ADVERTISEMENT

ಶಿವಶಂಕರರೆಡ್ಡಿ ಮರಳು ಮಾಫಿಯಾ ಕಿಂಗ್: ಶಾಸಕ ಡಾ.ಕೆ.ಸುಧಾಕರ್ ವಾಗ್ದಾಳಿ

ಮಂಚೇನಹಳ್ಳಿ ಹೋಬಳಿಯಲ್ಲಿ ನಡೆದ ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಶಾಸಕರ ವಿರುದ್ಧ ಅನರ್ಹ ಶಾಸಕ ಡಾ.ಕೆ.ಸುಧಾಕರ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 13:28 IST
Last Updated 1 ಅಕ್ಟೋಬರ್ 2019, 13:28 IST
ಗೌಡಗೆರೆಯಲ್ಲಿ ನಡೆದ ಸಭೆಯಲ್ಲಿ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಮಾತನಾಡಿದರು.
ಗೌಡಗೆರೆಯಲ್ಲಿ ನಡೆದ ಸಭೆಯಲ್ಲಿ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ಉತ್ತರ ಪಿನಾಕಿನಿ ನದಿಯಲ್ಲಿರುವ ಮರಳು ಖಾಲಿ ಮಾಡಿ ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿದ ಮರಳು ಮಾಫಿಯಾ ಕಿಂಗ್ ಶಾಸಕ ಶಿವಶಂಕರರೆಡ್ಡಿ ಅವರ ಯೋಗ್ಯತೆ ಎಲ್ಲರಿಗೂ ಗೊತ್ತು. ಅವರು ಇವತ್ತು ರಾಜಕಾರಣವನ್ನು ಹಣ ಮಾಡಲು ಬಳಸಿಕೊಳ್ಳುತ್ತಿದ್ದಾರೆ ವಿನಾ ಅವರಲ್ಲಿ ಸಾಮಾಜಿಕ ಬದ್ಧತೆ, ಕಾಳಜಿಯಾಗಲಿ ಇಲ್ಲ’ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ ಆರೋಪಿಸಿದರು.

ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿಯಲ್ಲಿ ಮಂಗಳವಾರ ನಡೆದ ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಅವರು ಮಾತನಾಡಿದರು.

‘ನಾನು ರಾಜಕಾರಣಕ್ಕೆ ಬರುವ ಮೊದಲೇ ನನ್ನ ಬಳಿ ಹಣವಿತ್ತು. ಶಿವಶಂಕರ ರೆಡ್ಡಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನನ್ನ ಬಳಿ ಹಣ ಪಡೆಯಲು ಬೆಂಗಳೂರಿಗೆ ಬಂದು ನನಗಾಗಿ ಎರಡ್ಮೂರು ಗಂಟೆ ಕಾಯುತ್ತಿದ್ದರು. ಸಾಕಷ್ಟು ಬಾರಿ ಅವರಿಗೆ ಹಣ ನೀಡಿರುವೆ. ಇಲ್ಲ ಎಂದು ಅವರು ದೇವರ ಮೇಲೆ ಪ್ರಮಾಣ ಮಾಡಲಿ’ ಎಂದು ಸವಾಲು ಹಾಕಿದರು.

ADVERTISEMENT

‘ಶಿವಶಂಕರರೆಡ್ಡಿ ಅವರು ಇನ್ನೊಮ್ಮ ಶಾಸಕರಾಗುವುದಿಲ್ಲ. ಆದರೆ ನಾನು ಮೂರನೇ ಬಾರಿಗೆ ಶಾಸಕನಾಗುವುದು ತಡೆಯಲು ನಮ್ಮಪ್ಪನ ಆಣೆ ಅವರ ಕೈಯಲ್ಲಿ ಆಗುವುದಿಲ್ಲ. ನಾನು ರಾಜಕೀಯಕ್ಕೆ ಬಂದು ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ನನ್ನ ವಿರುದ್ಧ ಮಾತನಾಡಲು ಅವರಿಗೆ ಯೋಗ್ಯತೆ ಇಲ್ಲ’ ಎಂದು ಹೇಳಿದರು.

‘ಮಂಚೇನಹಳ್ಳಿ ತಾಲ್ಲೂಕು ಆಗುವ ಎಲ್ಲ ಅರ್ಹತೆ ಇದೆ. ಆದರೆ ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಅವರು ಶಿವಶಂಕರರೆಡ್ಡಿ ಅವರ ಮಾತು ಕೇಳಿ ಮಂಚೇನಹಳ್ಳಿ ತಾಲ್ಲೂಕು ಮಾಡುವ ಪ್ರಾಸ್ತಾವ ರಾಜ್ಯ ಸರ್ಕಾರಕ್ಕೆ ಕಳುಹಿಸಲಿಲ್ಲ. ನಾನು ಮಂಚೇನಹಳ್ಳಿ ತಾಲ್ಲೂಕು ಕೇಂದ್ರ ಮಾಡಲು ಶಪಥ ಮಾಡಿರುವೆ. ಶೀಘ್ರದಲ್ಲಿಯೇ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಭೂಮಿಪೂಜೆ ನೆರವೇರಲಿದೆ. ಕ್ಷೇತ್ರಕ್ಕೆ ನೀರು, ಕೈಗಾರಿಕೆ ತರುವುದು ನನ್ನ ಗುರಿ’ ಎಂದರು.

‘ನನ್ನ ಅವಧಿಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್‌ ಮೂಲೆಗುಂಪು ಮಾಡಿ ಕಾಂಗ್ರೆಸ್‌ ಗಟ್ಟಿಯಾಗಿ ಕಟ್ಟುವ ಕೆಲಸ ಮಾಡಿದ್ದೆ. ಹೀಗಾಗಿ, ಜೆಡಿಎಸ್‌ನವರಿಗೆ ಸಹಜವಾಗಿಯೇ ನನ್ನ ಮೇಲೆ ಸಿಟ್ಟಿತ್ತು. ಪರಿಣಾಮ, ಮೈತ್ರಿ ಸರ್ಕಾರದಲ್ಲಿ ನನ್ನ ಯಾವುದೇ ಕೆಲಸ ಮಾಡಲಿಲ್ಲ. ಶಿವಶಂಕರರೆಡ್ಡಿ ಅವರು ಎಲ್ಲ ವಿಷಯಗಳಲ್ಲಿ ನನ್ನನ್ನು ವಿರೋಧ ಮಾಡಿದರು. ಇವತ್ತಿಗೂ ರಾಜಕೀಯವಾಗಿ ನನ್ನನ್ನು ಮುಗಿಸುವ ಹುನ್ನಾರ ನಡೆಸಿದ್ದಾರೆ. ಅದು ಕೈಗೂಡುವುದಿಲ್ಲ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಬಾಲಕೃಷ್ಣ, ಕೋಚಿಮುಲ್ ಮಾಜಿ ನಿರ್ದೇಶಕ ಸುಬ್ಬಾರೆಡ್ಡಿ, ಮುಖಂಡರಾದ ಕಲ್ಲಿನಾಯಕನಹಳ್ಳಿ ಗೋಪಿನಾಥ್, ಸುದರ್ಶನರೆಡ್ಡಿ, ನಾರಾಯಣಸ್ವಾಮಿ, ರಿಯಾಜ಼್, ಅಪ್ಪಿಗೌಡ, ನಂಜುಂಡಪ್ಪ, ಆನಂದ್, ಹರೀಶ್, ಶಿವಕುಮಾರ್, ಈಶ್ವರ್, ವೆಂಕಟೇಶ್, ಗಂಗಾಧರ್, ಶಂಕರ್, ಅಬೀಬ್, ರಾಮಕೃಷ್ಣಪ್ಪ, ಶ್ರೀಧರ್, ಪ್ರಕಾಶ್, ಶ್ರೀನಿವಾಸಗೌಡ, ರಮೇಶ್ ರೆಡ್ಡಿ, ಕಾಂತರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.