
ಶಿಡ್ಲಘಟ್ಟ: ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿ.ಪೆದ್ದನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಸೇರಿದ ಜಾಗವನ್ನು ಗ್ರಾಮಸ್ಥರು ಒತ್ತುವರಿ ಮಾಡಿದ್ದಾರೆ ಎಂಬ ದೂರಿನ ಮೇರೆಗೆ ಶನಿವಾರ ತಹಶೀಲ್ದಾರ್ ಎನ್.ಗಗನಸಿಂಧು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಲೆಗೆ ಸಂಬಂಧಿಸಿದ ಜಾಗವನ್ನು ಕೆಲವರು ಒತ್ತುವರಿ ಮಾಡಿರುವುದರಿಂದ ಎರಡು ವರ್ಷಗಳಿಂದ ಸರ್ಕಾರಿ ಶಾಲೆ ನಡೆಸದೆ ಮುಚ್ಚಿದ್ದಾರೆ. ಶಾಲೆಯ ಒತ್ತುವರಿ ಜಾಗ ತೆರವುಗೊಳಿಸಿದರೆ ಶಾಲೆಗೆ ಮಕ್ಕಳು ಬರುವಂತೆ ವ್ಯವಸ್ಥೆ ಮಾಡುತ್ತೇವೆ ಎಂದು ಗ್ರಾಮಸ್ಥರು ತಹಶೀಲ್ದಾರ್ ಅವರಿಗೆ ಮನವಿ ಮಾಡಿದ್ದರು. ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಶಾಲೆಗೆ ಸೇರಿದ ಜಾಗದಲ್ಲಿ ಮನೆ ಕಟ್ಟಿಸುತ್ತಿರುವವರಿಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದರು.
15 ದಿನದ ಒಳಗಾಗಿ ಈ ಜಾಗದ ದಾಖಲೆ ತಂದುಕೊಡಿ. ದಾಖಲೆಗಳು ಸರಿ ಇದ್ದಲ್ಲಿ ಕಾಮಗಾರಿ ಮುಂದುವರಿಸಲು ಅವಕಾಶ ನೀಡಲಾಗುತ್ತದೆ. ಪಿಡಿಒ ಅಥವಾ ನಮ್ಮ ಗಮನಕ್ಕೆ ಬಾರದೆ ಕಾಮಗಾರಿ ಪ್ರಾರಂಭಿಸಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ಶಾಲೆಯ ದಾಖಲೆಗಳಲ್ಲಿ ಶಾಲೆಗೆ ಸೇರಿದ ಜಾಗ 75x100 ಅಡಿಯಷ್ಟಿದೆ. ಆದರೆ ಸ್ಥಳದಲ್ಲಿ ಅಳತೆ ಮಾಡಿದರೆ 77x79 ಅಡಿ ಮಾತ್ರ ಬರುತ್ತಿದೆ. ಉಳಿದ ಜಾಗ ಎಲ್ಲಿ ಹೋಯ್ತು ಎಂದು ಗ್ರಾಮಸ್ಥರನ್ನು ಪ್ರಶ್ನಿಸಿದ ಅವರು ಗ್ರಾಮದಲ್ಲಿ ಈ ವರ್ಷ ಶಾಲೆ ಆರಂಭವಾಗದಿದ್ದಲ್ಲಿ ಸಂಪೂರ್ಣ ಜಾಗವನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳುವಂತೆ ಕಂದಾಯ ನಿರೀಕ್ಷಕರೂ ಸೇರಿದಂತೆ ಗ್ರಾಮ ಸಹಾಯಕರಿಗೆ ಸೂಚಿಸಿದರು.
ಒತ್ತುವರಿ ಮಾಡಿರುವ ಸರ್ಕಾರಿ ಶಾಲೆಯ ಜಾಗವನ್ನು ಸಂಪೂರ್ಣವಾಗಿ ಸ್ವಾಧೀನಕ್ಕೆ ಪಡೆದುಕೊಳ್ಳುತ್ತೇವೆ. ಗ್ರಾಮದಲ್ಲಿ ಸರ್ಕಾರಿ ಶಾಲೆ ಪುನರ್ ಸ್ಥಾಪನೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಸಾರ್ವಜನಿಕರು ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಿ, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಕೊಳವೆಬಾವಿ ಮಾಯ: ಗ್ರಾಮದ ಜನರಿಗೆ ನೀರು ಪೂರೈಸುವ ಉದ್ದೇಶದಿಂದ ಇದೇ ಸರ್ಕಾರಿ ಜಾಗದಲ್ಲಿ ಕೊಳವೆಬಾವಿ ಕೊರೆಸಿದ್ದು ಅದರಲ್ಲಿ ನೀರು ಸಹ ಇತ್ತು. ಆದರೆ ಜಾಗವನ್ನು ಒತ್ತುವರಿ ಮಾಡಿಕೊಳ್ಳುವ ಉದ್ದೇಶದಿಂದ ಕೊಳವೆಬಾವಿಗೆ ಅಳವಡಿಸಿದ್ದ ಪಂಪು, ಮೋಟಾರನ್ನು ಒಳಗೆ ಬೀಳಿಸಿದ್ದಾರೆ. ಅದರಲ್ಲಿನ ಪಂಪು ಮೋಟಾರು ಮೇಲೆತ್ತಿದರೆ ಗ್ರಾಮಕ್ಕೆ ಕುಡಿಯುವ ನೀರು ಲಭ್ಯವಾಗುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ತಹಶೀಲ್ದಾರ್‌ಗೆ ಮನವಿ ಮಾಡಿದರು.
ಕಂದಾಯ ನಿರೀಕ್ಷಕ ಅಮರೇಂದ್ರ, ಗ್ರಾಮ ಲೆಕ್ಕಾಧಿಕಾರಿ ರಾಕೇಶ್, ದಿಬ್ಬೂರಹಳ್ಳಿ ಠಾಣೆಯ ಪಿಎಸ್‌ಐ ಶ್ಯಾಮಲ, ಪಿಡಿಒ ವಜ್ರೇಶ್, ಸಿಆರ್‌ಪಿ ವೆಂಕಟೇಶಪ್ಪ, ಜಯಚಂದ್ರ, ರಾಮಕೃಷ್ಣಪ್ಪ, ಶ್ರೀನಿವಾಸ್, ಪಿಳ್ಳಪ್ಪ, ಶಿವಪ್ಪ, ವೆಂಕಟರೆಡ್ಡಿ ದ್ಯಾವಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.