
ಗೌರಿಬಿದನೂರು: ತಾಲ್ಲೂಕಿನ ವಾಟದಹೊಸಹಳ್ಳಿ ಕೆರೆಯು ಕುಡುಕರ, ಪುಂಡ ಪೋಕರಿಗಳ ಅಡ್ಡೆಯಾಗುತ್ತಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿಯೂ ಮಾರ್ಪಡುವ ಆತಂಕ ಎದುರಾಗಿದೆ. ಕೆರೆಯ ಸುತ್ತಮುತ್ತಲಿನ ಗ್ರಾಮಸ್ಥರು ಕೆರೆಯ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ವಾಟದಹೊಸಹಳ್ಳಿ ಕೆರೆಯನ್ನು ಜಿಲ್ಲಾಡಳಿತವು ಇತ್ತೀಚೆಗೆ ಪ್ರವಾಸಿ ತಾಣವನ್ನಾಗಿ ಘೋಷಣೆ ಮಾಡಿದೆ. ಬೆಟ್ಟದ ತಪ್ಪಲಿನಲ್ಲಿರುವ ಅಹ್ಲಾದಕರ ವಾತಾವರಣ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಇದರಿಂದ ಪ್ರವಾಸಿಗರ ಸಂಖ್ಯೆಯು ದಿನೇ ದಿನೇ ಹೆಚ್ಚಾಗುತ್ತಿದೆ. ಶನಿವಾರ ಮತ್ತು ಭಾನುವಾರ ಸೇರಿದಂತೆ ರಜಾ ದಿನಗಳಂದು ಬೆಂಗಳೂರು, ಚಿಕ್ಕಬಳ್ಳಾಪುರ, ತುಮಕೂರು, ಹಿಂದೂಪುರ ಸೇರಿದಂತೆ ಸುತ್ತಮುತ್ತಲಿನ ಹಲವು ಭಾಗಗಳಿಂದ ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.
ಕೆರೆಯ ಸುತ್ತಮುತ್ತ ಗಿಡಗಳು ಮತ್ತು ಏಕಾಂತ ಪ್ರದೇಶ ಇರುವುದೇ ಕುಡುಕರು, ಪುಂಡ ಪೋಕರಿಗಳ ಅಡ್ಡೆಯಾಗಲು ಕಾರಣವಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಇಲ್ಲಿಗೆ ಬರುವ ಕುಡುಕರು, ಪುಂಡ ಪೋಕರಿಗಳು ಕೆರೆಯ ದಡದ ಮೇಲೆ ಕುಳಿತು ಸಾರ್ವಜನಿಕರು ಇರುವಂತೆಯೇ ಯಾವುದೇ ಹಿಂಜರಿಕೆ ಇಲ್ಲದೆ ಮದ್ಯ ಸೇವನೆ ಮಾಡುತ್ತಾರೆ. ಕುಡಿದು ಜೋರಾಗಿ ಗಲಾಟೆ ಮಾಡುತ್ತಾರೆ. ಖಾಲಿಯಾದ ಮದ್ಯದ ಬಾಟಲಿಗಳನ್ನು ಕೆರೆಯ ನೀರಿನಲ್ಲೇ ಬಿಸಾಡುತ್ತಿದ್ದಾರೆ.
ಕೆರೆಕಟ್ಟೆ ಮೇಲೆ ಮಾಂಸದ ಊಟ ತಯಾರಿಸಿ ಅಲ್ಲೇ ಮದ್ಯದೊಂದಿಗೆ ಸೇವನೆ ಮಾಡುತ್ತಾರೆ. ಗಿಡಗಳ ನಡುವೆ ಕತ್ತಲಿನ ಜಾಗದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು ಮತ್ತು ಹೊರಗಡೆಯಿಂದ ಬರುವ ಕೆಲವು ಪ್ರವಾಸಿಗರು ಮೋಜು ಮಸ್ತಿಗಾಗಿ ರಾತ್ರಿ ವೇಳೆ ಸಹ ಇಲ್ಲಿ ತಂಗುತ್ತಿದ್ದಾರೆ. ಇಲ್ಲಿ ಸಂಜೆ ವೇಳೆ ಜನ ಸಂಚಾರ ಕಡಿಮೆ ಇದ್ದು, ಕರಡಿ ಸೇರಿದಂತೆ ಕಾಡು ಪ್ರಾಣಿಗಳ ಸಂಚಾರವು ಇಲ್ಲಿದೆ. ಹೀಗಾಗಿ, ಮದ್ಯದ ಅಮಲಿನಲ್ಲಿ ಪುಂಡರು ಕಾಡುಪ್ರಾಣಿಗಳ ಜೊತೆ ಚೆಲ್ಲಾಟಕ್ಕೆ ಹೋಗಿ ಅನಾಹುತ ಸಂಭವಿಸುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಸ್ಥಳೀಯರು. ಸಾರ್ವಜನಿಕ ಸ್ಥಳಗಳನ್ನು ಸಂಬಂಧಪಟ್ಟ ಇಲಾಖೆಯು ಸರಿಯಾಗಿ ನಿರ್ವಹಣೆ ಮಾಡದಿದ್ದರೆ, ಆ ಸ್ಥಳಗಳು ಪುಂಡರು, ಕುಡುಕರು ಮತ್ತು ಅನೈತಿಕ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಡುತ್ತವೆ ಎಂದು ಸ್ಥಳೀಯರು ದೂರುತ್ತಾರೆ.
ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ರೂಪಿಸಬೇಕು ಎಂಬುದು ಜನರ ಒತ್ತಾಸೆಯಾಗಿದೆ.
ಇತ್ತೀಚಿಗೆ ಕೆರೆ ನೋಡಲು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ ಬೆಳಗ್ಗೆಯಿಂದ ಸಂಜೆವರೆಗೆ ಕೆರೆ ಬಳಿ ಬಂದು ಕುಡಿಯುವವರ ಸಂಖ್ಯೆ ಹೆಚ್ಚಿದೆ. ಹೆಂಗಸರು ಮಕ್ಕಳು ಓಡಾಡಲು ಮುಜುಗರಪಡುವಂತಾಗಿದೆಗಂಗಯ್ಯ ಕೃಷ್ಣರಾಜಪುರ ನಿವಾಸಿ
ಇಲ್ಲಿನ ವಾತಾವರಣ ಪ್ರವಾಸಿಗರನ್ನಷ್ಟೇ ಅಲ್ಲ ಮದ್ಯ ಪ್ರಿಯರನ್ನೂ ಸೆಳೆಯುತ್ತಿದೆ. ಬಾರ್‌ಗಳಿಗೆ ಹೋಗುವ ಬದಲು ಇಲ್ಲಿನ ಕೆರೆಕಟ್ಟೆಗೆ ಬಂದು ಇಡೀ ಕೆರೆಯ ವಾತಾವರಣ ಮಲಿನ ಮಾಡುತ್ತಿದ್ದಾರೆಅಶ್ವತಪ್ಪ ವಾಟದಹೊಸಹಳ್ಳಿ ನಿವಾಸಿ
ಕೆರೆಕಟ್ಟೆ ಮೇಲೆ ಬಳಸಿ ಎಸೆದ ನಿರುಪಯುಕ್ತ ವಸ್ತುಗಳು ಕಂಡು ಬರುತ್ತಿವೆ. ಖಾಲಿಯಾದ ಬೀರ್–ಬ್ರಾಂಡಿ ಬಾಟಲ್‌ಗಳು ಟೆಟ್ರಾಪ್ಯಾಕ್‌ಗಳು ನೀರಿನ ಬಾಟಲಿಗಳು ಮದ್ಯ ಕುಡಿಯಲು ಬಳಸಿದ ಪ್ಲಾಸ್ಟಿಕ್ ಲೋಟಗಳು ಗುಟ್ಕಾ ಪಾಕೆಟ್‌ಗಳು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳು ಊಟ ಮಾಡಿ ಬಿಸಾಡಿರುವ ಪ್ಲಾಸ್ಟಿಕ್ ತಟ್ಟೆಗಳು ಖಾಲಿಯಾದ ಸಿಗರೇಟ್ ಪಾಕೆಟ್ ಕೆರೆಕಟ್ಟೆಯ ಮೇಲೆ ಮತ್ತು ನೀರಿನಲ್ಲಿ ನೋಡುಗರ ಕಣ್ಣಿಗೆ ರಾಚುವಂತೆ ಬಿದ್ದಿವೆ. ಬಾರ್‌ಗಳಲ್ಲಿ ಸಿಗದ ಮೋಜು ಮಸ್ತಿಯನ್ನು ಇಲ್ಲಿ ಯಾರ ಭಯವೂ ಇಲ್ಲದೆ ರಾಜಾರೋಷವಾಗಿ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.