ಕಾಗಿಯೇ ರಾಜಕಾರಣ ಮಾಡಬಾರದು ಎಂದು ಹೇಳಿದರು.
ಜನರೊಂದಿಗೆ ಜನತಾದಳ ಯಾತ್ರೆ ಮೂಲಕ ಪಕ್ಷ ಸಂಘಟಿಸಲು ರಾಜ್ಯದಾದ್ಯಂತ ಸಂಚರಿಸುವಂತೆ ದೇವೇಗೌಡರು ಸೂಚಿಸಿದ್ದಾರೆ. ಪ್ರವಾಸ ಕಾಲದಲ್ಲಿ ಜನರು ತೋರಿಸುತ್ತಿರುವ ಪ್ರೀತಿ, ವಿಶ್ವಾಸ, ಅಭಿಮಾನವನ್ನು ನೋಡಿ ಹೃದಯ ತುಂಬಿ ಬರುತ್ತಿದೆ. ಇದು ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಸಂಪಾದಿಸಿರುವ ಆಸ್ತಿ ಎಂದರು.
‘ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಅಲ್ಪಾವಧಿ ಮುಖ್ಯಮಂತ್ರಿಯಾಗಿ ರೂಪಿಸಿದ್ದ ಜನಪರ ಕಾರ್ಯಕ್ರಮ, ಯೋಜನೆ ಇಂದಿಗೂ ಅಚ್ಚಳಿಯದೆ ಉಳಿದಿವೆ. ಗ್ರಾಮ ವಾಸ್ತವ್ಯದಿಂದ ಅತ್ಯಂತ ಹಿಂದುಳಿದ ಗ್ರಾಮಗಳ ಅಭಿವೃದ್ಧಿಗಾಗಿ ರೂಪಿಸಿದ್ದ ಸುವರ್ಣ ಗ್ರಾಮ ಯೋಜನೆ, ಹೆಣ್ಣುಮಕ್ಕಳ ಸಬಲೀಕರಣ, ಆರ್ಥಿಕವಾಗಿ ಶಕ್ತಿ ತುಂಬುವ ಭಾಗ್ಯಲಕ್ಷ್ಮೀ ಯೋಜನೆಗಳನ್ನು ಜನರು ಸ್ಮರಿಸುತ್ತಿದ್ದಾರೆ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ತೋರಿದ ಹೃದಯ ವೈಶಾಲ್ಯವನ್ನು ನನಗೂ ತೋರಿಸಬೇಕು’ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಮಾತನಾಡಿ, ರಾಜ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಈಗಾಗಲೇ 26 ಕ್ಷೇತ್ರಗಳಲ್ಲಿ ಪ್ರವಾಸಕೈಗೊಂಡು ಗ್ರಾಮ ಪಂಚಾಯತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯತಿ ಚುನಾವಣೆ ವೇಳೆಗೆ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸಿ ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ಮಾಡಿರುವ ಕೆಲಸಗಳನ್ನು ತಲುಪಿಸಬೇಕು. ಅವರ ಕೆಲಸ ಕಾರ್ಯ ನಮಗೆ ಶ್ರೀರಕ್ಷೆಯಾಗಿದೆ ಎಂದರು.
ತಾಲ್ಲೂಕಿನ ಸಂತೇಕಲ್ಲಹಳ್ಳಿ ಬಳಿ ಜೆಸಿಬಿ ಕ್ರೇನ್ ಮೂಲಕ ದೊಡ್ಡ ಹಾರವನ್ನು ಹಾಕಿ ನಿಖಿಲ್ ಕುಮಾರಸ್ವಾಮಿಯನ್ನು ಸ್ವಾಗತಿಸಲಯಿತು. ಕೈವಾರದ ಶ್ರೀ ಯೋಗಿನಾರೇಯಣ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಚಿನ್ನಸಂದ್ರದಲ್ಲಿ ಚಹಾ ಸೇವಿಸಿ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮೂಲಕ ಜೆಡಿಎಸ್ ಕಾರ್ಯಾಲಯ ತಲುಪಿದರು.
ಸಂಸದ ಎಸ್ ಮಲ್ಲೇಶ್ ಬಾಬು, ಶ್ರೀನಿವಾಸಪುರ ಕ್ಷೇತ್ರದ ಶಾಸಕ ವೆಂಕಟಶಿವಾರೆಡ್ಡಿ, ಶಿಡ್ಲಘಟ್ಟ ಕ್ಷೇತ್ರದ ಶಾಸಕ ಮೇಲೂರು ರವಿ ಕುಮಾರ್, ವಿಧಾನ ಪರಿಷತ್ತಿನ ಮಾಜಿ ಸದಸ್ಯ ತೂಪಲ್ಲಿ ಚೌಡರೆಡ್ಡಿ, ಯುವ ಘಟಕ ರಾಜ್ಯ ಉಪಾಧ್ಯಕ್ಷ ಬಿ ಪ್ರಭಾಕರ್, ನಗರಸಭಾ ಸದಸ್ಯರಾದ ಅಗ್ರಹಾರ ಮುರಳಿ, ಟೊಮೆಟೊ ಗೌಸ್ ಪಾಷಾ, ಮುಖಂಡರಾದ ಬೈರೆಡ್ಡಿ, ವೆಂಕಟರೆಡ್ಡಿ, ಅಬ್ದುಲ್ ಸಮದ್, ಟಿಪ್ಪು ನಗರ ನದೀಮ್ ಪಾಷಾ, ಅಪ್ಸರ್ ಪಾಷಾ, ಜಮೀಲ್ ಭಾಗವಹಿಸಿದ್ದರು.
ಸಂಘಟನೆ ಸುಲಭದ ಮಾತಲ್ಲ. ಬದ್ಧತೆ ಮತ್ತು ಸಾಮಾಜಿಕ ಕಾಳಜಿ ಇರಬೇಕು. ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನವನ್ನು ನಿಷ್ಠೆಯಿಂದ ಮಾಡಬೇಕು. ಕಾರ್ಯಕರ್ತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದುನಿಖಿಲ್ ಕುಮಾರಸ್ವಾಮಿ ಅಧ್ಯಕ್ಷ ಜೆಡಿಎಸ್ ಯುವ ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.