ADVERTISEMENT

ಚಿಂತಾಮಣಿ | ಮಣ್ಣು ಆರೋಗ್ಯ ಕಾರ್ಡ್ ಅಭಿಯಾನ: ಮಣ್ಣು ಪರೀಕ್ಷೆಗೆ ರೈತರ ನಿರಾಸಕ್ತಿ

ಎಂ.ರಾಮಕೃಷ್ಣಪ್ಪ
Published 18 ಡಿಸೆಂಬರ್ 2023, 6:30 IST
Last Updated 18 ಡಿಸೆಂಬರ್ 2023, 6:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಿಂತಾಮಣಿ: ಮಣ್ಣಿನ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಡಿಸೆಂಬರ್ 5ರಂದು ವಿಶ್ವ ಮಣ್ಣು ದಿನವನ್ನಾಗಿ ಆಚರಿಸಲಾಗುತ್ತದೆ. ಅಧಿಕ ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಮಣ್ಣು ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಗೊಬ್ಬರ ಬಳಸಿ ಮಣ್ಣಿನ ಆರೋಗ್ಯ ಕಾಪಾಡುವುದು ಮತ್ತು ರೈತರ ಅನಾವಶ್ಯಕ ಖರ್ಚನ್ನು ಕಡಿಮೆಗೊಳಿಸುವುದು ಮಣ್ಣು ಪರೀಕ್ಷೆಯ ಉದ್ದೇಶವಾಗಿದೆ.

ಭೂಮಿಯ ಫಲವತ್ತತೆಗೆ ಅನುಗುಣವಾಗಿ ಬೆಳೆ ಬೆಳೆದರೆ ಹೆಚ್ಚಿನ ಇಳುವರಿ ಪಡೆಯಬಹುದು. ರೈತರು ಮಣ್ಣು ಪರೀಕ್ಷೆ ಮಾಡಿಸಿಯೇ ಬೆಳೆ ಬೆಳೆಯಬೇಕು ಎಂದು ವಿಜ್ಞಾನಿಗಳು ಜಾಗೃತಿ ಮೂಡಿಸುತ್ತಿದ್ದರೂ ರೈತರು ಮಣ್ಣು ಪರೀಕ್ಷೆ ಕುರಿತು ಆಸಕ್ತಿ ವಹಿಸುತ್ತಿಲ್ಲ ಎನ್ನುತ್ತಾರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು.

ADVERTISEMENT

ತಾಲ್ಲೂಕಿನ ಕಾಗತಿಯಲ್ಲಿರುವ ಕೃಷಿ ತರಬೇತಿ ಕೇಂದ್ರದಲ್ಲಿ ಮಣ್ಣು ಪರೀಕ್ಷೆಯ ಪ್ರಯೋಗಾಲಯವಿದೆ. ಕೃಷಿ ಇಲಾಖೆಯಲ್ಲಿ ಇಡೀ ಜಿಲ್ಲೆಗೆ ಇದೊಂದೇ ಮಣ್ಣು ಪರೀಕ್ಷಾ ಕೇಂದ್ರವಾಗಿದೆ. ಕುರುಬೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಒಂದು ಮಣ್ಣು ಪರೀಕ್ಷಾ ಕೇಂದ್ರವಿದೆ.

ಕೃಷಿ ಇಲಾಖೆಯ ಅಧಿಕಾರಿಗಳೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಜಮೀನುಗಳಿಗೆ ತೆರಳಿ ಪ್ರಾತ್ಯಕ್ಷಿಕೆಯ ಮೂಲಕ ಮಣ್ಣು ಸಂಗ್ರಹಣೆ ಮಾಡಿ ಪರೀಕ್ಷಿಸಿ ವರದಿ ನೀಡುತ್ತಿದ್ದಾರೆ. ಇಲ್ಲಿ ಉಚಿತವಾಗಿ ಮಣ್ಣು ಪರೀಕ್ಷೆ ನಡೆಸಲಾಗುತ್ತದೆ. ಪ್ರತಿನಿತ್ಯ ಸುಮಾರು 50 ಸ್ಯಾಂಪಲ್‌ಗಳ ಪರೀಕ್ಷೆ ನಡೆಯುತ್ತದೆ. ಸಂಪೂರ್ಣ ವರದಿಯನ್ನು ರೈತರಿಗೆ ಕಾರ್ಡ್ ಮೂಲಕ ವಿತರಿಸಲಾಗುತ್ತದೆ. ವರ್ಷಕ್ಕೆ ಸುಮಾರು 6-9 ಸಾವಿರ ಮಣ್ಣಿನ ಮಾದರಿ ಪರೀಕ್ಷಿಸುವ ಗುರಿಯನ್ನು ಹೊಂದಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ್ ತಿಳಿಸಿದರು.

ತಾಲ್ಲೂಕಿನ ಕುರುಬೂರಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರು ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬಹುದು. ಆದರೆ ಇಲ್ಲಿ ಮಣ್ಣು ಪರೀಕ್ಷೆಗೆ ₹200 ಹಾಗೂ ನೀರಿನ ಪರೀಕ್ಷೆಗೆ ₹200 ಒಟ್ಟು ₹400 ಶುಲ್ಕ ವಿಧಿಸಲಾಗುತ್ತದೆ. ಇಲ್ಲಿ ಒಂದೆರಡು ದಿನಗಳಲ್ಲಿ ಪರೀಕ್ಷಾ ವರದಿಯ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ.

ಮಣ್ಣು ಪರೀಕ್ಷೆಯ ಉಪಯೋಗ: ಮಣ್ಣಿನಲ್ಲಿರುವ ರಸಸಾರ ಹಾಗೂ ಲವಣಾಂಶ ಪರಿಮಾಣವನ್ನು ತಿಳಿದು, ಅವುಗಳ ಸುಧಾರಣೆಗೆ ಬೇಕಾಗುವ ಸುಣ್ಣ ಅಥವಾ ಜಿಪ್ಸಂ ಪ್ರಮಾಣವನ್ನು ನಿರ್ಧರಿಸಬಹುದು. ಬೆಳೆಗಳಿಗೆ ಬೇಕಾಗುವ ಅಗತ್ಯ ಪೋಷಕಾಂಶಗಳಾದ ಸಾರಜನಕ, ರಂಜಕ, ಪೊಟ್ಯಾಷ್, ಕ್ಯಾಲ್ಸಿಯಂ, ಮೆಗ್ನಿಷಿಯಂ, ಗಂಧಕ ಹಾಗೂ ಲಘು ಪೋಷಕಾಂಶ ಸತು, ಬೋರಾನ್, ಕಬ್ಬಿಣ, ತಾಮ್ರ, ಮ್ಯಾಂಗನೀಸ್ ಮತ್ತು ನಿಕ್ಕಲ್ ಲಭ್ಯತೆಯ ಪ್ರಮಾಣ ಹಾಗೂ ಅವುಗಳ ಕೊರತೆಯನ್ನು ವೈಜ್ಞಾನಿಕವಾಗಿ ತಿಳಿದು ರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ನಿಗದಿಪಡಿಸಬಹುದು. ಮಣ್ಣಿನ ಸಮೀಕ್ಷೆ, ಮಣ್ಣಿನ ವರ್ಗೀಕರಣ ಮತ್ತು ಮಣ್ಣಿನ ಫಲವತ್ತತೆಯ ನಕ್ಷೆ ತಯಾರಿಸಬಹುದು ಎಂದು ಮಣ್ಣು ವಿಜ್ಞಾನಿ ಕೆ.ಸಂಧ್ಯಾ ಹೇಳಿದರು.

ಸುಮಾರು 10 ವರ್ಷಗಳ ಹಿಂದೆ ಮಣ್ಣು ಆರೋಗ್ಯ ಕಾರ್ಡ್ ಅಭಿಯಾನದಲ್ಲಿ ರೈತರ ಜಮೀನುಗಳ ಮಣ್ಣು ಪರೀಕ್ಷೆ ಮಾಡಿ ಮಣ್ಣಿನ ಕಾರ್ಡ್ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಅದು ಸಮರ್ಪಕವಾಗಿ ಅನುಷ್ಠಾನವಾಗಲಿಲ್ಲ. ಆರಂಭದಲ್ಲಿ ಕೆಲವರಿಗೆ ಕಾರ್ಡ್ ದೊರೆತರೂ ನಂತರ ಯೋಜನೆ ಹಳ್ಳ ಹಿಡಿಯಿತು ಎಂದು ರೈತ ಮುಖಂಡರೂ ದೂರುತ್ತಾರೆ.

ಕನಿಷ್ಠ 3 ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಬೇಕು. ಮಣ್ಣು ಪರೀಕ್ಷೆ ಮಾಡಿಸಲು ರೈತರು ಮುಂದೆ ಬರುತ್ತಿಲ್ಲ. ತಾಲ್ಲೂಕಿನಲ್ಲಿ ಶೇ 15-20 ರಷ್ಟು ರೈತರು ಮಾತ್ರ ಮಣ್ಣು ಪರೀಕ್ಷೆ ಮಾಡಿಸುತ್ತಾರೆ. ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಮಣ್ಣು ಪರೀಕ್ಷೆ ಕಡ್ಡಾಯ ಮಾಡಲಾಗಿದೆ.

ಮಣ್ಣು ಪರೀಕ್ಷಾ ಸೌಲಭ್ಯ ಎಲ್ಲ ರೈತರಿಗೂ ದೊರೆಯುತ್ತಿಲ್ಲ. ಮಣ್ಣಿನ ಸಂರಕ್ಷಣೆಗಾಗಿ ಜಲಾನಯನ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸರ್ಕಾರ ಕೈಗೊಂಡಿರುವ ಕ್ರಮ ಉತ್ತಮವಾಗಿದೆ. ಈ ಯೋಜನೆ ಪ್ರತಿ ಗ್ರಾಮ, ಪ್ರತಿ ರೈತನಿಗೂ ತಲುಪಬೇಕು ಎಂದು ರೈತರು ಒತ್ತಾಯವಾಗಿದೆ.

ಕೃಷಿ ಇಲಾಖೆಯ ಎಲ್ಲ ಕಾರ್ಯಕ್ರಮಗಳಲ್ಲಿ ಮಣ್ಣು ಪರೀಕ್ಷೆಯ ಮಹತ್ವದ ಕುರಿತು ಅರಿವು ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಕೃಷಿ ಇಲಾಖೆಯಿಂದ ಉಚಿತವಾಗಿ ಮಣ್ಣು ಪರೀಕ್ಷೆ ಮಾಡಿಕೊಡಲಾಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ್ ಮಾಹಿತಿ ನೀಡಿದರು.

ರೈತರು ಕೆಲಸಕಾರ್ಯಗಳನ್ನು ಬದಿಗಿಟ್ಟು ಮಣ್ಣು ಪರೀಕ್ಷೆಗಾಗಿ ತಾಲ್ಲೂಕು ಕೇಂದ್ರಕ್ಕೆ ಆಗಮಿಸಿದರೆ ನಾನಾ ರೀತಿಯ ತೊಂದರೆ ಅನುಭವಿಸಬೇಕಾಗುತ್ತದೆ. ಮಣ್ಣು ಪರೀಕ್ಷಾ ಸೌಲಭ್ಯವನ್ನು ರೈತರ ಮನೆ ಬಾಗಿಲಿಗೆ ತಲುಪಿಸುವಂತಾಗಬೇಕು ಎಂದು ರೈತ ಕೆ.ಎನ್.ರಮಣಾರೆಡ್ಡಿ ಹೇಳಿದರು.

ಮಣ್ಣಿನ ಪರೀಕ್ಷೆ ಮಾಡಿಸುವುದರಿಂದ ಮಣ್ಣಿನ ಫಲವತ್ತತೆ ಗೊತ್ತಾಗುತ್ತದೆ. ಆ ಮಣ್ಣಿನಲ್ಲಿ ಯಾವ ಬೆಳೆ ಬೆಳೆಯಬೇಕು. ಯಾವ ಗೊಬ್ಬರ ಎಷ್ಟು ಪ್ರಮಾಣದಲ್ಲಿ ನೀಡಬೇಕು. ಮಣ್ಣಿನಲ್ಲಿರುವ ಪೋಷಕಾಂಶಗಳ ಮಾಹಿತಿ ದೊರೆಯುತ್ತದೆ ಎನ್ನುತ್ತಾರೆ ಮಣ್ಣು ವಿಜ್ಞಾನಿ ಕೆ.ಸಂಧ್ಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.