ADVERTISEMENT

ಪಾತಪಾಳ್ಯ | ವಿಬಿ ಜಿ–ರಾಮ್–ಜಿ ವಾಪಸ್‌ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 4:45 IST
Last Updated 21 ಜನವರಿ 2026, 4:45 IST
ಬಾಗೇಪಲ್ಲಿ ತಾಲ್ಲೂಕಿನ ತೋಳ್ಳಪಲ್ಲಿ ಗ್ರಾಮದ ವೃತ್ತದಲ್ಲಿ ರಾಜ್ಯ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಮನರೇಗಾ ಕೂಲಿ ಕಾರ್ಮಿಕರು ವಿಬಿ ಜಿ– ರಾಮ್–ಜಿ ಕಾಯ್ದೆ ವಾಪಸ್‌ಗೆ ಆಗ್ರಹಿಸಿ, ಪ್ರತಿಭಟನೆ ಮಾಡಿದರು
ಬಾಗೇಪಲ್ಲಿ ತಾಲ್ಲೂಕಿನ ತೋಳ್ಳಪಲ್ಲಿ ಗ್ರಾಮದ ವೃತ್ತದಲ್ಲಿ ರಾಜ್ಯ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಮನರೇಗಾ ಕೂಲಿ ಕಾರ್ಮಿಕರು ವಿಬಿ ಜಿ– ರಾಮ್–ಜಿ ಕಾಯ್ದೆ ವಾಪಸ್‌ಗೆ ಆಗ್ರಹಿಸಿ, ಪ್ರತಿಭಟನೆ ಮಾಡಿದರು   

ಪಾತಪಾಳ್ಯ (ಬಾಗೇಪಲ್ಲಿ): ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಹೆಸರಿನಲ್ಲಿ ಯೋಜನೆ ಮುಂದುವರಿಸಬೇಕು. ವಿಬಿ ಜಿ–ರಾಮ್–ಜಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ತೋಳಪಲ್ಲಿ ಗ್ರಾಮದಲ್ಲಿ ರಾಜ್ಯ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

ವಿಬಿ ಜಿ–ರಾಮ್–ಜಿ ಕಾಯ್ದೆ ಜಾರಿ ಮಾಡಿದ ಕೇಂದ್ರ ಸರ್ಕಾರದ ವಿರುದ್ಧ ಗ್ರಾಮದ 100ಕ್ಕೂ ಹೆಚ್ಚು ಗ್ರಾಮೀಣ ಕೂಲಿಕಾರ್ಮಿಕರು ಧಿಕ್ಕಾರ ಕೂಗಿದರು.

ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಸಮಿತಿ ಸದಸ್ಯ ತೊಳ್ಳಪಲ್ಲಿ ಎಲ್.ವೆಂಕಟೇಶ್ ಮಾತನಾಡಿ, ‘2004ರಲ್ಲಿ ಎಡಪಕ್ಷಗಳ ಬೆಂಬಲದೊಂದಿಗೆ ಯುಪಿಎ ಸರ್ಕಾರವು ಮಹಾತ್ಮ ಗಾಂಧೀಜಿ ಹೆಸರಿನಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದಿತ್ತು. ಕೂಲಿ ಕಾರ್ಮಿಕರಿಗೆ 100 ದಿನಗಳ ಕಡ್ಡಾಯ ಕೂಲಿ ಕೆಲಸ ಮತ್ತು ಹಣ ನೀಡಲಾಗುತ್ತಿತ್ತು. ಆದರೆ, ಈಗಿನ ಎನ್‌ಡಿಎ ಮೈತ್ರಿಕೂಟ ಸರ್ಕಾರವು ಮನರೇಗಾ ಯೋಜನೆ ಹೆಸರನ್ನು ವಿಬಿ ಜಿ–ರಾಮ್–ಜಿ ಆಗಿ ಮರುನಾಮಕರಣ ಮಾಡಿದೆ. ಅಷ್ಟೇ ಅಲ್ಲದೆ, ಕಾಯ್ದೆಯಲ್ಲಿ ಮಾಡಿರುವ ತಿದ್ದುಪಡಿಗಳು ಕೂಲಿ ಕಾರ್ಮಿಕರಿಗೆ ಮರಣಶಾಸನವಾಗಿದೆ’ ಎಂದರು. 

ADVERTISEMENT

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ಕೇಂದ್ರ ಸರ್ಕಾರ ಕಳೆದ ವರ್ಷದ ಡಿ.15ರಂದು ಮನರೇಗಾ ಕಾಯ್ದೆ ಸ್ಥಾನದಲ್ಲಿ ಮತ್ತೊಂದು ಕಾಯ್ದೆ ಪ್ರತಿಪಾದಿಸಿದೆ. ಡಿ. 17ರ ರಾತ್ರಿ ಚರ್ಚೆ ನಡೆದಿದೆ ಎಂದು 18ರಂದು ಮೇಜು ತಟ್ಟುವ ಮೂಲಕ ಅನುಮೋದನೆಗೆ ಪಡೆಯಲಾಗಿದೆ. ನೂತನ ಮಸೂದೆಗೆ ಯಾವುದೇ ತಿದ್ದುಪಡಿ ಸೂಚಿಸಲು ಅನುಮತಿ ನೀಡಲಿಲ್ಲ. ಇದು ಸಂಸದೀಯ ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ನೂತನ ಕಾಯ್ದೆ ಪ್ರಕಾರ ರಾಜ್ಯಗಳಿಗೆ ಎಷ್ಟೆಷ್ಟು ನಿಧಿ ನೀಡಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರ ನಿರ್ಣಯಿಸುತ್ತದೆ. ಈ ಹಿಂದೆ ಮನರೇಗಾ ಯೋಜನೆಗೆ ತಗುಲುವ ಕಾರ್ಮಿಕರ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಆದರೆ, ನೂತನ ಕಾಯ್ದೆ ಪ್ರಕಾರ ಜಿ–ರಾಮ್–ಜಿ ಯೋಜನೆಗೆ ಕೇಂದ್ರ ಸರ್ಕಾರವು ಶೇ 60ರಷ್ಟು ಅನುದಾನವಷ್ಟೇ ಬಿಡುಗಡೆ ಮಾಡಲಿದ್ದು, ಉಳಿದ ಶೇ 40ರಷ್ಟು ಅನುದಾನವನ್ನು ರಾಜ್ಯ ಸರ್ಕಾರಗಳೇ ಭರಿಸಿಕೊಳ್ಳಬೇಕು. ಈಗಾಗಲೇ ಹಣಕಾಸು ಕೊರತೆಯಿಂದ ಸಂಕಷ್ಟದಲ್ಲಿರುವ ರಾಜ್ಯಗಳ ಮೇಲೆ ಇದು ಮತ್ತಷ್ಟು ಹೊರೆಯಾಗಲಿದೆ ಎಂದು ಹೇಳಿದರು. 

ಪ್ರತಿಭಟನೆಯಲ್ಲಿ ಕೂಲಿಕಾರ್ಮಿಕರಾದ ಚಿನ್ನವೆಂಕಟರವಣಪ್ಪ, ಹುಸೇನ್‍ಸಾಬ್, ಎಲ್.ವೆಂಕಟಪ್ಪ, ವೆಂಕಟರಾಮಪ್ಪ, ಶ್ರೀನಿವಾಸ್, ಅರ್ಜುನಾ, ಫಕ್ರುದ್ದೀನ್ ಸಾಬ್, ವರಲಕ್ಷ್ಮಿ, ಲಲಿತಮ್ಮ, ಲಕ್ಷ್ಮಿದೇವಮ್ಮ, ಶಿವಮ್ಮ, ಅಶ್ವಥ್ಥಮ್ಮ, ನಾಗಮ್ಮ ಇದ್ದರು.

‘ಕೇಂದ್ರ ಸರ್ಕಾರ ಹುಸಿ ಭರವಸೆ’ ಮನರೇಗಾ ಯೋಜನೆಗೆ ತಿದ್ದುಪಡಿ ತಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು  150 ದಿನ ಕೆಲಸ ಮತ್ತು ಅದಕ್ಕೆ ಕೂಲಿ ನೀಡಲಾಗುವುದು ಎಂದು ಸುಳ್ಳು ಭರವಸೆ ನೀಡುತ್ತಿದೆ ಎಂದು ರಾಜ್ಯ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಬಿಳ್ಳೂರು ನಾಗರಾಜ್ ಆರೋಪಿಸಿದರು.  ಕೃಷಿ ಕಾರ್ಮಿಕರ ಕಲ್ಯಾಣ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ಆಗದ ಬಿಜೆಪಿ ಸರ್ಕಾರಕ್ಕೆ ದೇಶದ ಶ್ರೀಮಂತರು ಕಾರ್ಪೊರೇಟ್ ಕಂಪನಿಗಳ ಕೋಟ್ಯಂತರ ರೂಪಾಯಿ ಸಾಲಮನ್ನಾ ಮಾಡಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.  ದೇಶದಲ್ಲಿ ಕೂಲಿಕಾರ್ಮಿಕರ ಆಧಾರಿತ ಕಾನೂನುಗಳನ್ನು ತಿದ್ದುಪಡಿ ಮಾಡಿ ಜನಸಾಮಾನ್ಯರ ಹಕ್ಕುಗಳನ್ನು ಕಸಿಯುತ್ತಿರುವುದು ಖಂಡನೀಯ. ಜನಾಭಿಪ್ರಾಯಗಳು ಕೂಲಿಕಾರ್ಮಿಕರ ಸಂಘಟನೆಗಳ ಅಭಿಪ್ರಾಯಗಳನ್ನು ಪಡೆಯದೆ ಲೋಕಸಭೆಯಲ್ಲಿ ಏಪಕ್ಷೀಯವಾಗಿ ಮೇಜು ತಟ್ಟುವ ಮೂಲಕ ವಿಬಿ ಜಿ–ರಾಮ್–ಜಿ ಕಾಯ್ದೆ ಜಾರಿ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.  ‘ವಿಬಿ ಜಿ–ರಾಮ್–ಜಿ ಕರಾಳ ಕಾಯ್ದೆ ವಿರುದ್ಧ ಕೂಲಿಕಾರ್ಮಿಕರನ್ನು ಸಂಘಟಿಸಿ ಬೀದಿಗಿಳಿದು ಹೋರಾಟ ಮಾಡಲಾಗುವುದು. ಕಾಯ್ದೆ ವಾಪಸ್ ಪಡೆಯುವವರಿಗೂ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಗುಡುಗಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.