ADVERTISEMENT

ಚಿಕ್ಕಬಳ್ಳಾಪುರ | ಶಾಲೆಗೆ ಕರೆತರಲು ವಿದ್ಯಾರ್ಥಿ ವೇತನ: ಸದ್ಗುರು ಮಧುಸೂದನ ಸಾಯಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 5:49 IST
Last Updated 15 ಸೆಪ್ಟೆಂಬರ್ 2025, 5:49 IST
ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ‘ಐ ಫೈವ್ ಯೂತ್‌ ಫೌಂಡೇಶನ್’ ಸಹ ಸಂಸ್ಥಾಪಕ ಆರ್.ಸುಂದರ್ ಮತ್ತು ಉಷಾ ಸುಂದರ್ ಅವರಿಗೆ ಸದ್ಗುರು ಮಧುಸೂದನ ಸಾಯಿ ಅವರು ‘ಸಿಎಸ್ಆರ್ ಸರ್ಕಲ್ ಆಫ್ ಹಾನರ್’ ಪುರಸ್ಕಾರ ನೀಡಿದರು. 
ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ‘ಐ ಫೈವ್ ಯೂತ್‌ ಫೌಂಡೇಶನ್’ ಸಹ ಸಂಸ್ಥಾಪಕ ಆರ್.ಸುಂದರ್ ಮತ್ತು ಉಷಾ ಸುಂದರ್ ಅವರಿಗೆ ಸದ್ಗುರು ಮಧುಸೂದನ ಸಾಯಿ ಅವರು ‘ಸಿಎಸ್ಆರ್ ಸರ್ಕಲ್ ಆಫ್ ಹಾನರ್’ ಪುರಸ್ಕಾರ ನೀಡಿದರು.    

ಚಿಕ್ಕಬಳ್ಳಾಪುರ: ಕೋವಿಡ್ ಬಳಿಕ ಹಲವು ಮಕ್ಕಳು ಶಾಲೆಗಳಿಗೆ ಹೋಗುತ್ತಿರಲಿಲ್ಲ. ಹೊಲ, ಗದ್ದೆ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡಲು ಒಗ್ಗಿಕೊಂಡಿದ್ದರು. ಮಕ್ಕಳನ್ನು ಮರಳಿ ಶಾಲೆಗೆ ವಾಪಸ್ ಕರೆತರಲು ವಿದ್ಯಾರ್ಥಿ ವೇತನ ಕಾರ್ಯಕ್ರಮ ಜಾರಿಗೆ ತರಲಾಯಿತು. ಇದು ತನ್ನ ಉದ್ದೇಶ ಈಡೇರಿಸುವಲ್ಲಿ ಯಶಸ್ವಿಯಾಗಿದೆ ಎಂದು ಸದ್ಗುರು ಮಧುಸೂದನ ಸಾಯಿ ಹೇಳಿದರು.

ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದ 30ನೇ ದಿನವಾದ ಭಾನುವಾರದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎರಡು ವರ್ಷಗಳ ದೀರ್ಘಕಾಲದ ಕೋವಿಡ್ ಬಳಿಕ ಮಕ್ಕಳು ಶಾಲೆಗಳಿಗೆ ತೆರಳಲು ಮನಸ್ಸು ಮಾಡಿರಲಿಲ್ಲ. ಶಾಲೆಗಳಿಗೆ ಮಕ್ಕಳು ಬರುವಂತಹ ಆಕರ್ಷಕ ಕಾರ್ಯಕ್ರಮಗಳು ಆಗಿರಲಿಲ್ಲ. ಏನು ಮಾಡಿದರೂ ಶಾಲೆಗೆ ಬರಲು ಒಪ್ಪುತ್ತಿರಲಿಲ್ಲ. ಇಡೀ ದಿನ ಅವರು ಶಾಲೆಗೆ ಹೋಗದೆ ಏನು ಮಾಡುತ್ತಾರೆ ಎಂದು ಯೋಚಿಸಿದೆವು, ತಪ್ಪು ದಾರಿಗೆ ಹೋಗಿ ಸಮಯ ವ್ಯರ್ಥ ಮಾಡುತ್ತಾರೆ ಎಂದೆನಿಸಿತು. ಈ ಬಗ್ಗೆ ನಾವು ಏನು ಮಾಡಬಹುದು ಎಂದು ಯೋಚಿಸಿದೆವು. ಆದ್ದರಿಂದ ವಿದ್ಯಾರ್ಥಿ ವೇತನ ನೀಡುವ ಮೂಲಕ ಅವರು ಶಾಲೆಗಳಿಗೆ ಆಕರ್ಷಿತರಾಗುವಂತೆ ಮಾಡಿದೆವು ಎಂದರು.

ADVERTISEMENT

ಕೆಲಸಕ್ಕೆ ಹೋದರೆ ಮಕ್ಕಳು ಸ್ವಲ್ಪ ಹಣ ತರುತ್ತಾರೆ ಎಂಬ ಆಲೋಚನೆ ಪೋಷಕರದ್ದಾಗಿತ್ತು. ಹೀಗಾಗಿ ಅವರು ಕೂಡ ಮಕ್ಕಳನ್ನು ಶಾಲೆಗೆ ಕಳುಹಿಸುವ ಬಗ್ಗೆ ಹೆಚ್ಚು ಯೋಚಿಸಲಿಲ್ಲ. ನಾವು ವಿದ್ಯಾರ್ಥಿ ವೇತನ ನೀಡಿದರೆ ಆ ಹಣವು ಪೋಷಕರಿಗೆ ಅನುಕೂಲ ಆಗಬಹುದು ಎನ್ನುವ ಕಾರಣಕ್ಕೆ ಈ ಯೋಜನೆ ಜಾರಿಗೆ ತಂದೆವು. ಮಕ್ಕಳು ಕೆಲಸಕ್ಕೆ ಹೋಗುವುದನ್ನು ತಪ್ಪಿಸಲು ಇದೊಂದು ನಮ್ಮ ಸಣ್ಣ ಯೋಚನೆ ಆಗಿತ್ತು. ವಿದ್ಯಾರ್ಥಿಗಳು ಮತ್ತವರ ಪೋಷಕರ ಜಂಟಿ ಖಾತೆ ತೆರೆದು ಅವರ ಖಾತೆಗಳಿಗೆ ಹಣ ಪಾವತಿ ಮಾಡುತ್ತಿದ್ದೇವೆ. ‘ಭಾರತ್ ರಾಷ್ಟ್ರ ನಿರ್ಮಾಣ್ ವಿದ್ಯಾರ್ಥಿ ನಿಧಿ’ (ಬಿಆರ್‌ಎನ್‌ವಿಎನ್) ಮೂಲಕ ನಿಧಿ ಸಂಗ್ರಹಿಸಲಾಗುತ್ತಿದೆ ಎಂದು ವಿವರಿಸಿದರು.

ನಾರ್ತ್ ಮೆಸಡೋನಿಯಾದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಐರಿಯಾನಾ ವೆಲ್ಕೋಸ್ಕಾ ಅವರಿಗೆ ‘ಒಂದು ಜಗತ್ತು ಒಂದು ಕುಟುಂಬ ಮಾನವೀಯ’ ಪುರಸ್ಕಾರ ನೀಡಲಾಯಿತು. ನಾರ್ಥ್ ಮೆಸಡೋನಿಯಾ ಪ್ರತಿನಿಧಿಗಳಾದ ಮಾಜಾ ಆಂಡರ್ಸ್ಕಾ ಮತ್ತು ಸ್ಲಾವಿಕಾ ಬಾಬಮೊವಾ ತಮ್ಮ ಅನಿಸಿಕೆ ಹಂಚಿಕೊಂಡರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.