ADVERTISEMENT

ನಗರದ ತುಂಬಾ ನೀರವ ಮೌನ

ಜಿಲ್ಲೆಯಲ್ಲಿ ಕೋವಿಡ್‌ 19 ಪ್ರಕರಣಗಳು 16ಕ್ಕೆ ಏರಿಕೆ, ಚಿಕ್ಕಬಳ್ಳಾಪುರ ಸೀಲ್‌ಡೌನ್‌ ಮಾಡಿದ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2020, 13:23 IST
Last Updated 17 ಏಪ್ರಿಲ್ 2020, 13:23 IST
ನಗರ ವ್ಯಾಪ್ತಿಯಲ್ಲಿ ರಸ್ತೆ ಬಂದ್‌ ಮಾಡಿ ಕಾವಲು ಕಾಯುತ್ತಿರುವ ಪೊಲೀಸರು
ನಗರ ವ್ಯಾಪ್ತಿಯಲ್ಲಿ ರಸ್ತೆ ಬಂದ್‌ ಮಾಡಿ ಕಾವಲು ಕಾಯುತ್ತಿರುವ ಪೊಲೀಸರು   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೋವಿಡ್‌ 19 ರುದ್ರನರ್ತನ ಮುಂದುವರಿದಿದ್ದು, ಶುಕ್ರವಾರ ಮತ್ತೆ ನಗರದ ಮೂರು ಜನರಲ್ಲಿ ಕೋವಿಡ್‌ ಸೋಂಕು ಪತ್ತೆಯಾದ ಬೆನ್ನಲ್ಲೇ ಜಿಲ್ಲಾಡಳಿತ ಪರಿಸ್ಥಿತಿ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ನಗರವನ್ನು ಸಂಪೂರ್ಣ ಸೀಲ್‌ಡೌನ್‌ ಮಾಡಿದೆ.

ಜಿಲ್ಲೆಯಲ್ಲಿ ಈವರೆಗೆ ಗೌರಿಬಿದನೂರಿನ 12, ಚಿಕ್ಕಬಳ್ಳಾಪುರದ 4 ಜನರಲ್ಲಿ ಕೋವಿಡ್‌ ಪತ್ತೆಯಾಗಿದೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಇತ್ತೀಚೆಗಷ್ಟೇ (ಏ.15) ಮೃತಪಟ್ಟ ನಗರದ 17ನೇ ವಾರ್ಡ್ ವ್ಯಾಪ್ತಿಯ ಅಂಜುಮನ್ ರಸ್ತೆಯ 69 ವರ್ಷದ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರ ಪೈಕಿ ಮೂರು ಮಂದಿಯಲ್ಲಿ ಕೋವಿಡ್‌ ಇರುವುದು ಶುಕ್ರವಾರ ದೃಢಪಟ್ಟಿದೆ.

ಅಂಜುಮನ್ ರಸ್ತೆಯ ನಿವಾಸಿಯಲ್ಲಿ ಕೋವಿಡ್‌ ಪತ್ತೆಯಾಗುತ್ತಿದ್ದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಪತ್ನಿ, ಮಕ್ಕಳು, ಮನೆಗೆಲಸ ಮಹಿಳೆ ಸೇರಿದಂತೆ ಆರು ಜನರನ್ನು ಜಿಲ್ಲಾ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ಕ್ವಾರಂಟೈನ್‌ಗೆ ಒಳಪಡಿಸಿತ್ತು.

ADVERTISEMENT

ಈ ಪೈಕಿ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ 19 ವರ್ಷದ ಮಗ, ನೆರೆಮನೆಯ ಇಬ್ಬರು ವ್ಯಕ್ತಿಗಳಿಗೆ ಕೋವಿಡ್‌ ತಗುಲಿರುವುದು ಶುಕ್ರವಾರ ಪತ್ತೆಯಾಗಿದೆ. ಇದು ಮೊದಲೇ ಭಯದಲ್ಲಿ ಬದುಕುತ್ತಿದ್ದ ಜನರಲ್ಲಿ ಇನ್ನಿಲ್ಲದ ತಲ್ಲಣ ಸೃಷ್ಟಿಸಿದೆ.

ನಗರದ ಕೋವಿಡ್‌ ಪ್ರಕರಣ ವರದಿಯಾದ ಬೆನ್ನಲ್ಲೇ 10,12,13 ಮತ್ತು 17ನೇ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಸೀಲ್‌ಡೌನ್‌ ಜಾರಿಗೊಳಿಸಿದ್ದ ಜಿಲ್ಲಾಡಳಿತ ಶುಕ್ರವಾರ ಮಧ್ಯಾಹ್ನದಿಂದ ಇಡೀ ನಗರ ವ್ಯಾಪ್ತಿಗೆ ಸೀಲ್‌ಡೌನ್‌ ವಿಸ್ತರಿಸಿತು. ಪರಿಣಾಮ, ನಗರದಲ್ಲಿ ಔಷಧಿ ಮಳಿಗೆಗಳನ್ನು ಹೊರತುಪಡಿಸಿ ಉಳಿದೆಲ್ಲ ಮಳಿಗೆಗಳು ಬಾಗಿಲು ಮುಚ್ಚಿದವು.

ಗೌರಿಬಿದನೂರಿನಲ್ಲಿ 12 ಕೋವಿಡ್‌ ಪ್ರಕರಣಗಳು ವರದಿಯಾದ ನಂತರ ಜಿಲ್ಲೆಯಲ್ಲಿ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು. ಇದೀಗ ಏಕಾಏಕಿ ಜಿಲ್ಲಾ ಕೇಂದ್ರದಲ್ಲಿ ಸೋಂಕು ಹರಡುವುದು ಅರಿವಾಗುತ್ತಿದ್ದಂತೆ ಜಿಲ್ಲಾಡಳಿತ ಸೀಲ್‌ಡೌನ್‌ನಂತಹ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಇದು ಮೇ 3ರ ವರೆಗೆ ಇರುವ ಸಾಧ್ಯತೆ ಇದೆ.

ನಗರದ ಪ್ರತಿ ವಾರ್ಡ್‌ಗೆ ತಲಾ ಒಬ್ಬ ನೋಡಲ್ ಅಧಿಕಾರಿ, ಸ್ವಯಂ ಸೇವಕರನ್ನು ನಿಯೋಜಿಸಲಾಗಿದ್ದು, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಭಾಸ್ಕರ್‌ ಅವರನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

ನಾಗರಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ನೋಡಲ್‌ ಅಧಿಕಾರಿ ವಾರ್ಡ್‌ವಾರು ವಾಟ್ಸ್‌ಆ್ಯಪ್‌ ಗ್ರೂಪ್‌ ರಚನೆ ಮಾಡಿದ್ದು, ಅದರ ಮೂಲಕ ಜನರಿಗೆ ಅಗತ್ಯವಿರುವ ತರಕಾರಿ, ದಿನಸಿ, ಹಾಲು, ಔಷಧಿಯಂತಹ ಅಗತ್ಯ ವಸ್ತುಗಳನ್ನು ಸ್ವಯಂ ಸೇವಕರ ಮೂಲಕ ತಲುಪಿಸಲು ನಿರ್ಧರಿಸಲಾಗಿದೆ.

ಸದ್ಯ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಪೈಕಿ ಎಂಟು ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಪ್ರತ್ಯೇಕ ಕ್ವಾರಂಟೈನ್‌ನಲ್ಲಿದ್ದಾರೆ. ಆರು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.