ಗೌರಿಬಿದನೂರು: ಇಲ್ಲಿನ ನಗರಸಭೆ ಕಚೇರಿಯಲ್ಲಿ ಸೋಮವಾರ ಖಾತಾ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ 250ಕ್ಕೂ ಫಲಾನುಭವಿಗಳಿಗೆ ಇ–ಖಾತಾ ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಈವರೆಗೂ ನಾಲ್ಕೂವರೆ ಸಾವಿರ ಇ- ಖಾತೆಗಳನ್ನು ನಗರದ ಆಸ್ತಿದಾರರಿಗೆ ಸಂಪೂರ್ಣ ಪರದರ್ಶಕವಾಗಿ ವಿತರಿಸಲಾಗಿದೆ. ಖಾತೆ ವಿಭಾಗದಲ್ಲಿ ಲೋಪದೋಷಗಳನ್ನು ನಿಯಂತ್ರಿಸಲು ಪ್ರತೀವಾರ ತಾವೇ ಇ–ಖಾತಾ ಹಮ್ಮಿಕೊಂಡಿದ್ದೇನೆ. ಇದರಿಂದಾಗಿ ನಗರದ ಎಲ್ಲ ಫಲಾನುಭವಿಗಳಿಗೆ ಯಾವುದೇ ತೊಂದರೆ ಇಲ್ಲದೆ ಇ–ಖಾತೆ ಲಭ್ಯವಾಗುತ್ತಿವೆ ಎಂದು ತಿಳಿಸಿದರು.
ಇ–ಖಾತೆ ಪಡೆಯುವ ವಿಚಾರದಲ್ಲಿ ಸಾರ್ವಜನಿಕರು ಎದುರಿಸುವ ಯಾವುದೇ ಸಮಸ್ಯೆಗಳಿದ್ದರೂ, ಖುದ್ದಾಗಿ ತಮ್ಮನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.
ನಗರಸಭೆ ಅಧ್ಯಕ್ಷ ಲಕ್ಷ್ಮಿನಾರಾಯಣ್ ಮಾತನಾಡಿ, ಜನಪರ ಆಡಳಿತಕ್ಕೆ ತಾವು ಹೆಚ್ಚು ಒತ್ತು ನೀಡುತ್ತಿದ್ದು, ನಗರಸಭೆಗೆ ಸಂಬಂಧಿಸಿದಂತೆ ಖಾತಾ ಅದಾಲತ್ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲಾಗಿದೆ. ನಗರದ ಪ್ರತಿ ವಾರ್ಡ್‌ಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಪೌರಾಯುಕ್ತ ಕೆ.ಎಂ. ರಮೇಶ್, ನಗರಸಭಾ ಸದಸ್ಯ ಅಮರನಾಥ್, ಮಂಜುಳಾ, ಪದ್ಮಾವತಮ್ಮ, ರಾಜ್ ಕುಮಾರ್, ಗೋಪಾಲ್, ಗಿರೀಶ್ ಹಾಗೂ ಡಿ.ಜೆ. ಚಂದ್ರಮೋಹನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.