
ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ರಾಜಕೀಯ ಹಗೆತನ ಮೇರೆ ಮೀರಿದೆ. ಎದುರಾಳಿ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಆರೋಪಿಸಿದರು.
ತಾಲ್ಲೂಕಿನ ಪುರದಗಡ್ಡೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜಕೀಯ ಹಗೆತನ ಮತ್ತು ಸೇಡು ತೀರಿಸಿಕೊಳ್ಳಬೇಕು ಎಂದಿದ್ದರೆ ಇವರು (ಡಾ.ಎಂ.ಸಿ.ಸುಧಾಕರ್) ಶಾಸಕರೇ ಆಗುತ್ತಿರಲಿಲ್ಲ ಎಂದರು.
‘ಈ ಕ್ಷೇತ್ರದ ಶಾಸಕ ಮಾತೆತ್ತಿದರೆ ದಲಿತರ ಉದ್ಧಾರ ಮಾಡುವೆ ಎನ್ನುತ್ತಾರೆ. ದಲಿತರ ಮುಖಂಡರ ಮೇಲೆ ರಾಜಕೀಯ ದುರುದ್ದೇಶದಿಂದ ಪೊಕ್ಸೊ ಪ್ರಕರಣ ದಾಖಲಿಸುವರು. 25ರಿಂದ 30 ಜನರ ಸಮ್ಮುಖದಲ್ಲಿ ಸಭೆ ನಡೆದಿದೆ. ಆ ನಂತರ ಪೊಕ್ಸೊ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಎಸ್‌ಪಿ ಮತ್ತು ಐಜಿ ಅವರ ಜೊತೆ ಮಾತನಾಡಿದ್ದೇನೆ. ನೀವು ದಲಿತ ಮುಖಂಡರನ್ನು ಬಂಧಿಸಿ ನೋಡಿ ನಿಮ್ಮಲ್ಲಿ ಒಬ್ಬರ ತಲೆದಂಡ ಆಗುವವರೆಗೆ ಬಿಡುವುದಿಲ್ಲ ಎಂದಿದ್ದೇನೆ’ ಎಂದು ಹೇಳಿದರು.
‘ಯಾರೊ ಒಬ್ಬ ಆತ್ಮಹತ್ಯೆ ಮಾಡಿಕೊಂಡರೆ ನನ್ನ ಮೇಲೆ ಉದ್ದೇಶ ಪೂರ್ವಕವಾಗಿ ಪ್ರಕರಣ ದಾಖಲಿಸುತ್ತಾರೆ. ದುರುದ್ದೇಶ, ಷಡ್ಯಂತ್ರ ಮತ್ತು ರಾಜಕೀಯ ಹಗೆಯ ಕಾರಣದಿಂದ ಈ ರೀತಿ ಮಾಡುತ್ತಿದ್ದಾರೆ. ನಿಮ್ಮ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳಬೇಕು ಎಂದಿದ್ದರೆ ನನಗೆ ನಿಮಗಿಂತಲೂ ಹೆಚ್ಚಿನ ಅಧಿಕಾರ ಇತ್ತು. ರಾಜಕೀಯಕ್ಕಾಗಿ ಸುಳ್ಳು ಪ್ರಕರಣಗಳನ್ನು ನಾನು ದಾಖಲಿಸಿಲ್ಲ’ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.
ಭಿಕ್ಷೆ ಬೇಡಿಲ್ಲ: ಸುಧಾಕರ್ ಕಡತಗಳನ್ನು ವಿಲೇವಾರಿ ಮಾಡಿದೆ ಎಂದಿದ್ದ ಪ್ರದೀಪ್ ಈಶ್ವರ್ ಮಾತಿಗೆ ಪ್ರತಿಕ್ರಿಯಿಸಿದ ಸಂಸದರು ‘ನನ್ನ ಕಡತವಿರಲಿ ಅಥವಾ ಜನರ ಕಡತಗಳು ಇರಲಿ ನಿಯಮಗಳ ರೀತಿ ಇದ್ದರೆ ಆ ಕಡತಗಳನ್ನು ವಿಲೇವಾರಿ ಮಾಡಬೇಕು. ನಿಯಮಗಳ ಉಲ್ಲಂಘನೆ ಆಗಿದ್ದರೆ ಆ ಕೆಲಸ ಮಾಡುವುದಿಲ್ಲ. ಸರ್ಕಾರ ಇವರಪ್ಪನದ್ದಾ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಪದೇ ಪದೇ ಯಾರ ಕಾಲನ್ನೂ ಹಿಡಿದು ಭಿಕ್ಷೆಗೆ ಹೋಗಿಲ್ಲ. ನಮ್ಮ ಮನೆಯ ಮುಂದೆ ದಿನದ 24 ಗಂಟೆ ಬಂದು ಕಾಯುತ್ತ ಭಿಕ್ಷೆ ಎತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
‘ಚಿಕ್ಕಬಳ್ಳಾಪುರ ಜಿಲ್ಲೆಗೆ ಹಾಲು ಒಕ್ಕೂಟ ತಂದ ಸಂತೃಪ್ತಿ ನನಗೆ ಇದೆ. ವೈದ್ಯಕೀಯ ಕಾಲೇಜು ತರಬೇಕು ಎಂದುಕೊಂಡಿದ್ದೆ ಆ ಕೆಲಸ ಮಾಡಿದೆ. ಇಂದಿನ ಜಿಲ್ಲಾ ಉಸ್ತುವಾರಿ ಸಚಿವರು ಒಕ್ಕೂಟವು ಕೋಲಾರದಲ್ಲಿಯೇ ಇರಲಿ ಎಂದಿದ್ದರು. ನಾನು ಹೈಕೋರ್ಟ್ ಮೊರೆ ಹೋಗಿ ಜಿಲ್ಲೆಗೆ ಒಕ್ಕೂಟ ತಂದಿದ್ದೇನೆ’ ಎಂದರು.
‘ಎರಡು ವರ್ಷಗಳ ನಂತರ ಮತ್ತೆ ನಮ್ಮ ಸರ್ಕಾರ ಬರುತ್ತದೆ. ಆಗ ಚಿಮುಲ್ ಏನು ಮಾಡಬೇಕೊ ಆ ಕೆಲಸ ಮಾಡುತ್ತೇವೆ. ಚಿಮುಲ್ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಸರ್ಕಾರ ಅವರದ್ದೇ ಇದೆ. ಸಹಕಾರ ಕ್ಷೇತ್ರದಲ್ಲಿ ಗೆಲ್ಲುವವರೆಗೂ ನಮ್ಮವರು ಗೆದ್ದ ನಂತರ ಎಲ್ಲರೂ ಒಂದೇ ಪಕ್ಷ’ ಎಂದರು.
‘ತುಮಕೂರಿನಲ್ಲಿ ಮಹಾತ್ಮ ಗಾಂಧಿ ಕ್ರೀಡಾಂಗಣದ ಹೆಸರನ್ನು ತೆಗೆದು ಯಾರ ಹೆಸರು ಇಡಲು ಹೊರಟಿದ್ದಾರೆ? ದೇಶಕ್ಕೆ ಸಂಜಯ್ ಗಾಂಧಿ ಯಾವ ಕೊಡುಗೆ ನೀಡಿದ್ದಾರೆ? ಹೀಗಿದ್ದರೂ ಅವರ ಹೆಸರು ಆಸ್ಪತ್ರೆಗೆ ಇಡಲಾಗಿದೆ. ಒಂದೇ ಕುಟುಂಬದ ಹೆಸರನ್ನು ಸರ್ಕಾರದ ಯೋಜನೆಗಳಿಗೆ ಇಡಬೇಕು ಎನ್ನುವುದು ಕಾಂಗ್ರೆಸ್ ನೀತಿ’ ಎಂದು ಟೀಕಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮರಳಕುಂಟೆ ಕೃಷ್ಣಮೂರ್ತಿ, ಸುನೀಲ್, ರಘು, ಶ್ರೀಧರ್ ಮತ್ತಿತರರು ಇದ್ದರು.
ಪುರದಗಡ್ಡೆಯಲ್ಲಿ ಗೋದಾನ ಪುರದಗಡ್ಡೆ ಗ್ರಾಮದಲ್ಲಿ ಮುಖಂಡರಾದ ಸುನಿಲ್ ಮತ್ತು ರವಿ ನೇತೃತ್ವದಲ್ಲಿ ಗೋದಾನ ಗ್ರಾಮದ ನಡೆಯಿತು. 35ಕ್ಕೂ ಹೆಚ್ಚು ಕುಟುಂಬಗಳಿಗೆ ಗೋವುಗಳನ್ನು ದಾನ ನೀಡಲಾಯಿತು. ‘ಗ್ರಾಮದ ಅರ್ಥದಷ್ಟು ಕುಟುಂಬಗಳಿಗೆ ಉಚಿತವಾಗಿ ಗೋದಾನ ಮಾಡಿ ಮಾಡಿದ್ದಾರೆ. ಇದು ಶ್ರೇಷ್ಟ ಕಾರ್ಯ. ಈ ಕುಟುಂಬಗಳು ಬದುಕು ಕಟ್ಟಿಕೊಳ್ಳಲಿವೆ’ ಎಂದು ಡಾ.ಕೆ.ಸುಧಾಕರ್ ತಿಳಿಸಿದರು. ಗೋಹತ್ಯೆಯು ಪಾಪದ ಕೆಲಸ. ಕಾಂಗ್ರೆಸ್ ಸರ್ಕಾರವು ಸಮುದಾಯದ ಓಲೈಕೆಗಾಗಿ ಗೋಹತ್ಯೆಯ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.