ADVERTISEMENT

ಶಿಡ್ಲಘಟ್ಟ: ಹಾಳು ಕೊಂಪೆಯಾದ ನಗರಸಭೆ ಉದ್ಯಾನ

ಗೌಡನಕೆರೆ ಅಂಚಿನಲ್ಲಿನ ಉದ್ಯಾನದ ದುಸ್ಥಿತಿ * ಸಾರ್ವಜನಿಕರ ಹಣ ಪೋಲು

ಡಿ.ಜಿ.ಮಲ್ಲಿಕಾರ್ಜುನ
Published 12 ಜನವರಿ 2026, 5:08 IST
Last Updated 12 ಜನವರಿ 2026, 5:08 IST
ಶಿಡ್ಲಘಟ್ಟದ ಗೌಡನಕೆರೆ ಅಂಚಿನಲ್ಲಿರುವ ನಗರಸಭೆ ಉದ್ಯಾನವನದ ದುಸ್ಥಿತಿ
ಶಿಡ್ಲಘಟ್ಟದ ಗೌಡನಕೆರೆ ಅಂಚಿನಲ್ಲಿರುವ ನಗರಸಭೆ ಉದ್ಯಾನವನದ ದುಸ್ಥಿತಿ   

ಶಿಡ್ಲಘಟ್ಟ: ನಗರದ ಗೌಡನಕೆರೆ ಅಂಚಿನಲ್ಲಿ ನಗರಸಭೆಯು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಉದ್ಯಾನವನ ನಿರ್ಮಿಸಿದೆ. 

ಆದರೆ, ಈ ಉದ್ಯಾನವನದ ಸಮರ್ಪಕ ನಿರ್ವಹಣೆ ಇಲ್ಲದೆ ಇದೀಗ ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ ಎಂದರೆ ತಪ್ಪಾಗಲಾರದು. ಈ ಉದ್ಯಾನವನವು ಪ್ರಾರಂಭದಿಂದಲೂ ಜನಸ್ನೇಹಿಯಾಗಿರಲಿಲ್ಲ. ಉದ್ಯಾನವು ಗಿಡನೆಡುವ ಕಾಟಾಚಾರದ ಸ್ಥಳವೆಂಬಂತೆ ಭಾಸವಾಗುತ್ತಿದೆ. ಇದರಿಂದಾಗಿ ಈ ಉದ್ಯಾನವನದ ಅಭಿವೃದ್ಧಿಗಾಗಿ ವೆಚ್ಚ ಮಾಡಲಾಗಿರುವ ಲಕ್ಷಾಂತರ ರೂಪಾಯಿ ಹಣ ನೀರಿನಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ. 

ಜೊತೆಗೆ ಒಳ ಪ್ರವೇಶಿಸಲು ಆಗದ ದುಸ್ಥಿತಿಯಲ್ಲಿರುವ ಈ ಉದ್ಯಾನವನ್ನು ಗಮನಿಸಿದರೆ, ಈ ಉದ್ಯಾನಕ್ಕಾಗಿ ಖರ್ಚು ಮಾಡಿರುವ ಹಣ ಮತ್ತು ಪ್ರತಿ ವರ್ಷ ನಿರ್ವಹಣೆಗಾಗಿ ತೋರಿಸುತ್ತಿರುವ ಖರ್ಚಿನ ಲೆಕ್ಕದಲ್ಲಿ ಅವ್ಯವಹಾರವಾಗಿರಬಹುದು ಎಂದು ಜನರು ಶಂಕಿಸುತ್ತಿದ್ದಾರೆ. 

ADVERTISEMENT

ಹಚ್ಚ ಹಸಿರಿನಿಂದ ಕಂಗೊಳಿಸುವ ಮೂಲಕ ಜನಸಾಮಾನ್ಯರನ್ನು ತನ್ನತ್ತ ಸೆಳೆಯಬೇಕಿದ್ದ ಉದ್ಯಾನದೊಳಗೆ ಎಲ್ಲಿ ನೋಡಿದರೂ ಒಣ ಎಲೆಗಳ ರಾಶಿ, ಕಸದ ರಾಶಿಯೇ ವ್ಯಾಪಿಸಿಕೊಂಡಿದೆ. ಪಕ್ಕದಲ್ಲಿ ನೀರು ಹರಿಯಲು ನಿರ್ಮಿಸಲಾಗಿದ್ದ ಚರಂಡಿಗಳಲ್ಲಿ ಕಳೆ ಗಿಡಗಳು ಬೆಳಿದಿದೆ. ಕೂರಲು ಇರುವ ಬೆಂಚುಗಳು ಹಾಳಾಗಿವೆ. ಉದ್ಯಾನದ ಮಧ್ಯೆ ನೆರಳಿಗಾಗಿ ನಿರ್ಮಿಸಲಾಗಿದ್ದ ಪುಟ್ಟ ತಾಣದ ಮೇಲ್ಚಾವಣಿಯ ಹೆಂಚುಗಳು ಒಡೆದುಹೋಗಿದ್ದು, ವಾಕಿಂಗ್‌ಗೆ ಯಾರೂ ಇಲ್ಲಿಗೆ ಬರುತ್ತಿಲ್ಲ. ಜೊತೆಗೆ ಈ ಉದ್ಯಾನವು ನಾಯಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಜೊತೆಗೆ ಉದ್ಯಾನದ ಎಲ್ಲೆಡೆಯೂ ಎಲೆಗಳು ಹರಡಿಕೊಂಡಿರುವುದರಿಂದ ಜನರು ವಾಕಿಂಗ್ ಮತ್ತು ವಾಯುವಿಹಾರ ಮಾಡುವ ವಾತಾವರಣವೇ ಇಲ್ಲಿ ಇಲ್ಲದಂತಾಗಿದೆ. 

ಜೊತೆಗೆ ಈ ಉದ್ಯಾನದಲ್ಲಿ ವಾಯುವಿಹಾರಿಗಳು ಬರುತ್ತಿಲ್ಲ. ಜೊತೆಗೆ ಪಾರ್ಕ್ ನಿರ್ವಹಣೆಗೆ ಯಾರೂ ಇಲ್ಲವಾದ್ದರಿಂದ ಕುಡುಕರ ತಾಣವಾಗಿಯೂ ಬದಲಾಗಿದೆ. ಪಾರ್ಕ್‌ನಲ್ಲೇ ಕುಳಿತು ಮದ್ಯಸೇವನೆ ಮಾಡುವವರು ಮದ್ಯದ ಪಾಕೆಟ್‌ಗಳು, ಪ್ಲಾಸ್ಟಿಕ್ ಬಾಟಲಿಗಳಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಇದರಿಂದಾಗಿ ನಾಗರಿಕರು ಈ ಪಾರ್ಕ್‌ಗೆ ಕಾಲಿಡುವ ವಾತಾವರಣವೇ ಇಲ್ಲ. ಇದೇ ಕಾರಣಕ್ಕೆ ವಾಯುವಿಹಾರಿಗಳು ಉದ್ಯಾನಕ್ಕೆ ಬರುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. 

ಎಂ. ರಾಜಣ್ಣ ಶಾಸಕರಾಗಿದ್ದಾಗ, ಮತ್ತು ನಾನು ನಗರಸಭೆ ಅಧ್ಯಕ್ಷನಾಗಿದ್ದಾಗ ಕೈಗೊಂಡಿದ್ದ ಕಾಮಗಾರಿ ಇದು. ನಮ್ಮ ಅಧಿಕಾರಾವಧಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಹಣ ಮತ್ತು ನಗರೋತ್ಥಾನದಲ್ಲಿ ಸೇರಿ ₹4 ಕೋಟಿ ವೆಚ್ಚದಲ್ಲಿ ಈ ಉದ್ಯಾನ ಅಭಿವೃದ್ಧಿಪಡಿಸಲಾಗಿತ್ತು. ಉದ್ಯಾನದಲ್ಲಿ ವಾಯುವಿಹಾರಿಗಳಿಗಾಗಿ ವಾಕಿಂಗ್ ಪಾಥ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಮಾಡಲಾಗಿತ್ತು. ಕೆರೆಯ ಅಂಚಿನದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆಗೋಡೆ ನಿರ್ಮಾಣಕ್ಕೆ ₹5.50 ಕೋಟಿ ವೆಚ್ಚ ಮಾಡಲಾಗಿತ್ತು. ನಮ್ಮ ನಂತರದ ಅವಧಿಯಲ್ಲಿ ಉಳಿಕೆ ಕೆಲಸ, ಉದ್ಯಾನದಲ್ಲಿ ಮಕ್ಕಳ ಆಟದ ಉಪಕರಣಗಳು ಸೇರಿದಂತೆ ಇನ್ನಿತರ ಕಾಮಗಾರಿಗಳಿಗಾಗಿ ₹50 ಲಕ್ಷಕ್ಕೂ ಹೆಚ್ಚು ವೆಚ್ಚವಾಗಿದೆ ಎಂದು ನಗರಸಭೆ ಖರ್ಚಿನಲ್ಲಿ ತೋರಿಸಲಾಗಿದೆ. ಆದರೆ, ಯಾವುದೇ ಪ್ರಗತಿ ಕಂಡುಬರುತ್ತಿಲ್ಲ ಎಂದು ನಗರಸಭೆ ಮಾಜಿ ಅಧ್ಯಕ್ಷ ಅಫ್ಸರ್ ಪಾಷ ತಿಳಿಸಿದರು. 

ಪಕ್ಕದ ಸಂತೆ ಮೈದಾನದಿಂದ ಕೆರೆಗೆ ಬರುವ ನೀರು ಶುದ್ಧೀಕರಿಸುವ ತೊಟ್ಟಿಗಳ ನಿರ್ಮಾಣಕ್ಕೆ ಸುಮಾರು ₹60 ಲಕ್ಷ ಖರ್ಚು ತೆಗೆದಿರಿಸಿದ್ದರು. ಅಲ್ಲಿ ದೀಪದ ವ್ಯವಸ್ಥೆಯಿಲ್ಲ. ನಾಮಕಾವಸ್ಥೆಗೆ ಸೋಲಾರ್ ದೀಪಗಳ ಕಂಬಗಳಿವೆ. ಆರ್‌ಟಿಐನಲ್ಲಿ ಮಾಹಿತಿ ಪಡೆದರೆ ನಗರಸಭೆಯಲ್ಲಿ ನಡೆದ ಎಲ್ಲ ಅವ್ಯವಹಾರಗಳು ಹೊರಗೆ ಬರುತ್ತವೆ ಎಂದು ಹೇಳಿದರು.

ನೆರಳಿಗೆ ನಿರ್ಮಿಸಿದ ಸ್ಥಳ ನಾಯಿಗಳಿಗೆ ಆಶ್ರಯ ನೀಡಿರುವುದು 
ವಾಕಿಂಗ್ ಪಥದಲ್ಲಿ ಮದ್ಯದ ಪಾಕೆಟ್
ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಆರೋಗ್ಯದ ಬಗ್ಗೆ ಕಾಳಜಿ ಮೂಡಿದ್ದು ಬೆಳಗ್ಗೆ ವಾಕಿಂಗ್ ಮಾಡಲು ಆದ್ಯತೆ ನೀಡುತ್ತಿದ್ದಾರೆ. ರಸ್ತೆಯಲ್ಲಿ ವಾಹನಗಳ ಸಂಚಾರವಿರುವುದರಿಂದ ರಸ್ತೆಗಳ ಮೇಲೆ ವಾಕಿಂಗ್ ಮಾಡಲಾಗದು ಎಂಬ ಕಾರಣಕ್ಕೆ ಉದ್ಯಾನ ಅಭಿವೃದ್ಧಿಪಡಿಸಲಾಗಿತ್ತು. ಆದರೆ ಈ ಉದ್ಯಾನವು ಇದೀಗ ಅವ್ಯವಸ್ಥೆಯ ಆಗರವಾಗಿದೆ. ನಗರಸಭೆ ಆಡಳಿತ ನಡೆಸುವವರಿಗೆ ಕಾಳಜಿ ಇರದಿದ್ದಾಗ ಅತ್ಯುತ್ತಮ ಯೋಜನೆಗಳು ಹಳ್ಳ ಹಿಡಿಯುತ್ತವೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಉದ್ಯಾನದ ಉದ್ದೇಶವನ್ನು ಸರಿಯಾಗಿ ಅರಿತು ಜನಸ್ನೇಹಿಯಾಗಿ ರೂಪಿಸಬೇಕಿದೆ. 
-ಎಂ.ರಾಜಣ್ಣ, ಮಾಜಿ ಶಾಸಕ
ನಗರದ ನಿವಾಸಿಗಳು ಆರೋಗ್ಯವರ್ಧನೆಗಾಗಿ ಉದ್ಯಾನವನದಲ್ಲಿ ವಾಯುವಿಹಾರ ಮಾಡಲು ಇಷ್ಟಪಡುತ್ತಾರೆ. ವಾಯುವಿಹಾರಿಗಳಿಗಾಗಿ ನಿರ್ಮಿಸಲಾಗಿರುವ ಉದ್ಯಾನವು ಇಂದು ಕುಡುಕರ ಮತ್ತು ಪುಡಾರಿಗಳ ಅಡ್ಡೆಯಾಗಿ ಪರಿಣಿಸಿದೆ. ಹೀಗಿದ್ದಾಗ ಹೆಣ್ಣು ಮಕ್ಕಳು ಮತ್ತು ಮಕ್ಕಳು ಹೇಗೆ ಅಲ್ಲಿಗೆ ಹೋಗುತ್ತಾರೆ. ಸಂಜೆ ಹೊತ್ತು ಮಕ್ಕಳೊಂದಿಗೆ ಹೋಗಿ ಸ್ವಲ್ಪ ಹೊತ್ತು ಕಾಲ ಕಳೆಯಲು ಹೇಗೆ ಸಾಧ್ಯವಾದೀತು. ಉದ್ಯಾನದ ಅಭಿವೃದ್ಧಿಗಾಗಿ ಹಣವನ್ನು ನೀರಿನಂತೆ ವೆಚ್ಚ ಮಾಡಲಾಗಿದೆ. ಜನರಿಗೆ ಮಾತ್ರ ಯಾವುದೇ ಪ್ರಯೋಜನವಾಗಿಲ್ಲ. ವಾಯುವಿಹಾರಕ್ಕೆ ಹೋಗುವವರಿಗೆ ತೊಂದರೆಯಾಗಿದೆ
-ನಟರಾಜ್, ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.