ಶಿಡ್ಲಘಟ್ಟ: ನಗರೋತ್ಥಾನ ಹಂತ 4ರ ಅನುದಾನದಲ್ಲಿ ಶಿಡ್ಲಘಟ್ಟ ನಗರದ ಚಿಂತಾಮಣಿ ಮಾರ್ಗದ ಟೋಲ್‌ಗೇಟ್ ಬಳಿಯ ರಾಜಕಾಲುವೆ ದುರಸ್ತಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹಾಗೂ ಅಧಿಕಾರಿಗಳ ತಂಡ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ನಗರದ ಚಿಂತಾಮಣಿ ರಸ್ತೆಯ ಬಳಿ ಟೋಲ್‌ಗೇಟ್ ಮೂಲಕ ಹಾದು ಹೋಗಿರುವ ರಾಜಕಾಲುವೆ ಚಟ್ಟುಗುಣಿಗೆ ಸಿಮೆಂಟ್ ನೆಲಹಾಸು ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ರಾಜಕಾಲುವೆಯ ಒಂದು ಬದಿ ಇರುವ ಏಳೆಂಟು ಮನೆ ವಾಸಿಗಳು ಮೋರಿ ನಿರ್ಮಿಸಿ ಓಡಾಡಲು ಅನುಕೂಲ ಮಾಡಿಕೊಡುವಂತೆ ನಗರಸಭೆಯವರಲ್ಲಿ ಹಾಗೂ ಡಿ.ಸಿ ಅವರಿಗೆ ಮನವಿ ಮಾಡಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು, ನಗರೋತ್ಥಾನ ಹಂತ 4ರ ಅನುದಾನದಲ್ಲಿ ರಾಜಕಾಲುವೆಗೆ ಸಿಮೆಂಟ್ ನೆಲಹಾಸು ಮತ್ತು ತಡೆಗೋಡೆ ಕಾಮಗಾರಿ ವೀಕ್ಷಿಸಿದರು. ಇನ್ನಷ್ಟು ಗುಣಮಟ್ಟ ಕಾಪಾಡಿಕೊಂಡು ಸಕಾಲಕ್ಕೆ ಕಾಮಗಾರಿ ಮುಗಿಸಲು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.
ಈ ವೇಳೆ ಸ್ಥಳೀಯರು, ರಾಜಕಾಲುವೆಯ ಒಂದು ಬದಿಯಲ್ಲಿ ಎಂಟತ್ತು ಮನೆಗಳಿವೆ. ಈ ಮೊದಲಿನಿಂದಲೂ ಕಾಲುವೆ ಮೇಲೆ ನಿರ್ಮಿಸಿದ್ದ ಮೋರಿ ಮೇಲೆ ಓಡಾಡುತ್ತಿದ್ದೆವು. ಅದರೀಗ ಕಾಲುವೆಯ ದುರಸ್ತಿಗಾಗಿ ಆ ಮೋರಿಯನ್ನು ಕಿತ್ತು ಹಾಕಲಾಗುತ್ತಿದ್ದು ನಂತರ ರಾಜಕಾಲುವೆ ಮೇಲೆ ಮೋರಿಯನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಿದ್ದಾರೆ. ನಾವು ಓಡಾಡುವುದಾದರೂ ಎಲ್ಲಿ ಹೇಗೆಂದು ಪ್ರಶ್ನಿಸಿದರು.
ಇಲ್ಲಿ ಬಿಟ್ಟರೆ ಬೇರೆ ಎಲ್ಲಿಂದಲೂ ನಮ್ಮ ಮನೆಗೆ ಹೋಗಲು ದಾರಿ ಇಲ್ಲ ಎಂದು ಸ್ಥಳೀಯರು ಜಿಲ್ಲಾಧಿಕಾರಿ ಬಳಿ ಅವಲತ್ತುಕೊಂಡರು.
ಸಾರ್ವಜನಿಕರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ. ನಿಮ್ಮ ಅಹವಾಲನ್ನು ಆಲಿಸಿದ್ದೇನೆ. ಈ ವೇಳೆ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳು, ಪೌರಾಯುಕ್ತರು ಮತ್ತು ಎಂಜಿನಿಯರ್‌ಗಳಿಗೆ ಸೂಚಿಸುತ್ತೇನೆ ಎಂದರು.
ಪೌರಾಯುಕ್ತೆ ಜಿ.ಅಮೃತ, ಜೆಇ ಚಕ್ರಪಾಣಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.