ಚಿಕ್ಕಬಳ್ಳಾಪುರ: ಆಂಧ್ರಪ್ರದೇಶದ ಶ್ರೀಹರಿಕೋಟಾದದಿಂದ ಸೋಮವಾರ ರಾತ್ರಿ ನಭಕ್ಕೆ ಜಿಗಿದ ಪಿಎಸ್‌ಎಲ್‌ವಿ ರಾಕೆಟ್ ಹೊತ್ತೊಯ್ದ ಪೇಲೋಡ್‌ಗಳಲ್ಲಿ ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಎಸ್‌ಜೆಸಿ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ‘ಬಿಜಿಎಸ್ ಅರ್ಪಿತ್’ ಪೇಲೋಡ್ ಕೂಡ ಸೇರಿದೆ.
ಎಸ್‌ಜೆಸಿಐಟಿಯ ವಿವಿಧ ವಿಭಾಗಗಳ 18 ವಿದ್ಯಾರ್ಥಿಗಳು ಮತ್ತು ಆರು ಅಧ್ಯಾಪಕರ ತಂಡ ಪ್ರೊ.ಶ್ರೀಹರಿ ನೇತೃತ್ವದಲ್ಲಿ ಪೇಲೋಡ್ ವಿನ್ಯಾಸ ಮಾಡಿದೆ. ಅಮ್ಯೆಚೂರ್ ರೇಡಿಯೊ ಪೇಲೋಡ್ ಫಾರ್ ಇನ್ಫಾರ್ಮೇಶನ್ ಟ್ರಾನ್ಸ್‌ಮಿಷನ್ (ARPIT- Amateur Radio Payload for Information Transmission) ಸಂಕ್ಷಿಪ್ತ ರೂಪವನ್ನೇ ಪೇಲೋಡ್‌ಗೆ ನಾಮಕರಣ ಮಾಡಲಾಗಿದೆ.
ಬಾಹ್ಯಾಕಾಶದಲ್ಲಿ ಎರಡು ಉಪಗ್ರಹಗಳನ್ನು ಜೋಡಿಸುವ (ಡಾಕಿಂಗ್) ಸ್ಪೇಡೆಕ್ಸ್ ಯೋಜನೆಗಾಗಿ ಪಿಎಸ್‌ಎಲ್‌ವಿ ರಾಕೆಟ್ ಎರಡು ಉಪಗ್ರಹ ಮತ್ತು ಹಲವು ಪೇಲೋಡ್‌ಗಳನ್ನು ಪಿಎಸ್‌ಎಲ್‌ವಿ ರಾಕೆಟ್ ಹೊತ್ತೊಯ್ದಿದೆ.
ಎಫ್.ಎಂ ಸಂಕೇತ, ವಿಎಚ್‌ಎಫ್ ಬ್ಯಾಂಡ್ ಮೂಲಕ ಉಪಗ್ರಹದಿಂದ ಉತ್ತಮ ಗುಣಮಟ್ಟದ ಧ್ವನಿ, ಸಂದೇಶ, ಛಾಯಾಚಿತ್ರ, ವಿಡಿಯೊಗಳನ್ನು ಭೂಮಿಗೆ ರವಾನಿಸಲು ಅನುಕೂಲವಾಗುವಂತೆ ‘ಬಿಜಿಎಸ್ ಅರ್ಪಿತ್’ ಪೇಲೋಡ್ ವಿನ್ಯಾಸಗೊಳಿಸಲಾಗಿದೆ.
ಬೆಂಗಳೂರಿನ ಅನಂತ್ ಟೆಕ್ನಾಲಜೀಸ್ ಮತ್ತು ಹೈದರಾಬಾದ್‌ನ ಆಸ್ಟ್ರಾ ಮೈಕ್ರೊವೇವ್‌ನಲ್ಲಿ ಪರೀಕ್ಷಿಸಿದ ನಂತರ ತಿರುವನಂತಪುರದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಮತ್ತು ಶ್ರೀಹರಿಕೋಟಾ ಉಡಾವಣಾ ಕೇಂದ್ರಗಳು ಈ ಮಾದರಿಗೆ ಅಂತಿಮ ಮುದ್ರೆ ಒತ್ತಿವೆ.
‘ಎರಡು ವರ್ಷಗಳಿಂದ ನಮ್ಮ ವಿದ್ಯಾಲಯದಲ್ಲಿಯೇ ‘ಬಿಜಿಎಸ್ ಅರ್ಪಿತ್’ ಪೇಲೋಡ್ ಅಭಿವೃದ್ಧಿಗೊಳಿಸಲಾಗಿದೆ. ಇದು ಸಂವಹನ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಲಿದೆ’ ಎಂದು ಎಸ್‌ಜೆಸಿಐಟಿ ರಿಜಿಸ್ಟ್ರಾರ್ ಸುರೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.