ADVERTISEMENT

ಶಿಡ್ಲಘಟ್ಟ: ಗ್ರಾಮೀಣ ರಸ್ತೆಗೆ ಬೇಕಿದೆ ‘ಅಭಿವೃದ್ಧಿ ಭಾಗ್ಯ’

ಡಿ.ಜಿ.ಮಲ್ಲಿಕಾರ್ಜುನ
Published 20 ಅಕ್ಟೋಬರ್ 2025, 4:22 IST
Last Updated 20 ಅಕ್ಟೋಬರ್ 2025, 4:22 IST
ಶಿಡ್ಲಘಟ್ಟ ತಾಲ್ಲೂಕಿನ ವಾರಹುಣಸೇನಹಳ್ಳಿಯ ರಸ್ತೆ ಕೆಸರುಗುಂಡಿಗಳಿಂದ ಕೂಡಿದೆ
ಶಿಡ್ಲಘಟ್ಟ ತಾಲ್ಲೂಕಿನ ವಾರಹುಣಸೇನಹಳ್ಳಿಯ ರಸ್ತೆ ಕೆಸರುಗುಂಡಿಗಳಿಂದ ಕೂಡಿದೆ   

ಶಿಡ್ಲಘಟ್ಟ: ನಗರ ಪ್ರದೇಶ ದಾಟಿ ಗ್ರಾಮೀಣ ಭಾಗದತ್ತ ಮುಖ ಮಾಡಿದರೆ ಮೊದಲು ಆಹ್ವಾನಿಸುವುದು ಗುಂಡಿಬಿದ್ದ ರಸ್ತೆಗಳು. ಅಲ್ಲಲ್ಲಿ ಚೂರುಪಾರು ಡಾಂಬರು ಮೆತ್ತಿಕೊಂಡ ಕೊರಕಲು ಬಿದ್ದ ಮಣ್ಣಿನ ಮಾರ್ಗಗಳು. ಆ ರಸ್ತೆಯಲ್ಲೇ ಪ್ರಯಾಸಪಟ್ಟು ಸಾಗಬೇಕಾದ ಅನಿವಾರ್ಯತೆ ಗ್ರಾಮೀಣ ಜನರದ್ದು.

ಇತ್ತೀಚೆಗೆ ತಾಲ್ಲೂಕಿನಾದ್ಯಂತ ಬೀಳುತ್ತಿರುವ ಮಳೆಯಿಂದಾಗಿ ಗ್ರಾಮೀಣ ಭಾಗದ ರಸ್ತೆಗಳು ಇನ್ನಷ್ಟು ಹದಗೆಟ್ಟಿವೆ. ಅಲ್ಲದೆ ಮಳೆ ನೀರು ಸರಾಗವಾಗಿ ಹರಿದು ಹೋಗಲು ರಸ್ತೆಯ ಇಕ್ಕೆಲಗಳಲ್ಲಿ ಸರಿಯಾದ ವ್ಯವಸ್ಥೆ ಇರದ ಕಾರಣ ಬಹುತೇಕ ಗ್ರಾಮೀಣ ರಸ್ತೆಗಳು ಕೊರಕಲು ಬಿದ್ದಿವೆ. ರಸ್ತೆ ಅಕ್ಕಪಕ್ಕ ಇರುವ ಕುರುಚಲು ಗಿಡಗಳು, ಜಾಲಿ ಗಿಡಗಳು ಹರಿಯುವ ನೀರನ್ನು ತಡೆಯುತ್ತವೆ. ಆಗ ಸಹಜವಾಗಿ ಕೊರಕಲು, ಗುಂಡಿಗಳ ಪ್ರಮಾಣ ಹೆಚ್ಚಾಗುತ್ತದೆ. ಕೆಲವೆಡೆ ಚರಂಡಿಗಳು ಇದ್ದರೂ ಅವುಗಳ ಸರಿಯಾದ ನಿರ್ವಹಣೆ ಇಲ್ಲದ ಕಾರಣ ರಸ್ತೆ ಮೇಲೆ ಮಳೆ ನೀರು ಹರಿದು ಮಾರ್ಗಗಳು ಹಾಳಾಗುತ್ತವೆ.

ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರಹುಣಸೇನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿಲ್ಲ. ಸಮರ್ಪಕ ರಸ್ತೆ ಇಲ್ಲ. ರಸ್ತೆ ಇಲ್ಲದ ಮೇಲೆ ಬಸ್ ಸಂಚಾರದ ಮಾತು ಇಲ್ಲವೆ ಇಲ್ಲ. ಸರಿಯಾದ ರಸ್ತೆ ಇಲ್ಲದ್ದರಿಂದ ಬಸ್ ಬರುವುದಿಲ್ಲ. ಶಾಲೆಗೆ ಹೋಗುವ ಮಕ್ಕಳು ದ್ವಿಚಕ್ರ ವಾಹನ ಅವಲಂಬಿಸಬೇಕು. ಮಳೆ ಬಿದ್ದರೆ ದ್ವಿಚಕ್ರ ವಾಹನದಲ್ಲಿ ಸಂಚರಿಸುವುದೂ ಕಷ್ಟ, ಒಂದು ರೀತಿಯಲ್ಲಿ ಸರ್ಕಾರದ ಸಂಪರ್ಕವನ್ನೆ ಕಳೆದುಕೊಂಡಂತೆ ವಾರಹುಣಸೇನಹಳ್ಳಿ ಅಭಿವೃದ್ಧಿಯಿಂದ ದೂರ ಉಳಿದುಬಿಟ್ಟಿದೆ ಎನ್ನುತ್ತಾರೆ ವಾರಹುಣಸೇನಹಳ್ಳಿ ಗ್ರಾಮಸ್ಥ ರಂಜಿತ್‌ಕುಮಾರ್.

ADVERTISEMENT

ರಸ್ತೆಗಳು ನರನಾಡಿಗಳಿದ್ದಂತೆ. ರಸ್ತೆ ಸಂಪರ್ಕದಿಂದ ಅಭಿವೃದ್ಧಿ ಸಾಧ್ಯ. ಹಾಗಾಗಿ ತಾಲ್ಲೂಕಿನ ರಸ್ತೆ ಸಂಪರ್ಕ ವ್ಯವಸ್ಥೆಯನ್ನು ತುರ್ತಾಗಿ ಬಲಪಡಿಸಬೇಕಿದೆ. ತಾಲ್ಲೂಕಿನಲ್ಲಿ ಸುಮಾರು 200-220 ಹಳ್ಳಿಗಳಿವೆ. ತಾಲ್ಲೂಕು ಕೇಂದ್ರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರಸ್ತೆ ಸಂಪರ್ಕ ಸಂಪೂರ್ಣ ಹದಗೆಟ್ಟಿದೆ. ಕೆಲವು ಗ್ರಾಮಗಳ ರಸ್ತೆಗಳು ರಸ್ತೆ ಎನಿಸಿಕೊಳ್ಳುವ ಯೋಗ್ಯತೆ ಕಳೆದುಕೊಂಡಿವೆ. ಇದರಿಂದ ಗ್ರಾಮೀಣ ಭಾಗದಲ್ಲಿ ಸಂಚಾರ ಸಂಕಷ್ಟವಾಗಿದೆ. ಹಲವು ವರ್ಷಗಳಿಂದ ಸುಸಜ್ಜಿತ ರಸ್ತೆ ಗ್ರಾಮೀಣರಿಗೆ ಕನಸಾಗಿ ಪರಿಣಮಿಸಿದೆ.

ತಾಲ್ಲೂಕಿನಲ್ಲಿ 250 ಕಿ.ಮೀ ರಸ್ತೆ ಹದಗೆಟ್ಟಿದೆ. 150 ಕಿ.ಮೀ ರಸ್ತೆ ಸಂಚರಿಸುವ ಯೋಗ್ಯತೆ ಕಳೆದುಕೊಂಡಿದೆ. 216 ಕಿ.ಮೀ ರಸ್ತೆಯನ್ನು ಅಗತ್ಯವಾಗಿ ಹೊಸದಾಗಿ ನಿರ್ಮಾಣವಾಗಬೇಕಿದೆ.

ಗ್ರಾಮೀಣ ಭಾಗದ ರಸ್ತೆಗಳು ವಿದ್ಯಾರ್ಥಿಗಳಿಗೆ, ಆರೋಗ್ಯ ಸಮಸ್ಯೆ ಇರುವವರಿಗೆ, ಹೂ ಹಣ್ಣುಗಳನ್ನು ಸಾಗಿಸುವವರಿಗೆ, ನಗರಕ್ಕೆ ಬಂದು ಹೋಗುವವರಿಗೆ ದಿನನಿತ್ಯದ ಸಂಗಾತಿ. ರಸ್ತೆಯೇ ಸರಿ ಇರದಿದ್ದರೆ ಗ್ರಾಮೀಣ ಭಾಗದ ಆರ್ಥಿಕತೆ, ಸಾಮಾಜಿಕ ಪರಿಸ್ಥಿತಿ, ಅಭಿವೃದ್ಧಿ ಎಲ್ಲವೂ ಕುಂಠಿತಗೊಳ್ಳುತ್ತದೆ. ಗ್ರಾಮೀಣ ರಸ್ತೆಗಳ ಸಮಸ್ಯೆಗಳು ನಿರ್ಮಾಣ, ನಿರ್ವಹಣೆ, ಗುಣಮಟ್ಟದ ಕೊರತೆ, ಮತ್ತು ನಿಧಿಯ ಕೊರತೆಯನ್ನು ಒಳಗೊಂಡಿವೆ. ಇದರಿಂದಾಗಿ ಮಳೆಯಾದಾಗ ರಸ್ತೆಗಳು ಹಾಳಾಗುತ್ತವೆ. ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ ಮತ್ತು ಜನಸಾಮಾನ್ಯರ ಬದುಕು ದುಸ್ತರವಾಗುತ್ತದೆ. ಹಾಗಾಗಿ ಗ್ರಾಮೀಣರು ಮೊದಲು ಉತ್ತಮ ರಸ್ತೆ ಮಾಡಿ ಎನ್ನುತ್ತಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸೇನಹಳ್ಳಿಯಿಂದ ಮಾರಪ್ಪನಹಳ್ಳಿಗೆ ಹೋಗುವ ರಸ್ತೆಯಲ್ಲಿ ವಿದ್ಯಾರ್ಥಿಗಳು ನಡೆದು ಹೋಗಲು ಕಷ್ಟಪಡುತ್ತಿರುವುದು
2024-25ನೇ ಸಾಲಿನ ಶಾಸಕರ ₹10 ಕೋಟಿ ಅನುದಾನದಲ್ಲಿ ಬುರುಡುಗುಂಟೆ ನಾರಾಯಣದಾಸರಹಳ್ಳಿ ಎನ್.ಹೊಸಹಳ್ಳಿ ಒಂಟೂರು ಲಕ್ಕಹಳ್ಳಿ ಸೀತಹಳ್ಳಿ ಗಡಿಮಿಂಚೇನಹಳ್ಳಿ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಮುಖ್ಯಮಂತ್ರಿ ವಿಶೇಷ ಅನುದಾನ ₹25 ಕೋಟಿಯಲ್ಲಿ ತಲಕಾಯಲಬೆಟ್ಟ ಕ್ರಾಸ್‌ನಿಂದ ಈ ತಿಮ್ಮಸಂದ್ರ ವರೆಗೆ ₹10 ಕೋಟಿಯ ರಸ್ತೆ ₹4 ಕೋಟಿಯಲ್ಲಿ ಕೋರಲಪರ್ತಿ ಸೇತುವೆ ಮತ್ತು ಮತ್ತು ಉಳಿಕೆ ಹಣದಲ್ಲಿ ಇತರೆ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ನಡೆಸುತ್ತಿದ್ದೇವೆ. ಒಟ್ಟಾರೆ ತಾಲ್ಲೂಕಿನಲ್ಲಿ ಕೇವಲ 40 ಕಿ.ಮೀ ಗ್ರಾಮೀಣ ರಸ್ತೆ ಮಾತ್ರ ಅಭಿವೃದ್ಧಿ ಆಗುತ್ತಿದೆ. ಇನ್ನೂ 216 ಕಿ.ಮೀ ಗ್ರಾಮೀಣ ರಸ್ತೆ ಅಭಿವೃದ್ಧಿ ಆಗಬೇಕಿದೆ.
–ಬಿ.ಎನ್.ರವಿಕುಮಾರ್, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.