ADVERTISEMENT

ಚಿಕ್ಕಬಳ್ಳಾಪುರ: ತಿಂಗಳಿಂದ ನಗರಸಭೆ ಶೌಚಾಲಯಕ್ಕೆ ಬೀಗ!

ಮೂತ್ರಕ್ಕೆ ನಗರಸಭೆ ಗೋಡೆಗಳನ್ನು ಆಶ್ರಯಿಸಿರುವ ಪೌರಕಾರ್ಮಿಕರು, ನಾಗರಿಕರು

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 15:31 IST
Last Updated 24 ಜೂನ್ 2025, 15:31 IST
ನಗರಸಭೆ ಆವರಣದ ಮೂಲೆಯೇ ಮೂತ್ರಾಲಯ
ನಗರಸಭೆ ಆವರಣದ ಮೂಲೆಯೇ ಮೂತ್ರಾಲಯ   

ಚಿಕ್ಕಬಳ್ಳಾಪುರ: ಬಯಲಲ್ಲೇ ಮೂತ್ರ ವಿಸರ್ಜನೆ ಮಾಡುವ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರು, ಪೌರಕಾರ್ಮಿಕರು. ಆವರಣಕ್ಕೆ ಅಡರುವ ಮೂತ್ರದ ವಾಸನೆ–ಚಿಕ್ಕಬಳ್ಳಾಪುರ ನಗರಸಭೆಯ ಆವರಣದಲ್ಲಿ ಸದ್ಯ ಕಾಣುವ ಸ್ಥಿತಿ ಇದು.

ನಗರಸಭೆ ಆವರಣದಲ್ಲಿದ್ದ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಹಾಕಿ ಮೂರ್ನಾಲ್ಕು ತಿಂಗಳು ಕಳೆದಿದೆ. ಕೆಲಸ ಕಾರ್ಯಗಳಿಗೆ ನಗರಸಭೆಗೆ ಬರುವ ನಾಗರಿಕರು ಮತ್ತು ಪೌರಕಾರ್ಮಿಕರಿಗೆ ನಗರಸಭೆ ಆವರಣದಲ್ಲಿನ ಗೋಡೆಗಳು ಮತ್ತು ಆಸುಪಾಸಿನ ಗಲ್ಲಿಗಳೇ ಮೂತ್ರಾಲಯವಾಗಿವೆ.

ನಗರಸಭೆ ಆವರಣದಲ್ಲಿದ್ದ ಶೌಚಾಲಯ ಅಧ್ವಾನದ ಸ್ಥಿತಿಯಲ್ಲಿ ಇತ್ತು. ಪೈಪ್‌ಗಳು ಹಾಳಾಗಿದ್ದವು. ಇದು ಹಳೆಯದು ಎನ್ನುವುದನ್ನು ಅಲ್ಲಿನ ಸ್ಥಿತಿಗತಿಗಳೇ ಸಾರಿ ಹೇಳುತ್ತಿದ್ದವು. ನಿರ್ವಹಣೆಯ ಕೊರತೆಯೂ ಇತ್ತು. ಹೀಗೆ ಅಧ್ವಾನವಾಗಿದ್ದ ಶೌಚಾಲಯವನ್ನೇ ನಗರಸಭೆ ಸಿಬ್ಬಂದಿ, ಪೌರಕಾರ್ಮಿಕರು ಮತ್ತು ನಿತ್ಯ ಕೆಲಸ ಕಾರ್ಯಗಳಿಗಾಗಿ ಬರುತ್ತಿದ್ದ ನಾಗರಿಕರು ಬಳಸುತ್ತಿದ್ದರು. 

ADVERTISEMENT

ಆದರೆ ದುರಸ್ತಿ ಕಾರಣದಿಂದ ಕೆಲವು ತಿಂಗಳಿನಿಂದ ಈ ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಈ ಪರಿಣಾಮ ನಗರಸಭೆಯ ಆವರಣದಲ್ಲಿನ ಗೋಡೆಗಳು ಮತ್ತು ಕಿರಿದಾದ, ಮರೆಯಾದ ಸ್ಥಳಗಳನ್ನು ನಾಗರಿಕರು, ಪೌರಕಾರ್ಮಿಕರು ಮೂತ್ರಕ್ಕೆ ಆಶ್ರಯಿಸಿದ್ದಾರೆ.

‘ಶೌಚಾಲಯವು ದುರಸ್ತಿಗೆ ಬಂದಿತ್ತು. ಪೈಪ್‌ಗಳು ಕಿತ್ತು ಹೋಗಿದ್ದವು. ಈ ಕಾರಣದಿಂದ ಬಂದ್ ಮಾಡಲಾಗಿದೆ’ ಎಂದು ನಗರಸಭೆ ಮೂಲಗಳು ತಿಳಿಸುತ್ತವೆ.

ಸಿಬ್ಬಂದಿ, ಪೌರಕಾರ್ಮಿಕರಿಗೂ ತೊಂದರೆ: ನಿತ್ಯ ಬೆಳಿಗ್ಗೆಯೇ ನಗರಸಭೆ ಆವರಣಕ್ಕೆ ಪೌರಕಾರ್ಮಿಕರು ಬರುತ್ತಾರೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಇಲ್ಲಿರುವರು. ಶೌಚಾಲಯ ಬಂದ್‌ ಆಗಿರುವ ಕಾರಣ ಪೌರಕಾರ್ಮಿಕರು ನಗರಸಭೆಯ ಅಂಗಳವನ್ನೇ ಮೂತ್ರಕ್ಕೆ ಆಶ್ರಯಿಸಿದ್ದಾರೆ. ಜೊತೆಗೆ ಬೆಳಿಗ್ಗೆಯಿಂದ ಸಂಜೆಯವರೆಗೂ ಕೆಲಸ ನಿರ್ವಹಿಸುವ ಸಿಬ್ಬಂದಿಗೂ ಈ ಮೂತ್ರಾಲಯ ಬಂದ್‌ನ ಬಿಸಿ ತಟ್ಟಿದೆ. 

ಚಿಕ್ಕಬಳ್ಳಾಪುರ ನಗರಸಭೆಯು ನಗರದ ನಡುಭಾಗದಲ್ಲಿದೆ. ಜನ ಸಂಚಾರವೂ ಹೆಚ್ಚು. ನಗರಸಭೆ ಸುತ್ತಮುತ್ತ ಎಲ್ಲಿಯೂ ಸುಸಜ್ಜಿತವಾದ ಸಾರ್ವಜನಿಕ ಶೌಚಾಲಯ ಇಲ್ಲ. ಈ ಕಾರಣದಿಂದ ರಸ್ತೆಯಲ್ಲಿ ಹೋಗುವವರು ಸಹ ಮೂತ್ರಕ್ಕೆ ಈ ಶೌಚಾಲಯವನ್ನು ಆಶ್ರಯಿಸಿದ್ದರು. ಆದರೆ ಈಗ ಮೂತ್ರಕ್ಕೆ ಬರುವವರು ಬೀಗ ಹಾಕಿರುವುದನ್ನು ಕಂಡು ನಗರಸಭೆಯ ಮೂಲೆಗಳ ಮರೆಯಲ್ಲಿ ನಿಂತು ಮೂತ್ರ ಮಾಡುವರು. 

ದುರಸ್ತಿ ಆಗುವವರೆಗೂ ತಾತ್ಕಾಲಿಕವಾಗಿ ನಗರಸಭೆಯು ಶೌಚಾಲಯಕ್ಕೆ ಕ್ರಮವಹಿಸಬೇಕು. ಇ–ಟಾಯ್ಲೆಟ್‌ಗಳನ್ನು ಅಳವಡಿಸಬೇಕು ಎಂದು ನಾಗರಿಕರು ಆಗ್ರಹಿಸುವರು.

‘ಇ–ಟಾಯ್ಲೆಟ್‌ ಅಥವಾ ತಾತ್ಕಾಲಿಕ ವ್ಯವಸ್ಥೆ ಅಗತ್ಯ’

ಇಲ್ಲಿನ ಶೌಚಾಲಯವನ್ನು ಬಂದ್ ಮಾಡಬೇಕು. ದುರಸ್ತಿಗೊಳಿಸಬೇಕು ಎನ್ನುವುದು ನಗರಸಭೆಗೆ ಮೊದಲೇ ಗೊತ್ತಿರುತ್ತದೆ. ಅಂದ ಮೇಲೆ ಇ–ಟಾಯ್ಲೆಟ್ ಅಥವಾ ತಾತ್ಕಾಲಿಕ ವ್ಯವಸ್ಥೆ ಮಾಡಿ ಇದನ್ನು ದುರಸ್ತಿ ಮಾಡಬೇಕಾಗಿತ್ತ ಎನ್ನುತ್ತಾರೆ ನಾಗರಿಕ ಮಂಜುನಾಥ್. 

ಹಿರಿಯ ನಾಗರಿಕರು ನಗರಸಭೆಗೆ ಕೆಲಸ ಕಾರ್ಯಕ್ಕೆ ಬರುತ್ತಾರೆ. ಮೂತ್ರಕ್ಕೆ ಅವಸರ ಆದರೆ ಏನು ಮಾಡುವರು. ಇಲ್ಲಿಯೇ ಎಲ್ಲಾದರೂ ಮೂಲೆಗಳಲ್ಲಿ ವಿಸರ್ಜಿಸುವರು. ನಗರಸಭೆಯು ಈ ವಿಚಾರವಾಗಿ ಮೊದಲೇ ಸೂಕ್ತ ನಿರ್ಧಾರ ಮಾಡಬೇಕಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ನಗರಸಭೆ ಆವರಣದ ಮೂಲೆಯೇ ಮೂತ್ರಾಲಯ
ನಗರಸಭೆ ಆವರಣದಲ್ಲಿನ ಶೌಚಾಲಯಕ್ಕೆ ಬೀಗ ಹಾಕಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.