ADVERTISEMENT

ಚಿಂತಾಮಣಿ: ರೇಷ್ಮೆ ಬೆಳೆದು ಬದುಕು ಕಟ್ಟಿಕೊಂಡ ರೈತ

ಎಂ.ರಾಮಕೃಷ್ಣಪ್ಪ
Published 3 ಮಾರ್ಚ್ 2024, 5:59 IST
Last Updated 3 ಮಾರ್ಚ್ 2024, 5:59 IST
ಚಿಂತಾಮಣಿ ತಾಲ್ಲೂಕಿನ ಚಿಲಕಲನೇರ್ಪು ಗ್ರಾಮದ ಆರ್.ಕೃಷ್ಣಪ್ಪ ಅವರ ರೇಷ್ಮೆ ತೋಟ
ಚಿಂತಾಮಣಿ ತಾಲ್ಲೂಕಿನ ಚಿಲಕಲನೇರ್ಪು ಗ್ರಾಮದ ಆರ್.ಕೃಷ್ಣಪ್ಪ ಅವರ ರೇಷ್ಮೆ ತೋಟ   

ಚಿಂತಾಮಣಿ: ಇಚ್ಛಾಶಕ್ತಿಯಿಂದ ಕಷ್ಟಪಟ್ಟು ದುಡಿದರೆ ಕೃಷಿ ಯಾವೂ ಕೈಬಿಡುವುದಿಲ್ಲ ಎನ್ನುವುದಕ್ಕೆ ಎನ್.ಕೃಷ್ಣಪ್ಪ ಅವರ ಕುಟುಂಬ ಸಾಕ್ಷಿಯಾಗಿದೆ. ತಾಲ್ಲೂಕಿನ ಚಿಲಕಲನೇರ್ಪು ಗ್ರಾಮದ ಆರ್.ಕೃಷ್ಣಪ್ಪ ಕೂಲಿಯಿಂದ ಕೋಟ್ಯಧಿಪತಿಯಾದ ರೇಷ್ಮೆ ಕೃಷಿಕನ ಕಥೆ.

ಇವರು ಸುಮಾರು 35 ವರ್ಷಗಳಿಂದ ರೇಷ್ಮೆ ಕೃಷಿಯನ್ನೇ ಅವಲಂಬಿಸಿದ್ದಾರೆ. ರೇಷ್ಮೆ ಬೆಳೆಯಿಂದಲೇ ಅವರ ಜೀವನಮಟ್ಟ ಸಾಕಷ್ಟು ಸುಧಾರಣೆ ಆಗಿದೆ. ಮೊದಲಿಗೆ ಅವರದು ಕಡು ಬಡತನದ ಕುಟುಂಬ. ಮೂರು ಹೊತ್ತಿನ ಊಟಕ್ಕಾಗಿ ದಿನನಿತ್ಯ ಕೂಲಿ ಮಾಡಿ ಜೀವನ ನಡೆಸುತ್ತಿದ್ದರು. ದುಡಿದ ಹಣ ಸಾಕಾಗುತ್ತಿರಲಿಲ್ಲ ಎಂದು ಕೃಷ್ಣಪ್ಪ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ.

ರೇಷ್ಮೆ ಹುಳು ಸಾಕಾಣಿಕೆ ಮಾಡುವವರ ಮನೆಗೆ ಕೂಲಿಗೆ ಹೋಗುತ್ತಿದ್ದರು. ತಾನೂ ರೇಷ್ಮೆ ಬೆಳೆಯಬೇಕು ಎಂಬ ಕನಸನ್ನು ಕಟ್ಟಿಕೊಂಡರು. ಬೇರೆಯವರ ಮನೆಯಲ್ಲಿ ಅವರ ಹುಳುಗಳ ಜತೆಗೆ ಸ್ವಲ್ಪ ಸ್ವಲ್ಪ ಹುಳು ಸಾಕಾಣಿಕೆ ಆರಂಭಸಿದರು. ಇರುವ ಸ್ವಲ್ಪ ಜಮೀನಿನಲ್ಲೇ ನಾಟಿ ರೇಷ್ಮೆ ಕಡ್ಡಿಯನ್ನು ನಾಟಿ ಮಾಡಿದರು. ಕೂಲಿಯಿಂದ ಬರುತ್ತಿದ್ದ ಹಣವನ್ನೇ ಗೊಬ್ಬರ, ಸ್ವಚ್ಛತೆ ಹಾಗೂ ಬೆಳೆಯ ಆರೈಕೆಗೆ ಬಳಸುತ್ತಿದ್ದರು. ಹೀಗೆ ಅನೇಕ ಏಳು-ಬೀಳುಗಳನ್ನು ಕಂಡು ಇಂದು ರೇಷ್ಮೆ ಅವರ ಬದುಕಿನ ಜೀವನಾಡಿಯಾಗಿದೆ.

ADVERTISEMENT

ರೇಷ್ಮೆ ಕೃಷಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. 3 ಎಕರೆ ಜಮೀನಿನಲ್ಲಿ ಉತ್ತಮ ಇಳುವರಿ ಸಿಗುವ ಹಿಪ್ಪುನೇರಳೆ ತೋಟ ಮಾಡಿದ್ದಾರೆ.


ಜಮೀನಿನಲ್ಲಿ 2 ಕೊಳವೆ ಬಾವಿ ಕೊರೆಸಿದ್ದಾರೆ. ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ತಿಪ್ಪೆ ಗೊಬ್ಬರವನ್ನೇ ಹೆಚ್ಚಾಗಿ ಬಳಸುತ್ತಾರೆ. ಪ್ರತಿವರ್ಷ 1 ಎಕರೆಗೆ 10 ಲೋಡ್ ಗೊಬ್ಬರ ಹಾಕುತ್ತಾರೆ. ಅಲ್ಪ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಸುತ್ತಾರೆ.

ಪ್ರತಿ ತಿಂಗಳು ಒಂದೊಂದು ಬ್ಯಾಚ್ ರೇಷ್ಮೆ ಹುಳ ಸಾಕಾಣಿಕೆ ಮಾಡುತ್ತಾರೆ. ಸಾಕಾಣಿಕೆಗೆ ಯೋಗ್ಯವಾದ ರೀತಿಯಲ್ಲಿ ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಿಸಿಕೊಂಡಿದ್ದಾರೆ. ವಾಸಕ್ಕೂ ಯೋಗ್ಯವಾದ ಮನೆ ಕಟ್ಟಿದ್ದಾರೆ. ಪ್ರತಿ ತಿಂಗಳು 200-250 ಮೊಟ್ಟೆ ಹುಳ ಸಾಕಿ, ಸುಮಾರು 200-250 ಕೆ.ಜಿ ರೇಷ್ಮೆ ಗೂಡನ್ನು ಉತ್ಪಾದಿಸುತ್ತಾರೆ.

ಪ್ರತಿ ಬೆಳೆಗೆ ಸುಮಾರು ₹35-40 ಸಾವಿರ ಖರ್ಚು ಬರುತ್ತದೆ. ಬೆಳೆ ಉತ್ತಮವಾಗಿ ಆದರೆ ಒಂದರಿಂದ ₹1.25 ಲಕ್ಷ ಆದಾಯ ಬರುತ್ತದೆ. ಖರ್ಚು ಕಳೆದು ₹80 ಸಾವಿರ ಲಾಭ ಸಿಗುತ್ತಿದೆ. ಇದು ಗೂಡಿನ ಬೆಲೆಯನ್ನು ಅನುಸರಿಸಿ ಏರಿಳಿತ ಉಂಟಾಗುತ್ತದೆ. ಕೆ.ಜಿ.ಗೆ ₹300ರಿಂದ ₹750ರವರೆಗೆ ಮಾರಾಟ ಮಾಡಿದ್ದಾರೆ. ಆರಂಭದ ವರ್ಷಗಳಲ್ಲಿ ರಾಮನಗರದ ಗೂಡಿನ ಮಾರುಕಟ್ಟೆಗೆ ಹೋಗುತ್ತಿದ್ದರು. ಈಗ ಶಿಡ್ಲಘಟ್ಟ ರೇಷ್ಮೆ ಗೂಡಿನ ಮಾರುಕಟ್ಟೆಗೆ ಹೋಗುತ್ತಾರೆ.

ಮಾರುಕಟ್ಟೆಯಲ್ಲಿ ಗೂಡಿನ ದರ ಏರಿಕೆಯಾದಾಗ ಬೆಳೆಗೆ ₹1.5 ಲಕ್ಷದವರೆಗೂ ಉಳಿತಾಯವಾಗುತ್ತದೆ. ಆರಂಭದಲ್ಲಿ ಜಮೀನು, ಮನೆ ಇಲ್ಲದ ಕೃಷ್ಣಪ್ಪ ಕುಟುಂಬ ಇದೀಗ ಸಾಕಷ್ಟು ಜಮೀನಿ ಖರೀದಿ ಮಾಡಿದ್ದಾರೆ. ಮೂರು ಜನ ಅಣ್ಣ-ತಮ್ಮಂದಿರು ಬೇರೆ ಬೇರೆಯಾಗಿದ್ದು, ಮೂರು ಜನರಿಗೆ ಮನೆ ಹಾಗೂ ಹುಳು ಸಾಕಾಣಿಕೆಗೆ ಆಧುನಿಕ ರೀತಿಯಲ್ಲಿ ವೈಜ್ಞಾನಿಕ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ.

ಪ್ರಶಸ್ತಿ: 2007-08ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ರೇಷ್ಮೆ ಗೂಡು ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಉತ್ತಮ ರೇಷ್ಮೆ ಬೆಳೆಗಾರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಚಿಂತಾಮಣಿ ತಾಲ್ಲೂಕಿನ ಚಿಲಕಲನೇರ್ಪು ಗ್ರಾಮದ ಆರ್.ಕೃಷ್ಣಪ್ಪ ಅವರ ರೇಷ್ಮೆ ಹುಳು ಸಾಕಾಣಿಕೆ ಮನೆ
ರೇಷ್ಮೆ ನಮಗೆ ದೇವರ ಸಮಾನ. ಅದನ್ನೇ ನಂಬಿ ಬದುಕುತ್ತಿದ್ದೇವೆ. ನಾನೂ ಕೂಲಿಗೆ ಹೋಗುತ್ತಿದ್ದೆ. ಶ್ರಮವಹಿಸಿ ದುಡಿಮೆ ಮಾಡಿದ್ದರಿಂದ ಉತ್ತಮ ಬದುಕು ಕಟ್ಟಿಕೊಂಡಿದ್ದೇವೆ
ಆರ್.ಕೃಷ್ಣಪ್ಪ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.