ADVERTISEMENT

ಚಿಕ್ಕಬಳ್ಳಾಪುರ | ‘ಶಾಸಕರ ಮನೆಗಾಗಿ ಹುಡುಕಾಟ’; ಬಾಲಕುಂಟಹಳ್ಳಿ ಗಂಗಾಧರ ವ್ಯಂಗ್ಯ

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 5:18 IST
Last Updated 19 ಆಗಸ್ಟ್ 2025, 5:18 IST
ಒಳಮೀಸಲಾತಿಗೆ ಆಗ್ರಹಿಸಿ ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿ ಬಳಿ ಪ್ರತಿಭಟಿಸಿದ ಮಾದಿಗ ಸಮುದಾಯದ ಮುಖಂಡರು
ಒಳಮೀಸಲಾತಿಗೆ ಆಗ್ರಹಿಸಿ ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿ ಬಳಿ ಪ್ರತಿಭಟಿಸಿದ ಮಾದಿಗ ಸಮುದಾಯದ ಮುಖಂಡರು   

ಚಿಕ್ಕಬಳ್ಳಾಪುರ: ಒಳಮೀಸಲಾತಿ ವಿಚಾರವಾಗಿ ಆ.19ರಂದು ಕರೆದಿರುವ ಸಚಿವ ಸಂಪುಟ ವಿಶೇಷ ಸಭೆಯಲ್ಲಿ ಚರ್ಚಿಸಿದ ನಂತರ ಸರ್ಕಾರ ಅಂತಿಮ ನಿರ್ಧಾರ ಪ್ರಕಟಿಸಬೇಕು. ಶಾಸಕ ಪ್ರದೀಪ್ ಈಶ್ವರ್ ಒಳಮೀಸಲಾತಿ ಪರ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿ ಇಲ್ಲಿನ ತಾಲ್ಲೂಕು ಕಚೇರಿ ಎದುರು ಕರ್ನಾಟಕ ಮಾದಿಗ ಮಹಾಸಭಾ, ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ಪ್ರತಿಭಟಿಸಿದರು.

ಅಂಬೇಡ್ಕರ್ ಭವನದಿಂದ ಮೆರವಣಿಗೆ ಬಂದ ಪ್ರತಿಭಟನಕಾರರನ್ನು ತಾಲ್ಲೂಕು ಕಚೇರಿ ಪ್ರವೇಶ ದ್ವಾರದಲ್ಲಿಯೇ ಪೊಲೀಸರು ತಡೆದರು. ಇದರಿಂದ ತೀವ್ರ ಆಕ್ರೋಶಗೊಂಡ ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಜ್ಯದ ಎಲ್ಲ ಕಡೆ ಶಾಸಕರ ಮನೆ ಮುಂದೆ ಚಳವಳಿ ನಡೆಸುತ್ತಿದ್ದೆವು. ಆದರೆ ಇಲ್ಲಿ ಶಾಸಕರ ಮನೆಯೇ ಇಲ್ಲ. ಇದು ಚಿಕ್ಕಬಳ್ಳಾಪುರದ ಪರಿಸ್ಥಿತಿ ಎಂದು ಪ್ರತಿಭಟನಕಾರರು ದೂರಿದರು.

ಬಾಲಕುಂಟಹಳ್ಳಿ ಗಂಗಾಧರ್ ಮಾತನಾಡಿ, ‘ಈ ಹಿಂದೆ ಒಳಮೀಸಲಾತಿಗೆ ಆಗ್ರಹಿಸಿ ಶಾಸಕ ಪ್ರದೀಪ್ ಈಶ್ವರ್ ಮನೆ ಮುಂದೆ ತಮಟೆ ಚಳವಳಿ ನಡೆಸಿದ್ದೆವು. ಆದರೆ ಈಗ ಪ್ರದೀಪ್ ಈಶ್ವರ್ ಯಾರಿಗೂ ಹೇಳದೆ ಕೇಳದೆ ರಾತ್ರೋರಾತ್ರಿ ಮನೆ ಖಾಲಿ ಮಾಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಶಾಸಕರ ಮನೆಯೇ ಇಲ್ಲ. ಶಾಸಕರ ಮನೆಯನ್ನು ನಾವೂ ಹುಡುಕುತ್ತಿದ್ದೇವೆ’ ಎಂದು ವ್ಯಂಗ್ಯವಾಡಿದರು.

ADVERTISEMENT

ಕಷ್ಟಗಳು ಬಂದರೆ ಕ್ಷೇತ್ರದ ಜನರು ಶಾಸಕರನ್ನು ಭೇಟಿಯಾಗುವರು. ಆದರೆ ಇವರನ್ನು ನೋಡಬೇಕಾದರೆ ಬೆಂಗಳೂರಿಗೆ ಹೋಗಬೇಕು. ಬೆಂಗಳೂರಿನಲ್ಲಿಯೂ ಅವರ ಮನೆ ಎಲ್ಲಿದೆ ಎನ್ನುವುದು ಮುಖಂಡರಿಗೇ ಗೊತ್ತಿಲ್ಲ. ಇಂತಹವರು ಚಿಕ್ಕಬಳ್ಳಾಪುರಕ್ಕೆ ಶಾಸಕರಾಗಿದ್ದಾರೆ ಎಂದು ಕಿಡಿಕಾರಿದರು.

ಒಳಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಈ ಬಗ್ಗೆ ನಾವು ಶಾಸಕರಿಗೆ ಪತ್ರ ನೀಡಬೇಕು. ಒಳಮೀಸಲಾತಿ ವಿಚಾರವಾಗಿ ಅಧಿವೇಶನದಲ್ಲಿ ಪ್ರದೀಪ್ ಈಶ್ವರ್ ಧ್ವನಿ ಎತ್ತಬೇಕು. ನಮ್ಮ ಸಮಾಜಕ್ಕೆ ನ್ಯಾಯ ಕೊಡಿಸಬೇಕು. ಶಾಸಕರು ಈ ಬಗ್ಗೆ ಸದನದಲ್ಲಿ ಮಾತನಾಡದಿದ್ದರೆ ಅವರ ಎಲ್ಲ ಕಾರ್ಯಕ್ರಮಗಳಿಗೆ ಸಮುದಾಯದವರು ಬಹಿಷ್ಕಾರ ಹಾಕುತ್ತೇವೆ. ಹಳ್ಳಿಗಳಿಗೆ ಬರಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ತೆಲಂಗಾಣ ಮತ್ತಿತರ ರಾಜ್ಯಗಳು ಈಗಾಗಲೇ ಒಳಮೀಸಲಾತಿ ಜಾರಿಗೊಳಿಸಿವೆ. ಆದರೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಈ ವಿಚಾರವಾಗಿ ಸ್ಪಷ್ಟ ನಿಲುವು ತಾಳುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಯಾರು ಒತ್ತಡವಿದೆಯೊ ಎಂದು ಪ್ರಶ್ನಿಸಿದರು. 

ಗೇಟಿನಲ್ಲಿಯೇ ವಾಗ್ವಾದ:

ಪ್ರತಿಭಟನಕಾರರನ್ನು ಪೊಲೀಸರು ತಾಲ್ಲೂಕು ಕಚೇರಿ ಗೇಟಿನ ಬಳಿಯೇ ತಡೆದರು. ತಹಶೀಲ್ದಾರರ ಅನುಮತಿ ಇದ್ದರೆ ಮಾತ್ರ ಒಳಗೆ ಬಿಡುತ್ತೇವೆ ಎಂದರು. ಇದರಿಂದ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ವಾಗ್ವಾದಗಳು ನಡೆದವು. ಸ್ಥಳಕ್ಕೆ ಬಂದ ಶಾಸಕ ಕಚೇರಿ ಸಿಬ್ಬಂದಿಗೆ ‘ಶಾಸಕರಿಗೆ ಕರೆ ಮಾಡಿ’ ಎಂದು ಮುಖಂಡರು ಪಟ್ಟು ಹಿಡಿದರು. ಮಾತುಕತೆ ನಡೆದ ತರುವಾಯ ಪೊಲೀಸರು ತಾಲ್ಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆಗೆ ಮತ್ತು ಮನವಿ ಸಲ್ಲಿಸಲು ಅವಕಾಶ ನೀಡಿದರು. ‘ತಹಶೀಲ್ದಾರರಿಗೆ ಹಲವು ಬಾರಿ ಕರೆ ಮಾಡಿದೆವು. ಆದರೆ ಅವರು ಸ್ವೀಕರಿಸಲಿಲ್ಲ. ಶಾಸಕರು ಊರಲ್ಲಿಯೇ ಇಲ್ಲ. ಮತ ಹಾಕಿದವರು ಎಲ್ಲಿಗೆ ಹೋಗಬೇಕು’ ಎಂದು ಬಾಲಕುಂಟಹಳ್ಳಿ ಗಂಗಾಧರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.