ಚಿಕ್ಕಬಳ್ಳಾಪುರ: ರಾಜ್ಯದ ಗಡಿಯಲ್ಲಿರುವ ಮತ್ತು ಅತಿ ಹಿಂದುಳಿದ ಕ್ಷೇತ್ರ ಎನಿಸಿರುವ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರವು ಶೈಕ್ಷಣಿಕ ಸಾಧನೆಯಲ್ಲಿಯೂ ಹಿಂದಿದೆ.
ಇಂತಹ ಕಡೆ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಹೆಚ್ಚಿಸಿದರೆ ಶಿಕ್ಷಕರಿಗೆ ಉಡುಗೊರೆ ನೀಡುವುದಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪ್ರಕಟಿಸಿದ್ದಾರೆ.
ಬಾಗೇಪಲ್ಲಿ, ಚೇಳೂರು ಮತ್ತು ಗುಡಿಬಂಡೆ ತಾಲ್ಲೂಕು ಒಳಗೊಂಡು ಈ ವಿಧಾನಸಭಾ ಕ್ಷೇತ್ರವಿದೆ. ಈ ಮೂರು ತಾಲ್ಲೂಕುಗಳ ಸರ್ಕಾರಿ ಪ್ರೌಢಶಾಲೆಗಳು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದರೆ ಶಾಲೆಯ ಶಿಕ್ಷಕರಿಗೆ ₹ 1 ಲಕ್ಷ ಉಡುಗೊರೆ ನೀಡಲು ಸುಬ್ಬಾರೆಡ್ಡಿ ಮುಂದಾಗಿದ್ದಾರೆ.
ವಸತಿಯುತ ಪ್ರೌಢಶಾಲೆಗಳನ್ನು ಹೊರತುಪಡಿಸಿ ಬಾಗೇಪಲ್ಲಿ ತಾಲ್ಲೂಕಿನಲ್ಲಿ 15, ಚೇಳೂರು ತಾಲ್ಲೂಕಿನಲ್ಲಿ 6 ಮತ್ತು ಗುಡಿಬಂಡೆ ತಾಲ್ಲೂಕಿನಲ್ಲಿ 12 ಸರ್ಕಾರಿ ಪ್ರೌಢಶಾಲೆಗಳು ಇವೆ. 2023–24ನೇ ಸಾಲಿನಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಗಳು ಶೇ 61.33 ಹಾಗೂ ಗುಡಿಬಂಡೆ ತಾಲ್ಲೂಕಿನಲ್ಲಿ ಶೇ 59.24 ರಷ್ಟು ಫಲಿತಾಂಶ ಪಡೆದಿವೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಗುಡಿಬಂಡೆ ತಾಲ್ಲೂಕಿಗೆ ‘ಸ್ಫೂರ್ತಿ’ ಮತ್ತು ಬಾಗೇಪಲ್ಲಿ ಮತ್ತು ಚೇಳೂರು ತಾಲ್ಲೂಕಿಗೆ ‘ಪ್ರೇರಣಾ’ ಹೆಸರಿನಲ್ಲಿ ತಾಲ್ಲೂಕು ಶಿಕ್ಷಣ ಇಲಾಖೆ ಮತ್ತು ಶಾಸಕರ ನೇತೃತ್ವದಲ್ಲಿ ಚಟುವಟಿಕೆಗಳು ನಡೆಯುತ್ತಿವೆ.
ಪೋಷಕರು, ಶಿಕ್ಷಕರು ಹಾಗೂ ಇಲಾಖೆಯ ಅಧಿಕಾರಿಗಳ ಜೊತೆ ಶಾಸಕರು ಸಭೆಗಳನ್ನು ನಡೆಸಿದ್ದಾರೆ. ಪ್ರತಿ ಸರ್ಕಾರಿ ಪ್ರೌಢಶಾಲೆಗಳಿಗೂ ಭೇಟಿ ನೀಡಿದ್ದು ಈ ವೇಳೆ ಲಕ್ಷ ಉಡುಗೊರೆಯ ಬಗ್ಗೆ ಶಾಸಕರು ಒತ್ತಿ ಹೇಳಿದ್ದಾರೆ.
ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಗಳ ಎಸ್‍ಎಸ್‍ಎಲ್‌ಸಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರನ್ನು ಒಳಗೊಂಡು ಈ ‘ಪ್ರೇರಣಾ’ ಮತ್ತು ‘ಸ್ಫೂರ್ತಿ’ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ.
ಈ ಕಾರ್ಯಕ್ರಮಗಳ ಮೂಲಕ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಸಹ ಗುರುತಿಸಲಾಗಿದೆ. ಈ ವಿದ್ಯಾರ್ಥಿಗಳನ್ನು ಪ್ರಮುಖವಾಗಿ ದೃಷ್ಟಿಯಲ್ಲಿ ಇಟ್ಟುಕೊಂಡು ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ. ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಅನುಕೂಲವಾಗಲಿ ಎಂದು ಕೈಪಿಡಿಗಳನ್ನು ಸಹ ರೂಪಿಸಲಾಗಿದೆ.
ಪ್ರತಿ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಅಲ್ಲಿನ ಕಲಿಕೆಯ ಗುಣಮಟ್ಟವನ್ನು ಸಹ ಶಾಸಕರು ಪರಿಶೀಲಿಸುತ್ತಿದ್ದಾರೆ.
‘ಗರಿಷ್ಠ ಅಂಕ ಪಡೆಯುವ ವಿದ್ಯಾರ್ಥಿಗೂ ಬಹುಮಾನ’
‘ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳವನ್ನು ಶಿಕ್ಷಕರು ಸವಾಲಾಗಿ ಸ್ವೀಕರಿಸಬೇಕು. ಅವರಿಗೆ ಸ್ಫೂರ್ತಿ ಬರಲಿ ಎನ್ನುವ ಕಾರಣಕ್ಕೆ ₹ 1 ಲಕ್ಷ ಉಡುಗೊರೆ ನೀಡಲಾಗುವುದು’ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ತಾಲ್ಲೂಕಿನಲ್ಲಿ ಗರಿಷ್ಠ ಅಂಕ ಪಡೆಯುವ ವಿದ್ಯಾರ್ಥಿಗೂ ₹ 1 ಲಕ್ಷ ಬಹುಮಾನ ನೀಡಲಾಗುವುದು. ಈಗಾಗಲೇ ಮೂರು ತಾಲ್ಲೂಕಿನ ಎಲ್ಲ ಪ್ರೌಢಶಾಲೆಗೆ ಭೇಟಿ ನೀಡಿದ್ದೇನೆ. ಸರ್ಕಾರಿ ಪ್ರೌಢಶಾಲೆಗಳಲ್ಲಿ 2600 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಇದ್ದಾರೆ. ಈ ಪೈಕಿ 800 ಮಕ್ಕಳು ಅನುತ್ತೀರ್ಣರಾಗುವ ಸಾಧ್ಯತೆ ಇದೆ ಎಂದು ನಾವು ಮಾಡಿರುವ ಪರೀಕ್ಷೆಯಲ್ಲಿ ಕಂಡು ಬಂದಿದೆ. ಆ ಮಕ್ಕಳನ್ನು ಕೇಂದ್ರೀಕರಿಸಿ ವಿಶೇಷ ತರಗತಿ ನಡೆಸಲಾಗುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.