
ಚಿಂತಾಮಣಿ: ತಾಲ್ಲೂಕಿನಲ್ಲಿ ರಾಗಿ ಬಂಪರ್ ಬೆಳೆಯಾಗಿದ್ದು ರೈತರು ರಾಗಿ ಕಟಾವಿನಲ್ಲಿ ನಿರತರಾಗಿದ್ದಾರೆ. ಜಿಲ್ಲೆಯಲ್ಲೇ ರಾಗಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದು ಚಿಂತಾಮಣಿ ತಾಲ್ಲೂಕಿನಲ್ಲಿ. ರೈತರು ರಾಗಿ ಕಟಾವು, ಒಕ್ಕಣೆ ಮಾಡುವುದರಲ್ಲಿ ಸಂತಸದಿಂದ ತೊಡಗಿಸಿಕೊಂಡಿದ್ದಾರೆ.
ತಾಲ್ಲೂಕಿನ ಪ್ರಮುಖ ಆಹಾರ ಬೆಳೆ ಹಾಗೂ ಜಾನುವಾರು ಮೇವಿನ ಬೆಳೆ ರಾಗಿ. ತಾಲ್ಲೂಕಿನ ಕೈವಾರ, ಕಸಬಾ, ಅಂಬಾಜಿದರ್ಗ, ಮುರುಗಮಲ್ಲ ಹೋಬಳಿಗಳಲ್ಲಿ ರಾಗಿ ಬೆಳೆ ಪ್ರಮುಖವಾಗಿದೆ. ಈ ವರ್ಷ ಗುರಿಮೀರಿ ಬಿತ್ತನೆಯಾಗಿದೆ. 15,090 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು 17,477 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು.
ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯಾದ ಪರಿಣಾಮ ರಾಗಿ ಸಮೃದ್ಧವಾಗಿ ಬಂದಿದೆ. ಎಲ್ಲೆಡೆ ರೈತರು ರಾಗಿ ಕೊಯ್ಲಿನಲ್ಲಿ ತೊಡಗಿದ್ದು ಶೇ 50ರಷ್ಟು ಪ್ರದೇಶದಲ್ಲಿ ಕೊಯ್ಲು ಮುಗಿದಿದೆ. ಜಿಲ್ಲೆಗೂ ರಾಗಿ ಕಟಾವು, ಒಕ್ಕಣೆ ಮಾಡುವ ಯಂತ್ರಗಳು ಬೇರೆ ಬೇರೆ ಕಡೆಗಳಿಂದ ಲಗ್ಗೆ ಇಟ್ಟಿವೆ. ತಾಲ್ಲೂಕಿನ ರೈತರು ರಾಗಿಯ ಜತೆಗೆ ಅವರೆಯನ್ನು ಮಿಶ್ರ ಬೆಳೆಯಾಗಿ ಬೆಳೆಯುವುದರಿಂದ ಕಟಾವು ಯಂತ್ರಗಳ ಬಳಕೆ ಕಡಿಮೆ. ಬಹುತೇಕ ರೈತರು ರಾಗಿ ತೆನೆಯನ್ನು ಕಟಾವು ಮಾಡುತ್ತಾರೆ. ಒಕ್ಕಣೆ ಯಂತ್ರಗಳ ಬಳಕೆ ಹೆಚ್ಚಾಗಿ ಮಾಡುತ್ತಾರೆ.
ತಮಿಳುನಾಡು ಮತ್ತಿತರ ಕಡೆಗಳಿಂದ ಬಂದಿರುವ ರಾಗಿ ಕಟಾವು ಯಂತ್ರಗಳ ಮಾಲೀಕರು ಪ್ರತಿ ಗಂಟೆಗೆ ₹3,500 ರಿಂದ ₹4,000 ಸಾವಿರದವರೆಗೆ ಬಾಡಿಗೆ ನಿಗದಿಪಡಿಸುತ್ತಿದ್ದರು. ರೈತರ ದೂರು ಗಮನಿಸಿ ಜಿಲ್ಲಾಡಳಿತ ರಾಗಿ ಕಟಾವು ಮಾಡುವ ಯಂತ್ರಕ್ಕೆ ಪ್ರತಿ ಗಂಟೆಗೆ ₹2,800 ಮೀರದಂತೆ ಬಾಡಿಗೆ ನಿಗದಿಪಡಿಸಿದೆ.
ಐದಾರು ವರ್ಷಗಳ ಹಿಂದೆ ಕೂಲಿ ಕಾರ್ಮಿಕರಿಂದ ರಾಗಿ ಬೆಳೆ ಕಟಾವು ಮಾಡಿಸುತ್ತಿದ್ದರು. ಕಾರ್ಮಿಕರು ಗುಂಪು-ಗುಂಪಾಗಿ ಜಾನಪದ ಹಾಡು ಹಾಡುತ್ತಾ ಬೆಳೆ ಕೊಯ್ಲು ಮಾಡುತ್ತಿದ್ದರು. ರಾಗಿ ಮುದ್ದೆ, ಪಾಯಸ, ಅವರೆಕಾಳು ಹುಳಿ ಊಟವನ್ನು ನೀಡುತ್ತಿದ್ದರು. ರಾಗಿ ಕೊಯ್ಲಿಗೆ ಬಂದರೆ ಹಳ್ಳಿಗಳಲ್ಲಿ ಹಬ್ಬದ ವಾತಾವರಣ ಇರುತ್ತಿತ್ತು.
ಕೊಯ್ಲಿನ ನಂತರ ಚೆನ್ನಾಗಿ ಒಣಗಿಸಿ ಹೊಲದಲ್ಲೇ ಕುಪ್ಪೆ ಹಾಕುತ್ತಿದ್ದರು. ನಂತರ ಎತ್ತಿನ ಗಾಡಿಗಳಲ್ಲಿ ಕಣಗಳಿಗೆ ಸಾಗಿಸಿ ಸುಗ್ಗಿಯಲ್ಲಿ ಕಣದಲ್ಲಿ ಹರಡಿ ಗುಂಡು ಹೊಡೆಯುವ ಮೂಲಕ ರಾಗಿ ಮಾಡುತ್ತಿದ್ದರು.
ಯಂತ್ರಗಳು ಬಂದ ನಂತರ ಅವೆಲ್ಲ ಮರೆಯಾದವು. ಸುಗ್ಗಿಯೂ ದೂರದ ಮಾತಾಗಿದೆ. ರಾಗಿ ಕೊಯ್ಲು, ಕಣ ಮಾಡಿ ರಾಗಿ ಕಾಳು ಹಸನು ಮಾಡಲು 2 ರಿಂದ 3 ತಿಂಗಳು ಬೇಕಾಗುತ್ತಿತ್ತು. ಒಮ್ಮೊಮ್ಮೆ ಕಾರ್ಮಿಕರು ಸಿಗುತ್ತಿರಲಿಲ್ಲ. ಈಗ ಕಣ ಮಾಡಿ ಒಕ್ಕಣೆ ಮಾಡುವ ರೈತರೇ ಇಲ್ಲ. ರಾಗಿಯ ತೆನೆ ಕೊಯ್ಲು ಮಾಡುತ್ತಾರೆ. ಜಮೀನಿನಲ್ಲೇ ಒಕ್ಕಣೆ ಯಂತ್ರದಿಂದ ಕೆಲವೇ ಗಂಟೆಗಳಲ್ಲಿ ರಾಗಿ ಹಸನಾಗಿ ಮನೆಗೆ ಬರುತ್ತದೆ. ಹುಲ್ಲನ್ನು 3-4 ದಿನಗಳ ಕಾಲ ಚೆನ್ನಾಗಿ ಒಣಗಿಸಿ ಪೆಂಡಿ ಯಂತ್ರದ ಸಹಾಯದಿಂದ ಮನೆಗೆ ತರಲಾಗುತ್ತದೆ.
ಕೂಲಿ ಕಾರ್ಮಿಕರ ಕೊರತೆಯಿಂದ ರಾಗಿ ಕಟಾವು ಮಾಡಿ ಒಕ್ಕಣೆ ಮಾಡಿಸುವುದು ಬಹಳ ಕಷ್ಟಕರವಾಗಿತ್ತು. ಯಂತ್ರಗಳ ಸಹಾಯದಿಂದ ಅಧಿಕ ಶ್ರಮವಿಲ್ಲದೆ ರಾಗಿ ಕಟಾವು ಮಾಡಿಸಬಹುದು. ಒಕ್ಕಣೆ ಯಂತ್ರದಿಂದ ಕೆಲವೇ ಗಂಟೆಗಳಲ್ಲಿ ತೆನೆಯಿಂದ ರಾಗಿ ಮಾಡಿ ಮನೆಗೆ ಕೊಂಡೊಯ್ಯಬಹುದು ಎನ್ನುತ್ತಾರೆ ಅಕ್ಕಿಮಂಗಲ ಗ್ರಾಮದ ರೈತ ಮುನಿರಾಮಪ್ಪ.
ರಾಗಿ ಕೊಯ್ಲಿಗೆ ಕೂಲಿ ಕಾರ್ಮಿಕರ ಕೊರತೆ ಯಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ರಾಗಿ ಮನೆಗೆ ಪ್ರತಿ ಗಂಟೆಗೆ ₹2800 ಬಾಡಿಗೆ ನಿಗದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.