ADVERTISEMENT

ನಿಯಮ ಉಲ್ಲಂಘಿಸಿದ ಕಾನ್‌ಸ್ಟೆಬಲ್‌ಗೂ ದಂಡ!

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 5:42 IST
Last Updated 13 ಡಿಸೆಂಬರ್ 2025, 5:42 IST
ಶಿಡ್ಲಘಟ್ಟದಲ್ಲಿ ಹೆಲ್ಮೆಟ್ ಜಾಗೃತಿ ಮೂಡಿಸುವ ಬೈಕ್ ರ‍್ಯಾಲಿ 
ಶಿಡ್ಲಘಟ್ಟದಲ್ಲಿ ಹೆಲ್ಮೆಟ್ ಜಾಗೃತಿ ಮೂಡಿಸುವ ಬೈಕ್ ರ‍್ಯಾಲಿ    

ಶಿಡ್ಲಘಟ್ಟ: ಜಿಲ್ಲೆಯಲ್ಲಿ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ನಿಯಮ ಜಾರಿಯಾದ ಮೊದಲ ದಿನವಾದ ಶುಕ್ರವಾರದಿಂದಲೇ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವುದು ಕಂಡುಬಂದಿದೆ. 

ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವ ಮಹತ್ವದ ಬಗ್ಗೆ ಬೆಳಗ್ಗೆಯಿಂದಲೇ ಪೊಲೀಸರು ಜಾಗೃತಿ ಅಭಿಯಾನ, ರ‍್ಯಾಲಿ ಹಮ್ಮಿಕೊಂಡರು.

ನಗರದಲ್ಲಿ ಹೆಲ್ಮೆಟ್ ಕಡ್ಡಾಯದ ಮೊದಲ ದಿನ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವರು ನಿಯಮ ಪಾಲನೆ ಮಾಡಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೆ, ಇನ್ನೂ ಹಲವರು ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದರು. ಇಂಥವರನ್ನು ತಡೆದ ಪೊಲೀಸರು, ಅವರಿಗೆ ಎಚ್ಚರಿಕೆ ನೀಡಿದರು. ಆದರೆ, ಸಂಜೆ ಐದು ಗಂಟೆ ನಂತರ ನಗರದ ಪೊಲೀಸ್ ಠಾಣೆ ಎದುರು ವಿಶೇಷ ತಪಾಸಣೆ ಹಮ್ಮಿಕೊಳ್ಳಲಾಯಿತು. ಈ ವೇಳೆ ಹೆಲ್ಮೆಟ್ ಇಲ್ಲದೆ ಬಂದ ಸವಾರರಿಗೆ ಪೊಲೀಸರು ದಂಡ ವಿಧಿಸಿದರು. 

ADVERTISEMENT

ಈ ಸಂದರ್ಭದಲ್ಲಿ ಹೆಲ್ಮೆಟ್ ಹಾಕದೆ ಬೈಕ್‌ನಲ್ಲಿ ಬರುತ್ತಿದ್ದ ಪೊಲೀಸ್ ಕಾನ್‌ಸ್ಟೆಬರ್ ಒಬ್ಬರಿಗೆ ದಂಡ ವಿಧಿಸಿದರು. ಸಾಮಾನ್ಯ ಮತ್ತು ಪೊಲೀಸರಿಗೆ ಎಲ್ಲರಿಗೂ ಒಂದೇ ನ್ಯಾಯ. ಪೊಲೀಸ್ ಆದರೂ, ಕಾನೂನು ಉಲ್ಲಂಘಿಸಿದರೆ ದಂಡ ತೆರಲೇಬೇಕು ಎಂಬ ಸಂದೇಶವನ್ನು ರವಾನಿಸಿದರು. 

ಜಿಲ್ಲಾ ಮಟ್ಟದಲ್ಲಿ ಹೆಲ್ಮೆಟ್ ಕಡ್ಡಾಯ ಜಾರಿಯ ಹಿನ್ನೆಲೆಯಲ್ಲಿ ಶಿಡ್ಲಘಟ್ಟದಲ್ಲಿ ಮೊದಲ ದಿನ ಅನೇಕ ಸವಾರರಿಗೆ ದಂಡ ವಿಧಿಸಲಾಯಿತು. ಸ್ಥಳದಲ್ಲಿ ರಸೀದಿ ನೀಡುತ್ತಾ, ಹೆಲ್ಮೆಟ್‌ ಅಗತ್ಯತೆ, ಜೀವ ರಕ್ಷಣೆ ಮಹತ್ವ ಕುರಿತು ಪೊಲೀಸರು ಜನರಿಗೆ ತಿಳಿಹೇಳಿದರು. 

‘ನಾವೇ ಮೊದಲಿಗೆ ಪಾಲಿಸೋಣ, ಆಗ ಜನರು ಪಾಲಿಸುತ್ತಾರೆ’ ಎಂಬ ಸಂದೇಶದೊಂದಿಗೆ ನಡೆದ ಈ ಕಾರ್ಯಕ್ರಮದಿಂದ ಶಿಡ್ಲಘಟ್ಟ ಪೊಲೀಸ್ ಇಲಾಖೆ ಮೇಲೆ ಜನರಿಗೆ ಮತ್ತಷ್ಟು ವಿಶ್ವಾಸ ಮೂಡಿದೆ.

ಹಿಂದಿನಿಂದಲೂ ಜಿಲ್ಲಾ ಪೊಲೀಸ್ ಇಲಾಖೆಯು ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸುತ್ತಿತ್ತು. ದಂಡವನ್ನೂ ವಿಧಿಸಲು ಆದೇಶಿಸಿತ್ತು. ಆದರೆ ಈ ನಿಯಮ ಕಡ್ಡಾಯವಾಗಿ ಜಾರಿಯಾಗಿರಲಿಲ್ಲ. ನಾಮಕಾವಸ್ತೆಗೆ ಎನ್ನುವಂತಿತ್ತು. ಆದರೆ, ಈಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. 

ನಗರದಲ್ಲಿ ಸಂಚರಿಸುವ ಬೈಕ್ ಸವಾರರು, ನಿತ್ಯ ರೇಷ್ಮೆಗೂಡು ಮಾರುಕಟ್ಟೆಗೆ ಬೈಕ್‌ನಲ್ಲಿ ಬರುವ ರೈತರು ಸಹ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಪೊಲೀಸ್ ಇಲಾಖೆ ಸೂಚಿಸಿದೆ. ಒಟ್ಟಾರೆ ಹೆಲ್ಮೆಟ್ ಹಾಕಿಕೊಳ್ಳದೆ ಸಂಚರಿಸುವ ಬೈಕ್ ಸವಾರರ ಬಗ್ಗೆ ತೀವ್ರ ನಿಗಾ ಇಟ್ಟು ದಂಡ ವಿಧಿಸುವ ಕಾರ್ಯಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸಿದ್ದಾರೆ.

ಶಿಡ್ಲಘಟ್ಟದಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.