ADVERTISEMENT

ಸೀತಾರಾಂ ಸಭೆ: ಬಲಿಜರಲ್ಲಿ ಕುತೂಹಲ

ಸಮುದಾಯದ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಕರಪತ್ರ; ಕಾಂಗ್ರೆಸ್‌ ಮೇಲೆ ಅಸಮಾಧಾನ

ಡಿ.ಎಂ.ಕುರ್ಕೆ ಪ್ರಶಾಂತ
Published 12 ಜೂನ್ 2022, 19:30 IST
Last Updated 12 ಜೂನ್ 2022, 19:30 IST
ಎಂ.ಆರ್‌. ಸೀತಾರಾಂ
ಎಂ.ಆರ್‌. ಸೀತಾರಾಂ   

ಚಿಕ್ಕಬಳ್ಳಾಪುರ: ಮಾಜಿ ಸಚಿವ ಹಾಗೂ ಬಲಿಜ ಸಮುದಾಯದ ಪ್ರಭಾವಿ ಮುಖಂಡ ಎಂ.ಆರ್. ಸೀತಾರಾಂ ಅವರು ಕಾಂಗ್ರೆಸ್ ತೊರೆಯುವರೇ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವರೇ?

ಹೀಗೊಂದು ಚರ್ಚೆ ಬಲಿಜ ಸಮುದಾಯದ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಮತ್ತು ಸಮುದಾಯದಲ್ಲಿ ಹರಿದಾಡುತ್ತಿದೆ.

ಜೂನ್‌ 24ರಂದು ಬೆಳಿಗ್ಗೆ 10ಕ್ಕೆ ಎಂ.ಆರ್. ಸೀತಾರಾಂ ಅವರು ಬೆಂಗಳೂರಿನ ಅರಮನೆ ಮೈದಾನ ಗೇಟ್ ನಂ. 3ರ ‘ವೈಟ್ ಪೆಟಲ್ಸ್ ಗಾರ್ಡೇನಿಯಾ’ ಆವರಣದಲ್ಲಿ ಬೆಂಬಲಿಗರ ಸಭೆ ಕರೆದಿದ್ದಾರೆ. ಈ ಕಾರಣದಿಂದ ಜಿಲ್ಲೆಯಲ್ಲಿಈ ಚರ್ಚೆ ಮತ್ತು ಕುತೂಹಲ ಗರಿಗೆದರಿದೆ. ಸಭೆಗೆ ಸಂಬಂಧಿಸಿದ ಕರಪತ್ರಗಳು ಬಲಿಜ ಸಮುದಾಯದ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ತೀವ್ರವಾಗಿ ಹರಿದಾಡುತ್ತಿದೆ. ಜಿಲ್ಲೆಯ ಕಾಂಗ್ರೆಸ್‌ನ ಕೆಲವು ಮುಖಂಡರು ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಲಿಜ ಸಮುದಾಯ ಪ್ರಮುಖವಾಗಿದೆ. ಚಿಕ್ಕಬಳ್ಳಾಪುರ ಮತ್ತು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಮುದಾಯ ಪ್ರಭಾವಿಯಾಗಿದೆ. ಚಿಂತಾಮಣಿ, ಗೌರಿಬಿದನೂರು ಕ್ಷೇತ್ರಗಳಲ್ಲಿಯೂ ಸಮುದಾಯದ ಮತದಾರರು ಇದ್ದಾರೆ.

ಸೀತಾರಾಂ ಅವರ ತಂದೆ ಎಂ.ಎಸ್. ರಾಮಯ್ಯ ಅವರ ಕಾಲದಿಂದಲೂಚಿಕ್ಕಬಳ್ಳಾಪುರ ಜಿಲ್ಲೆಯ ಬಲಿಜ ಸಮುದಾಯದ ಮೇಲೆ ಈ ಕುಟುಂಬದ ಪ್ರಭಾವ ದೊಡ್ಡ ಮಟ್ಟದಲ್ಲಿದೆ. ಈ ಕಾರಣದಿಂದಲೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ 2023ರ ವಿಧಾನಸಭಾ ಚುನಾವಣೆಯಲ್ಲಿ ಸೀತಾರಾಂ ಅವರ ಪುತ್ರ ಹಾಗೂಕಾಂಗ್ರೆಸ್ ರಾಷ್ಟ್ರೀಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಸ್ಪರ್ಧಿಸುವರು ಎನ್ನುವ ಸುದ್ದಿ ಹರಿದಾಡುತ್ತಿದೆ.

ಈ ಸುದ್ದಿಗಳ ನಡುವೆಯೇ ಕಾಂಗ್ರೆಸ್ ಪಕ್ಷದ ಮೇಲೆ ಅಸಮಾಧಾನ ವ್ಯಕ್ತಪಡಿಸಿ ಸೀತಾರಾಂ ಅವರು ಬೆಂಬಲಿಗರ ಸಭೆ ಕರೆದಿದ್ದಾರೆ.ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಜಿಲ್ಲೆಯ ಬಲಿಜ ಸಮುದಾಯದ ಬಡವರು ಚಿಕಿತ್ಸೆಗೆ ಹೋದರೆ ರಿಯಾಯಿತಿ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ವಿವಾದಕ್ಕೆ ಒಳಗಾಗಿದ್ದ ಸಮುದಾಯದ ವಿದ್ಯಾರ್ಥಿ ನಿಲಯದ ರಕ್ಷಣೆಯನ್ನೂ ಈ ಕುಟುಂಬ ಮಾಡಿದೆ. ಸಮುದಾಯದ ವಿಚಾರಗಳು ಬಂದರೆ ಪಕ್ಷಾತೀತವಾಗಿ ಜಿಲ್ಲೆಯ ಬಲಿಜರು ಸೀತಾರಾಂ ಅವರ ಕುಟುಂಬದ ‍ಪರವಾಗಿ ನಿಲ್ಲುತ್ತಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್‌ನಿಂದ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಲಾಗುತ್ತದೆ ಎನ್ನುವ ಸುದ್ದಿ ಇತ್ತು. ಆಯ್ಕೆಯಾಗದ ಕಾರಣ ಅವರ ಪುತ್ರ ರಕ್ಷಾ ರಾಮಯ್ಯಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಯಿತು ಎನ್ನಲಾಗುತ್ತಿದೆ.

ಕರಪತ್ರದಲ್ಲಿ ಏನಿದೆ: 1984ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನಿಂದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ. ವಿವಿಧ ಹಂತಗಳಲ್ಲಿ ಪಕ್ಷದ ಬೆಳವಣಿಗೆಗೆ ಶ್ರಮಿಸಿದ್ದೇನೆ. 2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೆಲವರ ವಿಶ್ವಾಸ ದ್ರೋಹ, ಒಳಸಂಚಿನ ಕಾರಣದಿಂದ ಪರಾಭವಗೊಂಡಿದ್ದೇನೆ.

2022ರಲ್ಲಿ ರಾಜ್ಯ ನಾಯಕತ್ವವು ವಿಧಾನ ಪರಿಷತ್‌ಗೆ ಆಯ್ಕೆ ಮಾಡಲು ಶಿಫಾರಸು ಮಾಡಿತು. ಆದರೆ, ರಾತ್ರೋ ರಾತ್ರಿ ಪಿತೂರಿ ಮಾಡಿ ಪುನರಾಯ್ಕೆಯ ಅವಕಾಶವನ್ನು ಮತ್ತೊಮ್ಮೆ ನಿರಾಕರಿಸಲಾಯಿತು. ಪಕ್ಷಕ್ಕೆ ಮಾಡಿದ ನಿಸ್ವಾರ್ಥ ಸೇವೆಗೆ ಪ್ರತಿಯಾಗಿ ಕೆಲ ಸ್ವಾರ್ಥ ಹಾಗೂ ಪಟ್ಟಭದ್ರ ಶಕ್ತಿಗಳು ಮಾಡುತ್ತಿರುವ ಕುಟಿಲ ರಾಜಕೀಯದಿಂದ ಮನನೊಂದಿದ್ದೇನೆ. ಈ ಅಂಶಗಳನ್ನು ಚರ್ಚಿಸಲು ಬೆಂಬಲಿಗರ ಸಭೆ ಕರೆದಿದ್ದು ತಾವು ಭಾಗವಹಿಸಿ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಬೇಕು ಎಂದು ಕೋರುತ್ತೇನೆ ಎಂದು ಕರಪತ್ರದಲ್ಲಿ ಸೀತಾರಾಂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.