
ಚಿಕ್ಕಬಳ್ಳಾಪುರ: ಜಿಲ್ಲೆಯ 10ನೇ ತರಗತಿ ವಿದ್ಯಾರ್ಥಿಗಳ ಪೈಕಿ ಕಲಿಕೆಯಲ್ಲಿ ಹಿಂದುಳಿದವರ ಪಟ್ಟಿ ಮಾಡಿ ಅವರಿಗೆ ವಿಶೇಷ ಕೌಶಲಗಳ ಮೂಲಕ ಹಾಗೂ ವಿಶೇಷ ತರಗತಿಗಳನ್ನು ತೆಗೆದುಕೊಂಡು ಫಲಿತಾಂಶ ವೃದ್ಧಿಸಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅಧಿಕಾರಿಗಳಿಗೆ ಹಾಗೂ ಶಿಕ್ಷಕರಿಗೆ ಸಲಹೆ ನೀಡಿದರು.
ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಎಸ್.ಎಸ್.ಎಲ್.ಸಿ ಫಲಿತಾಂಶ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಮಾ.18 ರಿಂದ ರಾಜ್ಯ ಪಠ್ಯಕ್ರಮದ ಎಸ್.ಎಸ್.ಎಲ್.ಸಿಯ ಅಂತಿಮ ಪರೀಕ್ಷೆಯು ನಡೆಯಲಿದೆ. ಜಿಲ್ಲೆಯ 14,449 ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆ ಎದುರಿಸುತ್ತಿದ್ದಾರೆ. ಈ ವರೆಗೆ ಎಲ್ಲ ಶಾಲೆಗಳಲ್ಲಿ 10ನೇ ತರಗತಿಯ ಪಠ್ಯಗಳ ಬೋಧನೆ ಪೂರ್ಣಗೊಳಿಸಿ ಪುನರಾವರ್ತನೆಯ ತರಗತಿಗಳು ನಡೆಯುತ್ತಿವೆ ಎಂದರು.
ಈ ವರ್ಷದಲ್ಲಿ 10ನೇ ತರಗತಿ ಸಂಬಂಧಿಸಿದಂತೆ ನಡೆದ ಪರೀಕ್ಷೆಗಳ ಆಧಾರದ ಮೇಲೆ ಜಿಲ್ಲೆಯ ಸರ್ಕಾರಿ ಶಾಲೆಗಳ ಫಲಿತಾಂಶ ಶೇ 56, ಅನುದಾನಿತ ಶಾಲೆಗಳಲ್ಲಿ ಶೇ 59, ವಸತಿ ಶಾಲೆಗಳಲ್ಲಿ ಶೇ 84 ರಷ್ಟು ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಶೇ 86 ರಷ್ಟು ಫಲಿತಾಂಶವಿದೆ. ಇದೇ ರೀತಿಯ ಫಲಿತಾಂಶವು ಅಂತಿಮ ಪರೀಕ್ಷೆಯಲ್ಲಿ ಹೊರಹೊಮ್ಮಿದರೆ ಜಿಲ್ಲೆಯು ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಕಳಪೆ ಸಾಧನೆ ಮಾಡಲಿದೆ ಎಂದರು.
ಆದ್ದರಿಂದ ಜಿಲ್ಲೆಯ 111 ಸರ್ಕಾರಿ ಶಾಲೆಗಳ ಪೈಕಿ 56 ಶಾಲೆಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ದತ್ತು ನೀಡಿ ಎಸ್.ಎಸ್.ಎಲ್.ಸಿ ಫಲಿತಾಂಶ ವೃದ್ಧಿಗೆ ಯುಕ್ತ ಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಲಾಗಿದೆ. ತೊಂಡೆಬಾವಿಯ ಎಸಿಸಿ ಸಿಮೆಂಟ್ ಕಂಪನಿ ಸಹಯೋಗದಲ್ಲಿ ಮೌಲ್ಯಮಾಪನ ಆಧಾರಿತ ಪಠ್ಯ (ಎಲ್.ಬಿ.ಎ)ದ ಕಿರು ಪುಸ್ತಕಗಳನ್ನು ಮುದ್ರಣ ಮಾಡಿಸಿ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದರು.
ಈ ಪುಸ್ತಕಗಳಲ್ಲಿನ ಮಾಹಿತಿಯು ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗಲು ಹಾಗೂ ಪಠ್ಯವು ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಪುಸ್ತಕಗಳನ್ನು ತಜ್ಞರ ಸಲಹೆಯಂತೆ ರಚಿಸಲಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿವೆ ಎಂದು ತಿಳಿಸಿದರು.
ಯಾವುದೇ ವಿದ್ಯಾರ್ಥಿ ಮೂಲತಃ ದಡ್ಡನಾಗಿರುವುದಿಲ್ಲ ಅಥವಾ ಕಲಿಯಲು ಸಾಧ್ಯವೆ ಇಲ್ಲ ಎನ್ನುವ ವಿದ್ಯಾರ್ಥಿಗಳು ಇರುವುದಿಲ್ಲ. ಅವರ ಸುತ್ತಮುತ್ತಲಿನ ಪರಿಸರ, ಕೌಟುಂಬಿಕ ಪರಿಸ್ಥಿತಿಗಳಿಂದ ವಿದ್ಯಾರ್ಥಿಗಳ ಗಮನ ಬೇರೆ ಕಡೆ ಇರುತ್ತದೆ. ಆದ್ದರಿಂದ ಮೊದಲಿಗೆ ವಿದ್ಯಾರ್ಥಿಯು ಶಾಲೆಗೆ ಕಡ್ಡಾಯವಾಗಿ ಹಾಜರಾಗುವ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು. ಅವರ ಗಮನವನ್ನು ಪೂರ್ಣವಾಗಿ ಅಭ್ಯಾಸದ ಕಡೆಗೆ ತೊಡಗಿಸಲು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯ ಫಲಿತಾಂಶದ ಗುಣಮಟ್ಟವನ್ನು ಈ ಬಾರಿ ವೃದ್ಧಿಸಲು ಎಲ್ಲ ಇಲಾಖೆಗಳು ಶಿಕ್ಷಣ ಇಲಾಖೆಯೊಂದಿಗೆ ಕೈ ಜೋಡಿಸಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ತೊಂಡೆಬಾವಿಯ ಎಸಿಸಿ ಸಿಮೆಂಟ್ ಕಂಪನಿಯ ಸಹಯೋಗದಲ್ಲಿ ಮುದ್ರಿಸಿರುವ 10ನೇ ತರಗತಿಯ ರಾಜ್ಯ ಪಠ್ಯಕ್ರಮದ ಮೌಲ್ಯಮಾಪನ ಆಧಾರಿತ ಪಠ್ಯ (ಎಲ್.ಬಿ.ಎ)ದ ಕಿರು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.
ಎಸಿಸಿ ಸಿಮೆಂಟ್ ಕಂಪನಿಯ ಘಟಕ ವ್ಯವಸ್ಥಾಪಕ ಪ್ರಶಾಂತ್ ದೇಶ್ ಮುಖ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅತಿಕ್ ಪಾಷ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಿ.ರಮೇಶ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
‘ವಾರಕ್ಕೆ ಒಮ್ಮೆ ಭೇಟಿ ನೀಡಿ’
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್ ಮಾತನಾಡಿ ಶಾಲೆಗಳನ್ನು ದತ್ತು ಪಡೆದಿರುವ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಶಾಲೆಗಳಿಗೆ ಕನಿಷ್ಠ ವಾರಕ್ಕೊಮ್ಮೆ ಭೇಟಿ ನೀಡಬೇಕು ಎಂದರು. ಅಲ್ಲಿನ ಕಲಿಕೆಯ ವಾತಾವರಣವನ್ನು ಹಾಗೂ ಶಿಕ್ಷಕರ ಬೋಧನಾ ಕ್ರಮವನ್ನು ನಿರಂತರವಾಗಿ ಪರಿಶೀಲಿಸಬೇಕು. ಅನುತ್ತೀರ್ಣರಾದ ಮಕ್ಕಳ ಕಡೆ ಹೆಚ್ಚು ಗಮನ ನೀಡಿ ಬರೆದು ಅಭ್ಯಾಸ ಮಾಡಿಸುವಂತಹ ಬೋಧನಾ ಕ್ರಮಕ್ಕೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಶಿಕ್ಷಕರು ಒತ್ತು ನೀಡಿ ಎಸ್.ಎಸ್.ಎಲ್.ಸಿ. ಫಲಿತಾಂಶ ಉತ್ತಮಗೊಳಿಸಲು ಕೆಲಸ ಮಾಡಬೇಕು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.