ADVERTISEMENT

ಚಿಕ್ಕಬಳ್ಳಾಪುರ: ದಾನಿಗಳು ಕಟ್ಟಿದ ರಾಗಿಮಾಕಲಹಳ್ಳಿ ಶಾಲೆ

ಪರಿಶ್ರಮ ನೀಟ್ ಅಕಾಡೆಮಿಯ ಪ್ರದೀಪ್ ಈಶ್ವರ್ ಬುನಾದಿ

ಡಿ.ಎಂ.ಕುರ್ಕೆ ಪ್ರಶಾಂತ
Published 26 ನವೆಂಬರ್ 2022, 4:20 IST
Last Updated 26 ನವೆಂಬರ್ 2022, 4:20 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ರಾಗಿಮಾಕಲಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
ಚಿಕ್ಕಬಳ್ಳಾಪುರ ತಾಲ್ಲೂಕಿನ ರಾಗಿಮಾಕಲಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ   

ಚಿಕ್ಕಬಳ್ಳಾಪುರ: ಗ್ರಾಮೀಣ ಶಾಲೆಗಳಿಗೆ ದಾನಿಗಳು ಅಥವಾ ಹಳೇ ವಿದ್ಯಾರ್ಥಿಗಳ ನೆರವು ದೊರೆತರೆ ಯಾವುದೇ ಶಾಲೆ ಮೂಲಸೌಕರ್ಯಗಳ ವಿಚಾರದಲ್ಲಿ ಅಭಿವೃದ್ಧಿ ಹೊಂದುತ್ತದೆ. ಆ ಮೂಲಕ ಮಾದರಿ ಶಾಲೆ ಎನಿಸಿಕೊಳ್ಳುತ್ತದೆ.

ಇದೇ ಹಾದಿಯಲ್ಲಿದೆ ತಾಲ್ಲೂಕಿನರಾಗಿಮಾಕಲಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಮೂರು ವರ್ಷಗಳ ಹಿಂದೆ ಪಾಳು ಬಿದ್ದ ಮತ್ತು ಶಿಥಿಲವಾಗಿದ್ದ ಕಟ್ಟಡಗಳ ಕಾರಣದಿಂದ ‘ಇದೇನು ಶಾಲಾ ಕಟ್ಟಡವೇ’ ಎಂದು ಹೀಗಳೆಯಲಾಗುತ್ತಿತ್ತು. ಆದರೆ ಈಗ ಶಾಲೆಯ ಕಟ್ಟಡವಷ್ಟೇ ಅಲ್ಲ ಸೌಲಭ್ಯಗಳ ವಿಚಾರಗಳಲ್ಲಿಯೂ ರಾಗಿಮಾಕಲಹಳ್ಳಿ ಶಾಲೆ ಉತ್ತಮ ಎನಿಸಿದೆ.

ರಾಗಿಮಾಕಲಹಳ್ಳಿ ಶಾಲೆಯ ಅಭಿವೃದ್ಧಿಗೆ ಬೆನ್ನೆಲುಬಾಗಿರುವವರು ದಾನಿಗಳು. ಪ್ರಮುಖವಾಗಿ ಜಿಲ್ಲೆಯವರೇ ಆದ ಬೆಂಗಳೂರಿನ ಪರಿಶ್ರಮ ನೀಟ್ ಅಕಾಡೆಮಿ ಮುಖ್ಯಸ್ಥ ಪ್ರದೀಪ್ ಈಶ್ವರ್. ಪ್ರದೀಪ್ ಈಶ್ವರ್, ಈ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಲು ಮುಂದಾದರು. ಆರಂಭಿಕ ಎನ್ನುವಂತೆ ₹10 ಲಕ್ಷ ವೆಚ್ಚದಲ್ಲಿ ಒಂದು ಕೊಠಡಿ ಸಹ ನಿರ್ಮಿಸಿದರು.

ADVERTISEMENT

ಪ್ರದೀಪ್ ಈಶ್ವರ್ ಹೀಗೆ ಬುನಾದಿ ಹಾಕಿದ್ದೇ ತಡ ಮತ್ತಷ್ಟು ಮಂದಿ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದರು.ಬೆಂಗಳೂರಿನ ಸುಮನಾ ಫೌಂಡೇಶನ್‌ನವರು ಶಾಲೆಗೆ ಸುಣ್ಣ ಬಣ್ಣ ಬಳಿಸಿಕೊಟ್ಟರು. ನರೇಗಾ ಯೋಜನೆಯಲ್ಲಿ ಶಾಲೆಗೆ ₹5 ಲಕ್ಷ ವೆಚ್ಚದಲ್ಲಿ ಕಾಂಪೌಂಡ ನಿರ್ಮಿಸಲಾಯಿತು. ₹2 ಲಕ್ಷ ವೆಚ್ಚದಲ್ಲಿ ಅಂಗವಿಕಲರ ಶೌಚಾಲಯವನ್ನು ನಿರ್ಮಿಸಲಾಗಿದೆ. ಸರ್ಕಾರ ಸಹ ₹40 ಲಕ್ಷ ವೆಚ್ಚದಲ್ಲಿ ಕೊಠಡಿಗಳನ್ನು ನಿರ್ಮಿಸಿದೆ.

ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರು ಹಾಗೂ ಹಳೇ ವಿದ್ಯಾರ್ಥಿಗಳು ಶಾಲೆಯ ಜತೆ ನಿಂತರು. ಈ ಪರಿಣಾಮ ಶಾಲೆಗೆಟಿವಿ, ಬೆಂಚ್, ವಿಜ್ಞಾನ ಕಲಿಕೆಗೆ ಸಂಬಂಧಿಸಿದ ಕಿಟ್, ಗಣಿತ ಕಲಿಕೆಯ ಕಿಟ್, ನಲಿ ಕಲಿ ಟೇಬಲ್‌ಗಳು ದೊರೆತಿವೆ. ಸಂಕಲ್ಪ ತಂಡದವರು ₹2 ಲಕ್ಷದ ವಸ್ತುಗಳನ್ನು ನೀಡಿದರು. ಎಸ್‌ಆರ್‌ಎಸ್ ಟ್ರಸ್ಟ್‌ನ ದೇವರಾಜ್ ಬೀರು ಕೊಡಿಸಿದರು. ಹಳೇ ವಿದ್ಯಾರ್ಥಿಗಳ ಸಹಕಾರದಿಂದ ₹ 70 ಸಾವಿರ ವೆಚ್ಚದಲ್ಲಿ ಶಾಲೆಯ ಆವರಣದಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ಆಯಿತು. ಶಾಲೆಯ ಅಂದಕ್ಕೆ ಚಿತ್ರಗಳನ್ನು ಬಿಡಿಸಲಾಯಿತು. ಹೀಗೆ ಹಂತ ಹಂತವಾಗಿ ಶಾಲೆ ಮೂಲಸೌಕರ್ಯಗಳ ವಿಚಾರದಲ್ಲಿ ಮತ್ತು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ಪರಿಕರಗಳು ಶಾಲೆಗೆ ಬಂದವು ಸೇರಿದವು.

1ರಿಂದ 5ರವರೆಗೆ ಇಲ್ಲಿ ತರಗತಿಗಳು ನಡೆಯುತ್ತಿವೆ. ಒಟ್ಟು 37 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಎಚ್‌.ಎಲ್ ಚಂದ್ರಶೇಖರ್ ಮತ್ತು ಜಿ.ನಾರಾಯಣಮ್ಮ ಶಿಕ್ಷಕರಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ರಾಜ್ಯ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಶಾಲೆಯಎಚ್‌.ಎಲ್ ಚಂದ್ರಶೇಖರ್ ಭಾಜನರಾಗಿದ್ದಾರೆ. ಈ ಮೂಲಕವೂ ಜಿಲ್ಲೆಯಲ್ಲಿ
ರಾಗಿಮಾಕಲಹಳ್ಳಿ ಶಾಲೆ ಗಮನ ಸೆಳೆದಿದೆ.

80 *30 ವಿಸ್ತೀರ್ಣದ ‌ಶಾಲೆಯು 2014ರಿಂದ 2016ರವರೆಗೆ ಸತತ ಮೂರು ಬಾರಿ ಜಿಲ್ಲಾ ಮಟ್ಟದಲ್ಲಿ ಉತ್ತಮ ಪರಿಸರ ಶಾಲೆ ಪ್ರಶಸ್ತಿಗೂ ಭಾಜನವಾಗಿದೆ. ಆ ಸಮಯದಲ್ಲಿ ಶಾಲೆ ಆವರಣದಲ್ಲಿ ಬಾಳೆಗಿಡಗಳು, ತರಕಾರಿ ಬೆಳೆಯಲಾಗುತ್ತಿತ್ತು. ಕೊಠಡಿಗಳನ್ನು ನಿರ್ಮಿಸುವ ಕಾರಣ ಶಾಲೆ ಆವರಣದಲ್ಲಿದ್ದ ಗಿಡಗಳನ್ನು ತೆರವುಗೊಳಿಸಲಾಗಿದ್ದು ಮತ್ತೆ ಗಿಡಗಳನ್ನು ಬೆಳೆಸುವ ಆಲೋಚನೆ ಶಿಕ್ಷಕರದ್ದಾಗಿದೆ.

ಅಭಿವೃದ್ಧಿಗೆ ಮತ್ತಷ್ಟು ಸಹಕಾರ
ಸರ್ಕಾರಿ ಶಾಲೆಗಳಲ್ಲಿ ಓದಿದವರು ನಾವು. ಸರ್ಕಾರಿ ಶಾಲೆಗಳ ಸಬಲೀಕರಣದಿಂದ ಗ್ರಾಮೀಣ ಭಾಗಗಳ ಮಕ್ಕಳಿಗೆ ಅನುಕೂಲವಾಗುತ್ತದೆ. ದಾನಿಗಳು, ಸಂಘ ಸಂಸ್ಥೆಗಳು ಸಹ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೆರವು ನೀಡಬೇಕು ಎನ್ನುತ್ತಾರೆ ನೀಟ್ ಅಕಾಡೆಮಿ ಮುಖ್ಯಸ್ಥ ಪ್ರದೀಪ್ ಈಶ್ವರ್.

ಶಾಲೆಗೆ ₹ 10 ಲಕ್ಷ ವೆಚ್ಚದಲ್ಲಿ ಕೊಠಡ ನಿರ್ಮಿಸಿಕೊಡಲಾಗಿದೆ. ಶಾಲೆಯನ್ನು ದತ್ತು ತೆಗೆದುಕೊಳ್ಳುವೆ ಎಂದು ಹೇಳಿದ್ದೆ. ಆ ಪ್ರಕಾರ ರಾಗಿಮಾಕಲಹಳ್ಳಿ ಶಾಲೆಗೆ ಮತ್ತಷ್ಟು ನೆರವು ನೀಡಲಾಗುವುದು ಎಂದು ಹೇಳಿದರು.

ಗ್ರಂಥಾಲಯ, ಕಂಪ್ಯೂಟರ್ ಸೌಲಭ್ಯದ ನಿರೀಕ್ಷೆ
ನಾನು ಈ ಶಾಲೆಗೆ 8 ವರ್ಷಗಳ ಹಿಂದೆ ಬಂದಾಗ ಪಾಳು ಬಿದ್ದಿತ್ತು. ಮಳೆ ಬಂದರೆ aಕೊಠಡಿಗಳು ಸೊರುತ್ತಿದ್ದವು. ಶಾಲೆಗೆ ರಜೆ ಕೊಡಬೇಕಾಗಿತ್ತು. 2020ರಲ್ಲಿ ಪ್ರದೀಪ್ ಈಶ್ವರ್ ಈ ಶಾಲೆಯನ್ನು ದತ್ತು ತೆಗೆದುಕೊಳ್ಳುವೆ ಎಂದು ಮುಂದೆ ಬಂದರು. ಕೊಠಡಿ ನಿರ್ಮಿಸಿದರು ಎಂದು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಎಚ್‌.ಎಲ್ ಚಂದ್ರಶೇಖರ್ ತಿಳಿಸಿದರು.

ಪ್ರದೀಪ್ ಅವರು ಬುನಾದಿ ಹಾಕಿದರು. ನಂತರ ಹಲವು ದಾನಿಗಳು, ಸಂಘ ಸಂಸ್ಥೆಗಳವರು ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಿದರು. ನನ್ನ ಮಗನನ್ನು ಈ ಶಾಲೆಗೆ ದಾಖಲಿಸಿಕೊಂಡೆ. ನನಗೆ ರಾಜ್ಯ ಪ್ರಶಸ್ತಿ ಬಂದ ನಂತರ ಹಲವರು ಶಾಲೆ ನೋಡಲು ಬಂದರು. ದಾನ ನೀಡಿದರು. ಮುಂದಿನ ದಿನಗಳಲ್ಲಿ ಮಿನಿ ಗ್ರಂಥಾಲಯ, ಕಂಪ್ಯೂಟರ್ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ಒದಗಿಸಬೇಕಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.