ADVERTISEMENT

ಶಿಡ್ಲಘಟ್ಟ: ಮಾಸುತ್ತಿದೆ ರೇಷ್ಮೆ ಕೃಷಿಕರ ಬದುಕಿನ ಬಣ್ಣ

ರೋಗಬಾಧೆ, ಸೌಲಭ್ಯ ಕೊರತೆ, ಸಿಗದ ಬೆಲೆ । ಪರ್ಯಾಯ ಬೆಳೆಯತ್ತ ವಾಲಿದ ರೈತರು

ಡಿ.ಜಿ.ಮಲ್ಲಿಕಾರ್ಜುನ
Published 28 ಜನವರಿ 2025, 5:49 IST
Last Updated 28 ಜನವರಿ 2025, 5:49 IST
ರೋಗಕ್ಕೆ ತುತ್ತಾದ ಹಿಪ್ಪುನೇರಳೆ ಸೊಪ್ಪು
ರೋಗಕ್ಕೆ ತುತ್ತಾದ ಹಿಪ್ಪುನೇರಳೆ ಸೊಪ್ಪು   

ಶಿಡ್ಲಘಟ್ಟ: ಹೆಣ್ಣು ಮಕ್ಕಳ, ಮಹಿಳೆಯರ ಅಂದ ಹೆಚ್ಚಿಸುವ ರೇಷ್ಮೆ ಸೀರೆಗೆ ಕಚ್ಛಾ ವಸ್ತು ಪೂರೈಸುವ ರೇಷ್ಮೆ ಕೃಷಿಕರ ಬದಕಿನ ಬಣ್ಣ ಈಚೆಗೆ ಮಾಸುತ್ತಿದೆ. ಹಿಪ್ಪು ನೇರಳೆ ಮತ್ತು ರೇಷ್ಮೆ ಹುಳುವಿಗೆ ರೋಗ ಬಾಧೆ, ಸೌಲಭ್ಯ ಕೊರತೆ ಮತ್ತು ಮಾರುಕಟ್ಟೆಗಳಲ್ಲಿ ಗೂಡಿಗೆ ಸರಿಯಾದ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ.

ರೇಷ್ಮೆ ಬೆಳೆ ತಾಲ್ಲೂಕಿನ ಬಹುತೇಕ ರೈತರ ಪಾಲಿಗೆ ವರದಾನವಾಗಿತ್ತು. ಆದರೆ ಈಚೆಗೆ ರೇಷ್ಮೆ ಕೃಷಿ ನಂಬಿದವರು ಹತ್ತು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದರಿಂದ ಹಲವು ರೈತರು ಪರ್ಯಾಯ ಬೆಳೆಯತ್ತ ಮುಖ ಮಾಡಿದ್ದಾರೆ.

ಈ ಹಿಂದೆ ಹಿಪ್ಪುನೇರಳೆ ಸೊಪ್ಪಿಗೆ ಯಾವುದೇ ರಾಸಾಯನಿಕ ಸಿಂಪಡಿಸದೇ ಬೆಳೆಯಲಾಗುತ್ತಿತ್ತು. ಆದರೆ ಕಳೆದ ನಾಲ್ಕೈದು ವರ್ಷದಿಂದ ಆರಾರಂಭವಾದ ಸಂಕ್ರಾಮಿಕ ನುಸಿ ರೋಗದಿಂದ ಹಿಪ್ಪುನೇರಳೆ ಸೊಪ್ಪಿಗೆ ಔಷಧಿ ಸಿಂಪಡಿಸಲೇ ಬೇಕಾದ ಸ್ಥಿತಿ ನಿರ್ಮಣವಾಯಿತು. ನುಸಿ ರೋಗ ಮತ್ತು ಕೀಟ ಬಾಧೆಗೆ ಪರಿಹಾರ ಒದಗಿಸಲು ರೇಷ್ಮೆ ಇಲಾಖೆ ನಡೆಸಿದ ಪ್ರಯತ್ನಗಳು ಫಲ ನೀಡಲಿಲ್ಲ. ನುಸಿ ರೋಗದಿಂದ ಹಿಪ್ಪುನೇರಳೆ ಸೊಪ್ಪಿನ ಇಳುವರಿ ಕುಂಠಿತವಾಗಿ ಉತ್ಪಾದನಾ ವೆಚ್ಚ ಏರತೊಡಗಿದೆ.

ADVERTISEMENT

ಕಳೆದ ಮೂರ್ನಾಕು ತಿಂಗಳಿಂದ ಜಡಿ ಮಳೆಗಳಿಂದ ತೇವಾಂಶ ಹೆಚ್ಚಾಗಿ ಹಿಪ್ಪುನೇರಳೆ ಸೊಪ್ಪಿಗೆ ಬೂದಿ ರೋಗ ಮತ್ತು ಕೆಂಪು ಚುಕ್ಕೆ ರೋಗ ಬಂದು ಎಲೆಗಳೇ ಇಲ್ಲವಾಗುತ್ತಿವೆ. ಈ ರೋಗ ಬಂದ ಸೊಪ್ಪು ರೇಷ್ಮೆ ಹುಳುಗಳು ಸಪ್ಪೆ, ಸುಣ್ಣಕಟ್ಟು, ಹಾಲು ಮತ್ತು ಹಾಲುತೊಂಡೆ ರೋಗಗಳಿಗೆ ತುತ್ತಾಗಿ ಸಾಯುತ್ತಿವೆ. ಇದರಿಂದ ರೇಷ್ಮೆ ಬೆಳೆಗಾರರು ಕಂಗಾಲಾಗಿದ್ದಾರೆ.

ಈ ಹಿಂದೆ ಸರ್ಕಾರ ಮತ್ತು ರೇಷ್ಮೆ ಇಲಾಖೆ ರೇಷ್ಮೆ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಿತ್ತು. ಸಮಸ್ಯೆ ಬಗೆ ಹರಿಸಲು ಇಲಾಖೆಯ ವಿಜ್ಞಾನಿಗಳು ಮುಂದಾಗುತ್ತಿದ್ದರು. ಆದರೆ ಈಗೀಗ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯಿಂದ ರೈತರ ತೋಟಗಳತ್ತ ಗಮನವೇ ಹರಿಸುವುದೇ ಕಡಿಮೆಯಾಗಿದೆ.

ಮಿಶ್ರತಳಿ ನಿರ್ಲಕ್ಷ್ಯ: ರೇಷ್ಮೆ ಇಲಾಖೆ ಅಧಿಕಾರಿಗಳು ಕೇವಲ ಬೈವೊಲ್ಟೀನ್ ರೇಷ್ಮೆ ಗೂಡಿನ ಜಪ ಮಾಡುತ್ತಿದ್ದಾರೆ. ಬೈವೊಲ್ಟೀನ್ ರೇಷ್ಮೆ ಗೂಡಿನ ಬೆಳೆಗಾರರಿಗಷ್ಟೇ ಕಾರ್ಯಾಗಾರ ನಡೆಸುತ್ತಿರುತ್ತಾರೆ. ಆದರೆ  ‘ಕೋಲಾರ ಚಿನ್ನ’ ಎಂದೇ ಹೆಸರಾದ ‘ಮಿಶ್ರತಳಿ’ ರೇಷ್ಮೆ ಗೂಡಿನ ರೇಷ್ಮೆ ಗೂಡಿನ ಮಾರುಕಟ್ಟೆಯ ಆದಾಯ ಮತ್ತು ಆವಕದಲ್ಲಿ ಶೇ 90 ರಷ್ಟು ಪಾಲು ಹೊಂದಿದೆ. ಜಿಲ್ಲೆಯಲ್ಲಿ ಮಿಶ್ರತಳಿ ರೇಷ್ಮೆ ಗೂಡನ್ನು ಬೆಳೆಯುವವರು ಶೇ 90 ರಷ್ಟು ಇದ್ದರೂ ಇಲಾಖೆ ಇವರ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ. ಅವರಿಗೆ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ ಎನ್ನುವರು ರೇಷ್ಮೆ ಬೆಳೆಗಾರರು.

ಈ ಹಿಂದೆ ರೇಷ್ಮೆ ಹುಳು ಸಾಕಾಣಿಕಾ ಮನೆಗಳಿಗೆ ಸಿಂಪಡಿಸುವ ಸೋಂಕು ನಿವಾರಕ ಔಷಧಿಗಳನ್ನು ಇಲಾಖೆಯಿಂದ ಉಚಿತವಾಗಿ ನೀಡಲಾಗುತ್ತಿತು. ರೇಷ್ಮೆ ಹುಳು ಸಾಕಾಣಿಕೆ ಮತ್ತು ತೋಟಗಳ ನಿರ್ವಹಣೆಗೆ ವಿಜ್ಞಾನಿಗಳಿಂದ ಸಲಹೆ, ಔಷಧಿಗಳು ದೊರೆಯುತ್ತಿತ್ತು. ಈಗ ಸೌಲಭ್ಯ ನೀಡುತ್ತಿಲ್ಲ. ರೇಷ್ಮೆ ಬೆಳೆಗಾರರಿಗೆ ಪೂರಕವಾಗಿ ಯಾವುದೇ ಮಾಹಿತಿ, ಔಷಧಿ ಹಾಗೂ ಸೌಲಭ್ಯ ಸಿಗುತ್ತಿಲ್ಲ ಎಂಬುದು ರೇಷ್ಮೆ ಬೆಳೆಗಾರರು ದೂರು.

ಈ ಎಲ್ಲ ಸಮಸ್ಯೆಗಳಿಂದ ಬೆಳೆಗಾರರಿಗೆ ರೇಷ್ಮೆ ಕೃಷಿಯ ಮೇಲಿನ ವ್ಯಾಮೋಹ ಕಡಿಮೆಯಾಗಿದೆ. ಹಲವು ಸವಾಲು ಕಷ್ಟಗಳನ್ನು ಮೀರಿ ಬೆಳೆ ಬೆಳೆದರೂ ಸರಿಯಾದ ಬೆಲೆ ಸಿಗದ ನಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ರೈತರು ರೇಷ್ಮೆ ಬೆಳೆಯ ಆಕರ್ಷಣೆ ಕಳೆದುಕೊಂಡು ಪರ್ಯಾಯ ಬೆಳೆಯತ್ತ ಮುಖ ಮಾಡುತ್ತಿದ್ದಾರೆ.

ಶಿಡ್ಲಘಟದಲ್ಲಿ ಹಿಪ್ಪು ನೇರಳೆ ಬೆಳೆ
ರೇಷ್ಮೆ ಹುಳುಗಳು ಹಣ್ಣಾದಾಗ ಬಿದಿರಿನ ಚಂದ್ರಂಕಿಗೆ ಗೂಡು ಕಟ್ಟಲು ಬಿಡುತ್ತಿರುವುದು

ಸಮಸ್ಯೆ ಹಲವಾರು

ಕಳೆದ ಮೂರು ತಿಂಗಳಿಂದ ಮಾತ್ರ ಮಿಶ್ರತಳಿಯ ಒಂದು ಕೆ.ಜಿ ರೇಷ್ಮೆ ಗೂಡಿಗೆ ₹500-600 ಸಿಗುತ್ತಿದೆ. ಆದರೆ ಉತ್ಪಾದನೆಗೆ 600-₹700 ತಗುಲುತ್ತಿದೆ. ಕೂಲಿಯಾಳುಗಳ ಸಮಸ್ಯೆಯೂ ಹೆಚ್ಚಿದೆ. ಸೊಪ್ಪು ಕಟಾವು ಯಂತ್ರವನ್ನು ಇನ್ನೂ ವಿಜ್ಞಾನಿಗಳು ಕಂಡು ಹಿಡಿದಿಲ್ಲ. ರಸಗೊಬ್ಬರಗಳ ಬೆಲೆ ಮೂರ್ನಾಕು ಪಟ್ಟು ಹೆಚ್ಚಾಗಿವೆ. ಈಗಿನ ಖರ್ಚು ವೆಚ್ಚಗಳಿಗೆ ಹೋಲಿಸಿದಲ್ಲಿ ಒಂದು ಕೆ.ಜಿ. ಮಿಶ್ರತಳಿ ರೇಷ್ಮೆ ಗೂಡಿಗೆ ₹1000 ನೀಡಬೇಕು ಎನ್ನುತ್ತಾರೆ ರೇಷ್ಮೆ ಬೆಳೆಗಾರರು. ಪರ್ಯಾಯ ಬೆಳೆ ತರುವ ಆಪತ್ತು ಹಿಪ್ಪು ನೇರಳೆ ಸೊಪ್ಪನ್ನು ತೆಗೆದು ಹೂವು ದಾಳಿಂಬೆ ಅಥವಾ ತರಕಾರಿ ಏನಾದರೂ ಬೆಳೆ ಹಾಕಿದ್ದಲ್ಲಿ ಸುತ್ತಮುತ್ತ ಅರ್ಧ ಕಿ.ಮೀ ವ್ಯಾಪ್ತಿಯಲ್ಲಿ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯಲಾಗದು. ಅವುಗಳಿಗೆ ಸಿಂಪಡಿಸುವ ಔಷಧಿಗಳು ಹಿಪ್ಪುನೇರಳೆಗೆ ಮಾರಕ. ಇಂತಹ ಸೊಪ್ಪನ್ನು ತಿಂದ ರೇಷ್ಮೆ ಹುಳುಗಳು ನಾಲ್ಕನೇ ಜ್ವರದ ನಂತರ ಹತ್ತು ಹದಿನೈದು ದಿನಗಳಾದರೂ ಗೂಡು ಕಟ್ಟದೆ ಬಿಸಾಡಬೇಕಾಗುತ್ತದೆ. ಆಗ ರೈತರ ಪರಿಶ್ರಮವೆಲ್ಲ ನೀರಿನಲ್ಲಿ ಹೋಮಮಾಡಿದಂತಾಗುವುದು.

ರೇಷ್ಮೆ ಗೂಡು
ಗೂಡು ಕಟ್ಟುತ್ತಿರುವ ರೇಷ್ಮೆ ಹುಳು

ವೈಜ್ಞಾನಿಕ ಬೆಲೆ ನಿಗದಿಪಡಿಸಿ

ಸರ್ಕಾರ ಆಯುಕ್ತರ ಮಟ್ಟದಲ್ಲಿ ರೇಷ್ಮೆ ಬೆಳೆಗಾರರ ಸಭೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು. ರೇಷ್ಮೆ ಗೂಡಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಕಡಿಮೆ ಬೆಲೆಗೆ ಮಾರಾಟವಾದಾಗ ಪ್ರೋತ್ಸಾಹ ಧನ ನೀಡಬೇಕು. ಆಗ ಮಾತ್ರ ರೇಷ್ಮೆ ಬೆಳೆಗಾರರ ಬದುಕು ಹಸನಾಗುತ್ತದೆ ಮತ್ತು ರೇಷ್ಮೆ ಬೆಳೆಯು ಹಳೆಯ ವೈಭವಕ್ಕೆ ಮರಳುತ್ತದೆ

-ಎಚ್.ಜಿ.ಗೋಪಾಲಗೌಡ, ಹಿತ್ತಲಹಳ್ಳಿ, ರೇಷ್ಮೆ ಬೆಳೆಗಾರ

ಪರ್ಯಾಯ ಬೆಳೆ ತರುವ ಆಪತ್ತು

ಹಿಪ್ಪು ನೇರಳೆ ಸೊಪ್ಪನ್ನು ತೆಗೆದು ಹೂವು, ದಾಳಿಂಬೆ ಅಥವಾ ತರಕಾರಿ ಏನಾದರೂ ಬೆಳೆ ಹಾಕಿದ್ದಲ್ಲಿ ಸುತ್ತಮುತ್ತ ಅರ್ಧ ಕಿ.ಮೀ ವ್ಯಾಪ್ತಿಯಲ್ಲಿ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯಲಾಗದು. ಅವುಗಳಿಗೆ ಸಿಂಪಡಿಸುವ ಔಷಧಿಗಳು ಹಿಪ್ಪುನೇರಳೆಗೆ ಮಾರಕ. ಇಂತಹ ಸೊಪ್ಪನ್ನು ತಿಂದ ರೇಷ್ಮೆ ಹುಳುಗಳು ನಾಲ್ಕನೇ ಜ್ವರದ ನಂತರ ಹತ್ತು ಹದಿನೈದು ದಿನಗಳಾದರೂ ಗೂಡು ಕಟ್ಟದೆ ಬಿಸಾಡಬೇಕಾಗುತ್ತದೆ. ಆಗ ರೈತರ ಪರಿಶ್ರಮವೆಲ್ಲ ನೀರಿನಲ್ಲಿ ಹೋಮಮಾಡಿದಂತಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.