ಗೌರಿಬಿದನೂರು: ಸುಪ್ರೀಂಕೋರ್ಟ್ ಒಳಮೀಸಲಾತಿ ಕಲ್ಪಿಸಿರುವುದು ಸಂತಸದಾಯಕ. ಪರಿಶಿಷ್ಟ ಜಾತಿಗೆ ಇದು ವರದಾನವಾಗಿದೆ ಎಂದು ಶುಕ್ರವಾರ ದಲಿತ ಸಂಘಟನೆಗಳು ನಗರದ ಅಂಬೇಡ್ಕರ್ ವೃತ್ತದಲ್ಲಿ ಸಿಹಿ ಹಂಚಿದರು.
ದಲಿತ ಮುಖಂಡ ಸೋಮಯ್ಯ ಮಾತನಾಡಿ, ‘ಮೂರು ದಶಕಗಳ ಹೋರಾಟಕ್ಕೆ ಸಂದ ಜಯವಾಗಿದೆ. ಈ ಹಿಂದೆ ಮೀಸಲಾತಿಯಲ್ಲಿ ಹಲವು ಜಾತಿಗಳು ಸೇರ್ಪಡೆಯಾಗಿದ್ದು ಸಬಲರು ಮಾತ್ರ ಮೀಸಲಾತಿಯ ಗರಿಷ್ಠ ಲಾಭ ಪಡೆಯುತ್ತಿದ್ದರು. ಈಗ ಅದಕ್ಕೆ ಕಡಿವಾಣ ಹಾಕಿದಂತಾಗಿದೆ. ಇನ್ನು ಮುಂದೆ ಸಣ್ಣ ಉಪಜಾತಿಗಳು ಸಹ ಮೀಸಲಾತಿಯ ಲಾಭ ಪಡೆಯಬಹುದು ಎಂದರು.
‘ಮುಖ್ಯವಾಗಿ ಶಿಕ್ಷಣ, ರಾಜಕೀಯ, ಉದ್ಯೋಗ ಕ್ಷೇತ್ರಗಳಲ್ಲಿ ಇನ್ನು ಮುಂದೆ ಹೆಚ್ಚಿನ ಲಾಭವಾಗಲಿದೆ. ಇದರಿಂದ ನೊಂದ ಮತ್ತು ಅಸ್ಪೃಶ್ಯರಿಗೆ ಹೆಚ್ಚಿನ ಲಾಭವಾಗಲಿದೆ. ಈ ಶ್ರೇಯಸ್ಸು ಸುಪ್ರೀಂಕೋರ್ಟ್ ನ್ಯಾಯಾಧೀಶರ ಸಮಿತಿಗೆ ಸಲ್ಲುತ್ತದೆ’ ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಹುದುಗೂರು ನಂಜುಂಡಪ್ಪ ಮಾತನಾಡಿ, ‘ಈ ಹೋರಾಟ ಮೊದಲು ಆಂಧ್ರಪ್ರದೇಶದ ಮಂದಕೃಷ್ಣ ಮಾದಿಗ 1994ರಲ್ಲಿ ಪ್ರಾರಂಭವಾದ ಹೋರಾಟ ಕರ್ನಾಟಕ ಇನ್ನಿತರೆ ರಾಜ್ಯಗಳಲ್ಲಿ ಹೋರಾಟ ಮಾಡಿದ ಫಲವಾಗಿ ಇಂದು ಸುಪ್ರೀಂಕೋರ್ಟ್ ನ್ಯಾಯ ಒದಗಿಸಿದೆ. ಇದು ಹಲವು ಸಂಘಟನೆಗಳ ನಾಯಕರ ಸುದೀರ್ಘ ಹೋರಾಟದ ಫಲ ಇದಾಗಿದೆ. ರಾಜ್ಯ ಸರ್ಕಾರ ಇದನ್ನು ತ್ವರಿತವಾಗಿ ಜಾರಿ ಮಾಡಬೇಕು’ ಎಂದು ಒತ್ತಾಯ ಮಾಡಿದರು.
ದಲಿತ ಮುಖಂಡ ಹಾಲಗಾನಹಳ್ಳಿ ಗಂಗಾಧರ್, ಸನಂದ್ ಕುಮಾರ್, ಗೋಪಾಲ್ ನಾರಾಯಣಪ್ಪ, ಸುದರ್ಶನ್, ನರಸಿಂಹಮೂರ್ತಿ, ಮಾದಿಗ ದಂಡೋರ ಗಂಗಾಧರಪ್ಪ, ಕೃಷ್ಣಪ್ಪ, ಬಾಲಪ್ಪ, ಆಶ್ವಥ್ಥ, ಗಂಗಾಧರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.