ADVERTISEMENT

ಚಿಕ್ಕಬಳ್ಳಾಪುರ | ಸುಡಾ ಅಧ್ಯಕ್ಷ ಗಾದಿ: ಕಾಂಗ್ರೆಸ್‌ನಲ್ಲಿ ಪೈಪೋಟಿ

ಡಿ.ಎಂ.ಕುರ್ಕೆ ಪ್ರಶಾಂತ
Published 25 ನವೆಂಬರ್ 2023, 6:46 IST
Last Updated 25 ನವೆಂಬರ್ 2023, 6:46 IST
   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ (ಸುಡಾ) ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಪೈಪೋಟಿಯೇ ನಡೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳಾಗಿದೆ. ಆದರೆ ಇನ್ನೂ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಿಸಿಲ್ಲ. 

ಆದರೆ ಇಂದಲ್ಲಾ ನಾಳೆ ನೇಮಕವಾಗುವುದು ಖಚಿತ. ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಮೇಲೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ 10ಕ್ಕೂ ಹೆಚ್ಚು ಮುಖಂಡರು ದೃಷ್ಟಿ ನೆಟ್ಟಿದ್ದಾರೆ. 

ತಮಗೆ ಸುಡಾ ಅಧ್ಯಕ್ಷ ಸ್ಥಾನ ನೀಡುವಂತೆ ಕೆಲವು ಮುಖಂಡರು ಶಾಸಕರ ಪ್ರದೀಪ್ ಈಶ್ವರ್ ಅವರಿಂದ ಪತ್ರ ಪಡೆದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರಿಗೆ ಸಲ್ಲಿಸಿದ್ದಾರೆ. ತಮ್ಮದೇ ಸಂಪರ್ಕ ಜಾಲ, ಪ್ರಭಾವ, ಜಾತಿ–ಹೀಗೆ ನಾನಾ ವಿಚಾರಗಳನ್ನು ಮುಂದಿಟ್ಟುಕೊಂಡು ಸಚಿವರ ಮನವೊಲಿಸುವ ಕೆಲಸವನ್ನು ಈಗಲೇ ಆರಂಭಿಸಿದ್ದಾರೆ ಎನ್ನುತ್ತವೆ ಕಾಂಗ್ರೆಸ್ ಪಕ್ಷದ ಮೂಲಗಳು.

ADVERTISEMENT

ಚಿಕ್ಕಬಳ್ಳಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ‘ಲಾಯರ್’ ನಾರಾಯಣಸ್ವಾಮಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರೂ ಆದ ಸು.ಧಾ.ವೆಂಕಟೇಶ್, ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ಅಡ್ಡಗಲ್ ಶ್ರೀಧರ್, ನಗರಸಭೆ ಮಾಜಿ ಅಧ್ಯಕ್ಷ ರಾಜ್‌ದರ್ಶಿನಿ ಪ್ರಕಾಶ್, ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಕಾಂಗ್ರೆಸ್ ಮುಖಂಡರಾದ ರಘು, ಎಸ್‌.ಪಿ. ಶ್ರೀನಿವಾಸ್...ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ತಮ್ಮ ಆಪ್ತರು ಮತ್ತು ತಮಗೆ ಬೇಕಾದವರನ್ನು ಅಧ್ಯಕ್ಷ ಸ್ಥಾನಕ್ಕೆ ಕೂರಿಸಲು ಪಕ್ಷದೊಳಗೆ ‘ಗುಂಪು’ಗಳು ಸಹ ಕೆಲಸ ಮಾಡುತ್ತಿವೆ.

ಜಾತಿ ಲೆಕ್ಕಾಚಾರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶಾಸಕ ಪ್ರದೀಪ್ ಈಶ್ವರ್ ಬಲಿಜ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದ್ದರಿಂದ ಈ ಸಮುದಾಯಕ್ಕೆ ಪ್ರಾಧಿಕಾರದ ಅಧ್ಯಕ್ಷ ಹುದ್ದೆ ದೊರೆಯುವುದು ಕಷ್ಟ ಸಾಧ್ಯ. ಆದ್ದರಿಂದ ಉಳಿದ ಸಮುದಾಯಗಳ ಮುಖಂಡರು ಸಹ ಅಧ್ಯಕ್ಷ ಗಾದಿಗೆ ತೀವ್ರ ಲಾಬಿ ನಡೆಸುತ್ತಿದ್ದಾರೆ. 

ಸಚಿವ ಡಾ.ಎಂ.ಸಿ. ಸುಧಾಕರ್ ಅವರ ವಿಶ್ವಾಸಗಳಿಸಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ಜಿಲ್ಲೆಯ ಮಟ್ಟಿಗೆ ಸಚಿವರೇ ಕಾಂಗ್ರೆಸ್ ಹೈಕಮಾಂಡ್ ಎನ್ನುವಂತೆ ಇದ್ದಾರೆ. ಕೆಲವು ಆಕಾಂಕ್ಷಿಗಳು ಶಾಸಕ ಪ್ರದೀಪ್ ಈಶ್ವರ್ ಅವರಿಂದ ಅಧ್ಯಕ್ಷ ಹುದ್ದೆಗೆ ಪತ್ರವನ್ನು ಸಹ ಪಡೆದಿದ್ದಾರಂತೆ. ಆದರೆ ಶಾಸಕರು ಆಯ್ಕೆ ವಿಚಾರವಾಗಿ ಸಚಿವರತ್ತ ಕೈ ತೋರುತ್ತಿದ್ದಾರೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.

ರಬ್ಬರ್ ಸ್ಟ್ಯಾಂಪ್‌ ಅಧ್ಯಕ್ಷರೇ

ರಾಜಧಾನಿ ಬೆಂಗಳೂರಿಗೆ ಸಮೀಪವಿರುವ ಚಿಕ್ಕಬಳ್ಳಾಪುರದಲ್ಲಿ ಬಡಾವಣೆಗಳ ಅಭಿವೃದ್ಧಿಯೂ ವೇಗವಾಗಿಯೇ ನಡೆಯುತ್ತಿದೆ. ಪ್ರಾಧಿಕಾರ ರಾಜಕೀಯ ನಾಯಕರಿಗೆ ಹಣ ನೀಡುವ ಮೂಲಗಳು ಆಗಿವೆ. ಆದ್ದರಿಂದ ನಾಯಕರು, ತಮ್ಮ ಮಾತುಗಳನ್ನು ಕೇಳುವ ಮತ್ತು ತಾವು ಹೇಳಿದ್ದಕ್ಕೆ ಒಪ್ಪುವವರನ್ನೇ ಅಧ್ಯಕ್ಷ ಸ್ಥಾನಕ್ಕೆ ಕೂರಿಸುವ ಸಾಧ್ಯತೆ ಹೆಚ್ಚಿದೆ. ಈ ಹಿಂದಿನಿಂದಲೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಶಾಸಕರ ರಬ್ಬರ್ ಸ್ಟ್ಯಾಂಪ್ ಎನ್ನುವ ಮಾತು ಚಿಕ್ಕಬಳ್ಳಾಪುರ ನಾಗರಿಕ ವಲಯದಲ್ಲಿ ಇದೆ. 

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಸುಡಾ ಅಧ್ಯಕ್ಷ ಹುದ್ದೆ ಮೂರು ವರ್ಷಗಳ ಕಾಲ ಖಾಲಿ ಇತ್ತು. 2022ರ ನವೆಂಬರ್‌ನಲ್ಲಿ ಕೆ.ಕೃಷ್ಣಮೂರ್ತಿ ಅವರನ್ನು ನೇಮಕ ಮಾಡಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.