
ಚಿಂತಾಮಣಿ: ಜಿಲ್ಲೆ ಬಯಲುಸೀಮೆಯಾಗಿದ್ದು ಮಳೆಯ ಕೊರತೆಯಿಂದ ಕುಡಿಯಲು ಬಹುತೇಕ ಕೊಳವೆ ಬಾವಿಗಳ ನೀರನ್ನೇ ಆಶ್ರಯಿಸಲಾಗಿದೆ. ಅಂತರ್ಜಲ ತೀವ್ರವಾಗಿ ಕುಸಿದಿದೆ. ಸಾವಿರಾರು ಅಡಿಗಳ ಆಳದಿಂದ ಬರುವ ನೀರು ನೈಟ್ರೇಟ್, ಪ್ಲೋರೈಡ್ ಯುಕ್ತವಾಗಿರುತ್ತದೆ. ಈ ನೀರನ್ನು ಕುಡಿಯುವುದರಿಂದ ಜನರು ರೋಗ ರುಜಿನುಗಳಿಗೆ ತುತ್ತಾಗಬೇಕಾಗುತ್ತದೆ. ಹೀಗಾಗಿ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪಡೆಯುವುದು ಅವರ ಹಕ್ಕಾಗಿದೆ.
ಅಂತರ್ಜಲ ಸಂಪನ್ಮೂಲ ಮೌಲೀಕರಣ ಪ್ರಕಾರ ಚಿಂತಾಮಣಿ ತಾಲ್ಲೂಕು ಅಂತರ್ಜಲ ಅತಿ ಬಳಕೆ ತಾಲ್ಲೂಕು ಎಂದು ಗುರುತಿಸಲಾಗಿದೆ. ಕೊಳವೆ ಬಾವಿಗಳ ನೀರಿನಲ್ಲಿ ನೈಟ್ರೇಟ್ ಮತ್ತು ಫ್ಲೋರೈಡ್ ಅಂಶ ಮಿತಿಗಿಂತ ಅಧಿಕವಾಗಿದೆ ಸಣ್ಣ ನೀರಾವರಿ ಇಲಾಖೆ ಮೂಲಗಳು ತಿಳಿಸುತ್ತವೆ. ಹೀಗಾಗಿ ಶುದ್ಧ ನೀರಿನ ಘಟಕಗಳ ಬೇಡಿಕೆ ಹೆಚ್ಚಾಗಿದೆ. ಅತಿ ಕಡಿಮೆ ಖರ್ಚಿನಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಲಕ್ಷಾಂತರ ರೂ ಖರ್ಚು ಮಾಡಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ.
ಆದರೆ ಘಟಕಗಳ ನಿರ್ವಹಣೆ ಸವಾಲಾಗಿದೆ. ಹಿಂದೆ ಘಟಕಗಳ ನಿರ್ವಹಣೆ ಹೊಣೆಯನ್ನು ಖಾಸಗಿ ಏಜೆನ್ಸಿಗಳು ನಿರ್ವಹಿಸುತ್ತಿದ್ದವು. ಈಗ ಸಂಪೂರ್ಣವಾಗಿ ಗ್ರಾಮ ಪಂಚಾಯಿತಿಗಳಿಗೆ ನಿರ್ವಹಣೆಯ ಹೊಣೆ ನೀಡಲಾಗಿದೆ. ಅನುದಾನದ ಕೊರತೆ, ತಾಂತ್ರಿಕ ಜ್ಞಾನದ ಕೊರತೆಯಿಂದ ನಿರ್ವಹಣೆ ಸಮಸ್ಯೆ ಎದುರಾಗಿದೆ. ಒಮ್ಮೆ ಯಂತ್ರಗಳು ಕೆಟ್ಟರೆ ₹15-20 ಸಾವಿರ ಖರ್ಚು ಬರುತ್ತದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ತಿಳಿಸಿದರು.
ಕೆಲವು ಕಡೆ ಪಂಪ್, ಮೋಟಾರು ಮತ್ತಿತರ ಪರಿಕರಗಳನ್ನು ಕದ್ದುಕೊಂಡು ಹೋಗುತ್ತಾರೆ. ಗ್ರಾಮೀಣ ನೀರು ಸರಬರಾಜು ಅಭಿವೃದ್ಧಿ ನಿಗಮದಿಂದ ತಿಂಗಳಿಗೆ ₹3 ಸಾವಿರದಂತೆ ನಿರ್ವಹಣೆ ಅನುದಾನ ದೊರೆಯುತ್ತದೆ. ಅದು ಪ್ರತಿ ತಿಂಗಳು ನೀಡದೆ 2 ಅಥವಾ 3 ವರ್ಷಕ್ಕೊಮ್ಮೆ ನೀಡುತ್ತಾರೆ. ಘಟಕಗಳಲ್ಲಿ ಯಂತ್ರಗಳು ಕೆಟ್ಟು ನಿಂತರೆ ಬಾಗಿಲು ಬಂದ್ ಆಗುತ್ತದೆ. ಗ್ರಾಮ ಪಂಚಾಯಿತಿಗಳಲ್ಲಿ ಸಂಪನ್ಮೂಲದ ಕೊರತೆ ಇರುತ್ತದೆ. ದುರಸ್ತಿಗೆ ತಿಂಗಳುಗಟ್ಟಲೆ ಕಾಯಬೇಕಾಗುತ್ತದೆ.
ತಾಲ್ಲೂಕಿನಲ್ಲಿ ಹಳೆಯ 25 ಘಟಕಗಳು ದುರಸ್ತಿಗಾಗಿ ಕಾದಿವೆ. ಆವುಗಳ ದುರಸ್ತಿಗಾಗಿ ಅಗತ್ಯವಾದ ಅನುದಾನಕ್ಕಾಗಿ ಕ್ರಿಯಾಯೋಜನೆ ತಯಾರಿಸಿ ಗ್ರಾಮೀಣ ನೀರು ಸರಬರಾಜು ಅಭಿವೃದ್ಧಿ ನಿಗಮಕ್ಕೆ ಸಲ್ಲಿಸಲಾಗಿದೆ. ಹಣ ಮಂಜೂರಾದ ಕೂಡಲೇ ದುರಸ್ತಿ ಮಾಡಿಸುತ್ತೇವೆ ಎನ್ನುತ್ತಾರೆ ಅಧಿಕಾರಿಗಳು.
ಕುಡಿಯುವ ಶುದ್ಧ ನೀರು ಜನತೆಯ ಮೂಲ ಹಕ್ಕಾಗಿದೆ. ಶುದ್ಧ ನೀರಿನ ಘಟಕಗಳ ಸ್ಥಾಪನೆ ಉತ್ತಮ ಯೋಜನೆಯಾಗಿದೆ. ಪ್ರತಿಯೊಂದು ಗ್ರಾಮದಲ್ಲೂ ಘಟಕಗಳ ಸ್ಥಾಪನೆ ಮಾಡಬೇಕು. ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಯಂತ್ರಗಳು ಕೆಟ್ಟರೆ ತುರ್ತಾಗಿ ಸರಿಪಡಿಸಬೇಕು ಎಂಬುದು ಗ್ರಾಮೀಣ ಭಾಗದ ಜನರ ಒತ್ತಾಯವಾಗಿದೆ.
ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ತಾಲ್ಲೂಕಿನ ಪ್ರತಿಯೊಂದು ಗ್ರಾಮದಲ್ಲೂ ಶುದ್ಧ ನೀರಿನ ಘಟಕ ಸ್ಥಾಪಿಸಲು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಪಣತೊಟ್ಟಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು 356 ಜನವಸತಿ ಗ್ರಾಮಗಳಿವೆ. ಈಗಾಗಲೇ 248 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ. ಕೆಲವು ನಿರ್ಮಾಣ ಹಂತದಲ್ಲಿವೆ. ಇನ್ನು 54 ಗ್ರಾಮಗಳು ಮಾತ್ರ ಬಾಕಿ ಇವೆ. 2025-26 ಸಾಲಿನ ಒಳಗೆ ಎಲ್ಲ ಗ್ರಾಮಗಳಿಗೂ ಶದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಿಸುವ ಗುರಿಯನ್ನು ಶಾಸಕರು ಹೊಂದಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಪ್ರಜಾವಾಣಿಗೆ ತಿಳಿಸಿದರು.
ಕಳೆದ ಎರಡು ವರ್ಷಗಳಲ್ಲಿ 101 ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಅನುದಾನದಿಂದ 35 ದಾನಿಗಳಿಂದ 66 ಘಟಕ ನಿರ್ಮಾಣವಾಗಿವೆ. ಸಚಿವ ಡಾ.ಎಂ.ಸಿ ಸುಧಾಕರ್ ಯಾವುದೇ ಯೋಜನೆಗೆ ಕೈ ಹಾಕಿದರೂ ಸಾಧಕ-ಬಾಧಕಗಳ ಚಿಂತನೆ ನಡೆಸಿ, ಮುಂದಿನ 40-50 ವರ್ಷಗಳ ದೂರದೃಷ್ಟಿಯನ್ನು ಗಮನದಲ್ಲಿಟ್ಟು ಅದರ ರೂಪುರೇಷೆಗಳನ್ನು ಸಿದ್ದಪಡಿಸುವಂತೆ ಸೂಚಿಸುತ್ತಾರೆ.
ಸುರಕ್ಷಿತ ಪೆಂಟಗನ್ ಆಕಾರದಲ್ಲಿ ಘಟಕಗಳ ವಿನ್ಯಾಸ ರೂಪಿಸಿದ್ದು ಪ್ರತಿಯೊಂದು ಗ್ರಾಮದಲ್ಲೂ ಅದೇ ರೀತಿಯಲ್ಲಿ ನಿರ್ಮಾಣ ಮಾಡಬೇಕು ಎಂಬ ಸೂಚನೆ ನೀಡಿದ್ದಾರೆ. ತಗಡು ಬಳಸುವುದಿಲ್ಲ. ಅಡಿಪಾಯ ಹಾಕಿ ನೀಟಾಗಿ ಮೌಲ್ಡಿಂಗ್ ಮಾಡಿ ಯಂತ್ರಗಳನ್ನು ಇಡುತ್ತಾರೆ. ಕಾಯಿನ್ ಹಾಕುವ ಬಾಕ್ಸನ್ನು ವಿಶಿಷ್ಟವಾಗಿ ರೂಪಿಸಲಾಗಿದೆ.
66 ಘಟಕಗಳನ್ನು ದಾನಿಗಳು ನಿರ್ಮಾಣ ಮಾಡಿ ಆಯಾ ಗ್ರಾಮ ಪಂಚಾಯಿತಿಗೆ ಒಪ್ಪಿಸಿದ್ದಾರೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ವರ್ಷದಲ್ಲಿ 66 ಘಟಕಗಳನ್ನು ದಾನಿಗಳಿಂದ ನಿರ್ಮಾಣ ಮಾಡಿಸಿರುವುದು ದಾಖಲೆಯಾಗಿದೆ.
ಹಿಂದೆ ಖಾಸಗಿ ಏಜೆನ್ಸಿಗಳು ಘಟಕ ನಿರ್ಮಿಸಿ 5 ವರ್ಷದ ನಂತರ ಗ್ರಾಮ ಪಂಚಾಯಿತಿಗೆ ವಹಿಸುತ್ತಿದ್ದರು. ಅಷ್ಟೊತ್ತಿಗೆ ಯಂತ್ರಗಳೆಲ್ಲ ಕೆಟ್ಟಿರುತ್ತಿದ್ದವು. ಈಗ ಸರ್ಕಾರದ ನೀತಿ ಬದಲಾಗಿದ್ದು ದಾನಿಗಳು ಮತ್ತು ಸರ್ಕಾರ ನಿರ್ಮಾಣ ಮಾಡಿದರೂ ಗ್ರಾಮ ಪಂಚಾಯಿತಿಗೆ ವಹಿಸಿಕೊಡಬೇಕು. ನಿರ್ವಹಣೆಯ ಹೊಣೆ ಗ್ರಾಮ ಪಂಚಾಯಿತಿಗೆ ವಹಿಸಲಾಗಿದೆ. ಒಂದು ಸಾವಿರ ಲೀಟರ್ ಸಾಮರ್ಥ್ಯದ ಘಟಕದ ನಿರ್ಮಾಣ ವೆಚ್ಚ ₹7 ರಿಂದ ₹7.5 ಲಕ್ಷವಾಗುತ್ತದೆ. ₹5 ಹಾಕಿ 20 ಲೀಟರ್ ನೀರು ಪಡೆಯಬಹುದು.
ಎಲ್ಲ ಗ್ರಾಮಗಳಿಗೂ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಉನ್ನತ ಶಿಕ್ಷಣ ಸಚಿವ ಆದ್ಯತೆ ನೀಡಿದ್ದಾರೆ. 2026ರ ಅಕ್ಟೋಬರ್ ವೇಳೆಗೆ ಎಲ್ಲ ಗ್ರಾಮಗಳಲ್ಲೂ ಘಟಕ ನಿರ್ಮಾಣ ಮಾಡುವುದಾಗಿ ತೀರ್ಮಾನ ಕೈಗೊಂಡಿದ್ದಾರೆಎಸ್.ಆನಂದ್, ತಾ.ಪಂ. ಕಾರ್ಯನಿರ್ಹಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.