ADVERTISEMENT

ಗೌರಿಬಿದನೂರು: ಹೆದ್ದಾರಿ ಅಭಿವೃದ್ಧಿಗೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 6:45 IST
Last Updated 6 ಜನವರಿ 2026, 6:45 IST
ಗೌರಿಬಿದನೂರು ನಗರದಲ್ಲಿ ಹಾದು ಹೋಗುವ ರಾಷ್ಟೀಯ ಹೆದ್ದಾರಿ ನಿಯಮಗಳನ್ವಯ ಅಭಿವೃದ್ಧಿಪಡಿಸಲು ಒತ್ತಾಯಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು
ಗೌರಿಬಿದನೂರು ನಗರದಲ್ಲಿ ಹಾದು ಹೋಗುವ ರಾಷ್ಟೀಯ ಹೆದ್ದಾರಿ ನಿಯಮಗಳನ್ವಯ ಅಭಿವೃದ್ಧಿಪಡಿಸಲು ಒತ್ತಾಯಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು   

ಗೌರಿಬಿದನೂರು: ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 69 ಅನ್ನು ನಿಯಮಾನುಸಾರ ಅಭಿವೃದ್ಧಿಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ರೈತ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದವು.

ಅಖಿಲ ಕರ್ನಾಟಕ ರೈತ ಸಂಘಟನೆ ತಾಲ್ಲೂಕು ಅಧ್ಯಕ್ಷ ರವಿಚಂದ್ರ ರೆಡ್ಡಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೆದ್ದಾರಿಯ ಎರಡು ಕಡೆಯ ರಸ್ತೆಯನ್ನು 80 ಎಂಬುದಾಗಿ ಗುರುತಿಸಿರುವುದು ಅವೈಜ್ಞಾನಿಕ. ಸರ್ವೀಸ್ ರಸ್ತೆಯೂ ಇದು ಒಳಗೊಂಡಿರುವುದರಿಂದ ರಸ್ತೆಯ ಅಗಲ ಕಡಿಮೆಯಾಗುತ್ತದೆ. ವೇಗವಾಗಿ ಬೆಳೆಯುತ್ತಿರುವ ನಗರದ ದೂರದೃಷ್ಟಿ ಇಟ್ಟುಕೊಂಡು ಹಾಗೂ ರಾಷ್ಟ್ರೀಯ ಹೆದ್ದಾರಿ ನಿಯಮಗಳ ಅನ್ವಯ 50:50ರಂತೆ ಒಟ್ಟಾರೆ 100 ಅಡಿ ಅಗಲದ ಹೆದ್ದಾರಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು. 

ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಮತ್ತು ನಗರಸಭೆಯ ನಿರ್ಲಕ್ಷ್ಯದಿಂದ ಕಟ್ಟಡಗಳ ತೆರುವು ಕಾರ್ಯ ವಿಳಂಬವಾಗುತ್ತಿದೆ. ಇದರಿಂದ ಜನ ಮತ್ತು ವಾಹನ ಸವಾರರಿಗೆ ಪ್ರತಿನಿತ್ಯ ತೊಂದರೆಯಾಗುತ್ತಿದೆ. ಕೂಡಲೇ ಕಟ್ಟಡಗಳನ್ನು ತೆರವುಗೊಳಿಸಿ, ನಿಯಮಾನುಸಾರ ರಸ್ತೆ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು. 

ADVERTISEMENT

ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸತ್ಯನಾರಾಯಣ ಮಾತನಾಡಿ, ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಸ್ತೆ ಅಭಿವೃದ್ಧಿ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದರೆ ಅಧಿಕಾರಿಗಳು ತ್ವರಿತ ಕಾಮಗಾರಿಗೆ ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಕರವೇ ಕಾರ್ಯದರ್ಶಿ ಪ್ರಭು ಮಾತನಾಡಿ, ನಿಯಮನುಸಾರ ರಸ್ತೆ ಆಗಲೀಕರಣ ಮಾಡಿ, ಸಾರ್ವಜನಿಕರು ಮತ್ತು ರೈತರಿಗೆ ಅನುಕೂಲ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ತಾಲ್ಲೂಕಿನ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಮತ್ತು ದಲಿತಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡುತ್ತಿವೆ. ನಗರದಲ್ಲಿ ಪ್ರತಿದಿನ 30ರಿಂದ 40 ಸಾವಿರ ಜನರು ರಸ್ತೆಗಳಲ್ಲಿ ಸಂಚಾರ ಮಾಡುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ನಿಯಮನುಸಾರ ರಸ್ತೆ ಅಗಲೀಕರಣ ಮಾಡಿದರೆ, ಭವಿಷ್ಯದಲ್ಲಿ ಯಾರಿಗೂ ತೊಂದರೆಯಾಗುವುದಿಲ್ಲ. ಕೇಂದ್ರ ಸರ್ಕಾರ ರೈಲ್ವೆ ಜಾಗವನ್ನು ಯಾರು ಒತ್ತುವರಿ ಮಾಡದಂತೆ ನಿಯಮ ರೂಪಿಸಿದೆ. ಅದೇ ರೀತಿ ಹೆದ್ದಾರಿ ಪ್ರಾಧಿಕಾರ ಕೂಡ ನಿಯಮಗಳನ್ನು ರೂಪಿಸಬೇಕು ಎಂದರು.

ಈ ಸಂದರ್ಭದಲ್ಲಿ ಕರವೇ ಜಿ.ಎಲ್. ಅಶ್ವಥ್ ನಾರಾಯಣ್, ರಮಣರೆಡ್ಡಿ, ಆದಿಮೂರ್ತಿ ರೆಡ್ಡಿ, ಸುರೇಶ್ ಬಾಬು, ಕೃಷ್ಣಪ್ಪ, ಲಕ್ಷ್ಮಿದೇವಮ್ಮ, ಲಕ್ಷ್ಮಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.