ADVERTISEMENT

ಚಿಕ್ಕಬಳ್ಳಾಪುರ | ಡಿ.ಸಿ ಕಚೇರಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ

ಕೆಐಎಡಿಬಿಯಿಂದ ಭೂಸ್ವಾಧೀನ ನಿಲ್ಲಿಸಲು ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 16:03 IST
Last Updated 30 ಜೂನ್ 2025, 16:03 IST
ಶಿಡ್ಲಘಟ್ಟ ತಾಲ್ಲೂಕು ರೈತ ಸಂಘದ ಕಚೇರಿಯಲ್ಲಿ ಜಂಗಮಕೋಟೆ ಹೋಬಳಿ ಕೆಐಎಡಿಬಿ ವಿರೋಧಿ ರೈತರು ಪೂರ್ವಭಾವಿ ಸಭೆ ನಡೆಸಿದರು
ಶಿಡ್ಲಘಟ್ಟ ತಾಲ್ಲೂಕು ರೈತ ಸಂಘದ ಕಚೇರಿಯಲ್ಲಿ ಜಂಗಮಕೋಟೆ ಹೋಬಳಿ ಕೆಐಎಡಿಬಿ ವಿರೋಧಿ ರೈತರು ಪೂರ್ವಭಾವಿ ಸಭೆ ನಡೆಸಿದರು   

ಶಿಡ್ಲಘಟ್ಟ: ಜಂಗಮಕೋಟೆ ಹೋಬಳಿಯಲ್ಲಿ ಕೆಐಎಡಿಬಿಯಿಂದ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಯೋಜನೆ ಕೈಬಿಡಬೇಕು ಎಂದು ಕೆಐಎಡಿಬಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಹೀರೆಬಲ್ಲ ಕೃಷ್ಣಪ್ಪ ಒತ್ತಾಯಿಸಿದರು. 

‘ಭೂಸ್ವಾಧೀನ ವಿರುದ್ಧದ ನಮ್ಮ ಹೋರಾಟವು ಮುಂದುವರಿದಿದ್ದು, ಜುಲೈ 1ರ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ರೈತರು ಟ್ರ್ಯಾಕ್ಟರ್‌ಗಳ ಮೂಲಕ ತೆರಳಿ, ಪ್ರತಿಭಟನೆ ನಡೆಸಲಾಗುವುದು’ ಎಂದು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಟ್ರ್ಯಾಕ್ಟರ್‌ಗಳ ಮೂಲಕ ಪ್ರತಿಭಟಿಸುವ ಹಿನ್ನೆಲೆಯಲ್ಲಿ ಶಿಡ್ಲಘಟ್ಟದ ರೈತರ ಕಚೇರಿಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆ ನಡೆಯಿತು.

ADVERTISEMENT

‘ಜಂಗಮಕೋಟೆ ಹೋಬಳಿಯಲ್ಲಿ ಕೆಐಎಡಿಬಿಯು ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದಾಗಿನಿಂದ ಈವರೆಗೆ ನಾವು ಹಲವು ರೀತಿಯ ಪ್ರತಿಭಟನೆ ನಡೆಸಿದ್ದೇವೆ. ಅಂದಿನಿಂದಲೂ ಭೂ ಸ್ವಾಧೀನ ವಿರೋಧಿಸುತ್ತಲೇ ಬಂದಿದ್ದೇವೆ. ಯಾವುದೇ ಕಾರಣಕ್ಕೂ ನಾವು ಕೃಷಿ ಭೂಮಿಯನ್ನು ಕೆಐಎಡಿಬಿಗೆ ಬಿಟ್ಟುಕೊಡುವುದಿಲ್ಲ’ ಎಂದು ಹೇಳಿದರು.

ಭೂಸ್ವಾಧೀನ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕ ಬಿ.ಎನ್.ರವಿಕುಮಾರ್ ಅವರು ರೈತರ ಪರ ನಿಲ್ಲುತ್ತಿಲ್ಲ. ರೈತರಿಂದ ಭೂಮಿ ಕಿತ್ತುಕೊಂಡು ಕೈಗಾರಿಕೆಗಳನ್ನು ಆರಂಭಿಸುವವರ ಪರ ನಿಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭೂಸ್ವಾಧೀನ ವಿರೋಧಿಸಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿರುವ ಟ್ರ್ಯಾಕ್ಟರ್ ಚಳವಳಿಯಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕಿನಿಂದ ರೈತರು ಟ್ರ್ಯಾಕ್ಟರ್‌ನಲ್ಲಿ ಬಂದು ಪಾಲ್ಗೊಳ್ಳಲಿದ್ದಾರೆ. ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಕೇಂದ್ರದ ಮಾಜಿ ಸಚಿವ ಇಬ್ರಾಹಿಂ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವೇಣುಗೋಪಾಲ್, ಮುನಿನಂಜಪ್ಪ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ನಡಿಪಿನಾಯಕನಹಳ್ಳಿ ಅಜಿತ್, ಅಶ್ವತ್ಥಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.