ಚಿಂತಾಮಣಿ: ತಾಲ್ಲೂಕಿನ ಮುರುಗಮಲ್ಲ ಗ್ರಾಮದ ಅಮ್ಮಾಜಾನ್ ಬಾವಾಜಾನ್ ದರ್ಗಾದ ಗಂಧೋತ್ಸವದಲ್ಲಿ ಎರಡನೇ ದಿನ ಶನಿವಾರ ರಾತ್ರಿ ರಾಜ್ಯ ವಕ್ಫ್ ಬೋರ್ಡ್‌ನಿಂದ ಗಂಧೋತ್ಸವ ಅದ್ದೂರಿಯಾಗಿ ನಡೆಯಿತು.
ಗ್ರಾಮದ ವಕ್ಫ್ ಕಚೇರಿಯಿಂದ ಮುಜಾವರ್ ಖುರ್ರಮ್ ಆಲಿ ಬಾಬು ತಂಡವು ಗಂಧವನ್ನು ಹೊತ್ತು ರಾತ್ರಿ 10 ಗಂಟೆಗೆ ಮೆರವಣಿಗೆಯಲ್ಲಿ ತೆರಳಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮಟೆವಾದನ ಗಮನ ಸೆಳೆಯಿತು. ಕುರಾನ್ ಪಠಣವು ಶ್ರದ್ಧಾಭಕ್ತಿಯಿಂದ ನಡೆಯಿತು. ರಾತ್ರಿ 3 ಗಂಟೆಯವರೆಗೂ ನಡೆದ ಮೆರವಣಿಗೆ ಅಂತಿಮವಾಗಿ ದರ್ಗಾ ತಲುಪಿತು. ಸಾವಿರಾರು ಜನರು ಮೆರವಣಿಗೆ ವೀಕ್ಷಿಸಿದರು.
ದರ್ಗಾವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ದರ್ಗಾದಲ್ಲಿ ಹೊಸ ಛಾದರ್‌ಗಳು ಕಣ್ಮನ ಸೆಳೆಯುತ್ತಿದ್ದವು. ಉತ್ತರ ಪ್ರದೇಶದ ಮುಜುತಾಬ ಆಝೀಜ್ ನಜ್ ಮತ್ತು ಸಿಮ್ರಾನ್ ತಾಜ್ ತಂಡದಿಂದ ನಡೆದ ಕವ್ವಾಲಿ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಿತ್ತು. ಇಡೀ ರಾತ್ರಿ ಕವ್ವಾಲಿ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಕುಳಿತಿದ್ದ ಗಣ್ಯರು ಕವ್ವಾಲಿಗೆ ಮನಸೋತು ಹಾಡುಗಾರರ ಮೇಲೆ ನೋಟುಗಳ ಕಂತೆ ಎಸೆದರು.
ಎರಡು ದಿನ ನಡೆದ ಉರುಸ್ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ಅದ್ದೂರಿಯಾಗಿ ಮುಕ್ತಾಯ ಕಂಡಿತು. ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ವಕ್ಫ್ ಬೋರ್ಡ್‌ನಿಂದ ಆಗಮಿಸಿದ್ದ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ, ವಸತಿ ಮತ್ತಿತರರ ಸೌಲಭ್ಯಗಳನ್ನು ಒದಗಿಸಲಾಗಿತ್ತು.
ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿ ನವೀದ್ ಪಾಷ, ನವಾಜ್ ಪಾಷ, ದರ್ಗಾ ಮೇಲ್ವಿಚಾರಕ ತಯ್ಯುಬ್ ನವಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಜಿ ಅನ್ಸರ್ ಖಾನ್, ಸುಹೇಲ್ ಅಹಮದ್, ಆರಿಫ್ ಖಾನ್, ಅಮೀರ್ ಜಾನ್, ಅಮಾನುಲ್ಲಾ, ನಜೀರ್, ಜಬಿವುಲ್ಲಾ, ಕಲೀಮ್ ಪಾಷಾ, ದರ್ಗಾ ಕಮಿಟಿಯ ಮುಖ್ಯಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.