ADVERTISEMENT

ಶಿಡ್ಲಘಟ್ಟ | ಕ್ರಿಯಾಶೀಲತೆ ವೃದ್ಧಿಯಾಗಲು ಸಹಪಠ್ಯ ಚಟುವಟಿಕೆ ಸಹಕಾರಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 4:54 IST
Last Updated 8 ಡಿಸೆಂಬರ್ 2025, 4:54 IST
ಶಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಶಿಕ್ಷಕರ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ ಆಂಜನೇಯ ಮಾತನಾಡಿದರು
ಶಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಶಿಕ್ಷಕರ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ ಆಂಜನೇಯ ಮಾತನಾಡಿದರು   

ಶಿಡ್ಲಘಟ್ಟ: ಬೋಧನೆಯಲ್ಲಿನ ಕ್ರಿಯಾಶೀಲತೆ ಹೆಚ್ಚಿಸಿ ಸೃಜನಶೀಲತೆ ವಿಸ್ತರಿಸಲು ಹೆಚ್ಚೆಚ್ಚು ಸಹಪಠ್ಯಚಟುವಟಿಕೆಗಳಲ್ಲಿ ಶಿಕ್ಷಕರು ಪಾಲ್ಗೊಳ್ಳಬೇಕು ಎಂದು ತಾಲ್ಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ ತಿಳಿಸಿದರು.

ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ಕಲ್ಯಾಣ ನಿಧಿಯಿಂದ ಶಾಲಾ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಶಿಕ್ಷಕರ ಸಹಪಠ್ಯಚಟುವಟಿಕೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರು ವಿವಿಧ ಸಾಂಸ್ಕೃತಿಕ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಒತ್ತಡ ನಿವಾರಣೆಯಾಗಿ ಜ್ಞಾನವು ವಿಸ್ತಾರಗೊಳ್ಳುವುದು. ಹೊಸ ಕೌಶಲ ಗಳಿಕೆ, ಬೋಧನೆಯಲ್ಲಿ ಪರಿಣಾಮಕಾರಿತ್ವವನ್ನು ಗಳಿಸಿಕೊಳ್ಳಬಹುದಾಗಿದೆ. ಆ ಮೂಲಕ ವಿದ್ಯಾರ್ಥಿಗಳಿಗೆ ಅನುಕರಣೆ ಮಾಡಲು ಮಾದರಿಯಾಗಬಹುದಾಗಿದೆ. ಜೀವನ ಮತ್ತು ವೃತ್ತಿಯಲ್ಲಿನ ಉತ್ಸಾಹ ವೃದ್ಧಿಯು ಅಗತ್ಯವಿದೆ ಎಂದರು.

ADVERTISEMENT

ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಕೆ.ಎಚ್.ಪ್ರಸನ್ನಕುಮಾರ್ ಮಾತನಾಡಿ, ಇತರೆ ಶಿಕ್ಷಕರೊಂದಿಗೆ ಬೆರೆತು ಅನುಭವ ಹಂಚಿಕೊಳ್ಳಲು, ವೃತ್ತಿಜೀವನ ಮತ್ತು ವೈಯಕ್ತಿಕ ಬೆಳವಣಿಗೆಗೆ ಸಹಪಠ್ಯಚಟುವಟಿಕೆ ಸಹಕಾರಿಯಾಗಿವೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು, ಬೋಧನೆಯಲ್ಲಿ ರಚನಾತ್ಮಕವಾದ ವಿವಿಧತೆಯನ್ನು ಕಾಯ್ದುಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಶಿಕ್ಷಕರಿಗಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಭಕ್ತಿಗೀತೆಗಾಯನ, ಸಾಮಾನ್ಯ ಜ್ಞಾನ ಮತ್ತು ವಿಜ್ಞಾನ ರಸಪ್ರಶ್ನೆ, ಸ್ಥಳದಲ್ಲಿಯೇ ಚಿತ್ರಕಲೆ ಮತ್ತು ಪಾಠೋಪಕರಣಗಳ ತಯಾರಿಕೆ, ಪ್ರಬಂಧ, ಆಶುಭಾಷಣ ಸ್ಪರ್ಧೆ ನಡೆದವು. ವಿಜೇತರಿಗೆ ನಗದು ಬಹುಮಾನ ವಿತರಿಸಲಾಯಿತು.

ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಶಿಕ್ಷಣ ಸಂಯೋಜಕ ಯು.ವೈ.ಮಂಜುನಾಥ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರಸ್ವತಮ್ಮ, ಸರ್ಕಾರಿ ನೌಕರರ ಸಂಘದ ಕೆಂಪೇಗೌಡ ಮಾತನಾಡಿದರು.

ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಖಜಾಂಚಿ ಆರ್.ಹೇಮಾವತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸುಂದರಾಚಾರಿ, ಶಿಕ್ಷಣ ಸಂಯೋಜಕ ಅಂಕಿರೆಡ್ಡಿ, ವೆಂಕಟರೆಡ್ಡಿ, ಮುಖ್ಯಶಿಕ್ಷಕಿ ಸಯೀದಾ ಇಷ್ರತ್, ನಿವೃತ್ತ ಮುಖ್ಯಶಿಕ್ಷಕ ಬೈರಾರೆಡ್ಡಿ, ಬಿಆರ್‌ಪಿ ಮಂಜುನಾಥ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.