ADVERTISEMENT

ಗೌರಿಬಿದನೂರು | ಅಡ್ಡಾದಿಡ್ಡಿ ವಾಹನ ನಿಲುಗಡೆ: ಸಂಚಾರಕ್ಕೆ ತಡೆ

ಕೆ.ಎನ್‌.ನರಸಿಂಹಮೂರ್ತಿ
Published 30 ಡಿಸೆಂಬರ್ 2024, 7:13 IST
Last Updated 30 ಡಿಸೆಂಬರ್ 2024, 7:13 IST
<div class="paragraphs"><p>ಗೌರಿಬಿದನೂರಿನ ಗಾಂಧಿ ವೃತ್ತದಲ್ಲಿ ಅಡ್ಡಾದಿಡ್ಡಿಯಾಗಿ ನಿಲುಗಡೆಯಾಗಿರುವ ವಾಹನಗಳು</p></div>

ಗೌರಿಬಿದನೂರಿನ ಗಾಂಧಿ ವೃತ್ತದಲ್ಲಿ ಅಡ್ಡಾದಿಡ್ಡಿಯಾಗಿ ನಿಲುಗಡೆಯಾಗಿರುವ ವಾಹನಗಳು

   

ಗೌರಿಬಿದನೂರು: ನಗರಗಳು ಬೆಳೆದಂತೆಲ್ಲಾ ಮೂಲಸೌಕರ್ಯಗಳನ್ನು ಒದಗಿಸುವುದು ಸ್ಥಳೀಯ ಆಡಳಿತದ ಕರ್ತವ್ಯ. ಆದರೆ ನಗರದಲ್ಲಿ ದ್ವಿಚಕ್ರವಾಹನ ಹಾಗೂ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಸಮಸ್ಯೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಸಹ ನಿರ್ಲಕ್ಷ್ಯ ವಹಿಸಿದ್ದಾರೆ.

ನಗರದ ಮಧ್ಯಭಾಗದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳು ಹಾದು ಹೋಗಿವೆ. ಇಂತಹ ಪ್ರಮುಖ ರಸ್ತೆಗಳಲ್ಲಿ ಪ್ರತಿದಿನವೂ ಸಾವಿರಾರು ವಾಹನಗಳು ಬೆಂಗಳೂರು, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಹಿಂದೂಪುರ, ಸೇರಿದಂತೆ ಹಲವು ಕಡೆಗೆ ಸಾಗುತ್ತವೆ.

ADVERTISEMENT

ಆದರೆ ಅಡ್ಡಾದಿಡ್ಡಿಯಾಗಿ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಅರ್ಧ ಭಾಗಕ್ಕೂ ಹೆಚ್ಚು ರಸ್ತೆಯಲ್ಲಿ ವಾಹನಗಳೇ ತುಂಬಿರುತ್ತವೆ. ಸರಾಗವಾಗಿ ಸಾಗದೆ ವಾಹನ ಸವಾರರು ಪ್ರಯಾಸ ಪಡಬೇಕಾದ ಪರಿಸ್ಥಿತಿ ಇದೆ. ವಾಹನಗಳ ಸಂಖ್ಯೆ ಹೆಚ್ಚಾದಂತೆಲ್ಲಾ ನಿಲುಗಡೆಯೂ ವ್ಯವಸ್ಥಿತವಾಗಿ ಇಲ್ಲದಿರುವ ಕಾರಣ ಸವಾರರು ಕಿರಿದಾದ ರಸ್ತೆಗಳಲ್ಲಿ ಸಂಚರಿಸುವಂತಹ ಸ್ಥಿತಿ ಇದೆ. ಇದರಿಂದ ವೇಗವಾಗಿ ಬರುವ ವಾಹನ ಸವಾರರು ಇತರೆ ವಾಹನಗಳನ್ನು ಹಿಂದಿಕ್ಕುವ ಭರದಲ್ಲಿ ಅಪಘಾತವಾಗುತ್ತಿವೆ. ತಪ್ಪೇ ಮಾಡದ ಸವಾರರು ಸಹ ತೊಂದರೆ ಅನುಭವಿಸುವಂತಾಗಿದೆ.

ಅತಿಹೆಚ್ಚು ಜನದಟ್ಟಣೆ ಇರುವ ಪ್ರದೇಶಗಳಾದ  ಬಜಾರ್ ರಸ್ತೆಯಲ್ಲಿ ಸರ್ಕಾರಿ ಕಾಲೇಜಿಗೆ ಸಾವಿರಾರು ವಿದ್ಯಾರ್ಥಿಗಳು ಪ್ರತಿದಿನ ಬರುತ್ತಾರೆ. ಆದರೆ, ವಾಹನ ದಟ್ಟಣೆ ಮಿತಿ ಮೀರಿರುತ್ತದೆ. ವಿದ್ಯಾರ್ಥಿಗಳು ಮುಂದೆ ಸಾಗಲು ಸಹ ಸಾಧ್ಯವಾಗದಂತಹ ಸ್ಥಿತಿ ಇರುತ್ತದೆ.

ಗಾಂಧಿ ವೃತ್ತ, ವಾಲ್ಮೀಕಿ ವೃತ್ತ, ನಾಗಯ್ಯ ರೆಡ್ಡಿ ವೃತ್ತ, ಬಸ್ ನಿಲ್ದಾಣದಂತಹ ಜನನಿಬಿಡ ಪ್ರದೇಶಗಳಲ್ಲಿ ವ್ಯವಸ್ಥಿತವಾಗಿ ವಾಹನ ಸವಾರರಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಸಂಚಾರ ನಿಯಮಗಳ ನಾಮಫಲಕಗಳನ್ನು ಅಳವಡಿಸಿದ್ದರೂ ಸ್ವಲ್ಪ ಮಟ್ಟಿಗಾದರೂ ವಾಹನ ಸಂಚಾರ ಸರಾಗವಾಗಿ ಸಾಗುತ್ತಿತ್ತು. ಇಂತಹ ಪ್ರಮುಖ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಸರಿಯಾದ ಸ್ಥಳವಿಲ್ಲ.

ನಗರದಲ್ಲಿ ಈ ಸಮಸ್ಯೆ ಹಲವು ವರ್ಷಗಳಿಂದ ಇದ್ದರೂ ಸಹ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಗುತ್ತಿಲ್ಲ. ತಾತ್ಕಾಲಿಕವಾಗಿ ವಾಹನಗಳನ್ನು ವಾರದಲ್ಲಿ ಎಡಗಡೆ  ಮೂರು ದಿನ ಬಲಗಡೆ ನಾಲ್ಕು ದಿನ ಪಾರ್ಕಿಂಗ್ ಮಾಡುವ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ಕೆಲವೇ ದಿನಗಳಲ್ಲಿ ಯಥಾ ಪ್ರಕಾರ ಅಡ್ಡಾದಿಡ್ಡಿಯಾಗಿ ನಿಲ್ಲಿಸಲು ಪ್ರಾರಂಭವಾಗಿದೆ.

ತಾಲ್ಲೂಕಿನಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಅವುಗಳಿಗೆ ಅಗತ್ಯವಿರುವ ನಿಲುಗಡೆ ಪ್ರದೇಶ ಗುರುತಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿರುವುದು ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುವರು.

ನಗರದ ಹಲವು ಅಂಗಡಿಗಳು, ಹೋಟೆಲ್‌ಗಳ ಮಾಲೀಕರು ಹಾಗೂ ಇತರೆ ವ್ಯಾಪಾರಿಗಳು ಅಂಗಡಿ ನಾಮಫಲಕಗಳನ್ನು ರಸ್ತೆಯಲ್ಲಿ ತಂದು ನಿಲ್ಲಿಸುತ್ತಾರೆ. ಎರಡು ವಾಹನಗಳು ಸಾಗಲು ನಿರ್ಮಿಸಿರುವ ರಸ್ತೆಯಲ್ಲಿ ಕೇವಲ ಒಂದು ವಾಹನ ಮಾತ್ರ ಸರಾಗವಾಗಿ ಸಾಗಬಹುದು.

 ನಗರದ ಬಹುತೇಕ ಅಂಗಡಿಗಳ ಮುಂದೆ ಇದೇ ಪರಿಸ್ಥಿತಿ ಇದೇ. ಇದರಿಂದ ವಾಹನಗಳು ಸರಾಗವಾಗಿ ಸಾಗದೆ ರಸ್ತೆಗಳಲ್ಲಿ ವಾಹನ ಸವಾರರು ಒತ್ತಡ ಮತ್ತು ಆತಂಕಕ್ಕೆ ಒಳಗಾಗಿ ಅಪಘಾತವಾದ ಉದಾಹರಣೆಗಳು ಇವೆ.

ನಗರದ ಹಲವೆಡೆ ವಾಹನ ನಿಲುಗಡೆ ನಿಷೇಧಿಸಿದೆ ಎಂದು ಅಳವಡಿಸಿರುವ ಫಲಕದ ಬಳಿಯೇ ವಾಹನಗಳನ್ನು ನಿಲುಗಡೆ ಮಾಡಿ ನಿಯಮಗಳನ್ನು ಮುರಿಯುವುದೇ ಅಭ್ಯಾಸವಾಗಿದೆ. ನಗರದ ಸೌಂದರೀಕರಣದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಆದರೂ ವಾಹನ ನಿಲುಗಡೆಗೆ ಸಮರ್ಪಕ ಯೋಜನೆ ರೂಪಿಸಲು ಸಾಧ್ಯವಾಗಿಲ್ಲ.

ಕಠಿಣ ಕ್ರಮ

ಫುಟ್‌ಪಾತ್‌ನಲ್ಲಿ ಹಾಗೂ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವ ಸವಾರರಿಗೆ ಪ್ರತಿ ಬಾರಿಯೂ ಎಚ್ಚರಿಕೆ ನೀಡಲಾಗಿದೆ. ಅರಿವು ಮೂಡಿಸಲಾಗುತ್ತಿದೆ. ಆದರೆ ಕೆಲವೇ ದಿನಗಳಲ್ಲಿ ಯಥಾ ಪ್ರಕಾರ ಮುಂದುವರೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕಠಿಣ ಕ್ರಮ ಕೈ ಗೊಳ್ಳಲಾಗುವುದು.

ಡಿ.ಎಂ ಗೀತಾ, ನಗರಸಭೆ ಪೌರಾಯುಕ್ತರು, ಗೌರಿಬಿದನೂರು

ಸಂಚಾರ ನಿಯಮ; ಸಹಕರಿಸಿ

ವಾಹನ ನಿಲುಗಡೆ ಸಮಸ್ಯೆಯ ಬಗ್ಗೆ ಅರಿವಿದೆ. ವಾಹನ ನಿಲುಗಡೆಗೆ ಸದ್ಯದಲ್ಲಿಯೇ ಪ್ರತ್ಯೇಕ ವ್ಯವಸ್ಥೆ ರೂಪಿಸಲಾಗುವುದು. ಸಾರ್ವಜನಿಕರು ಸಂಚಾರ ನಿಯಮ ಪಾಲಿಸಲು ಸಹಕರಿಸಬೇಕು.

ಚಂದ್ರಕಲಾ, ಪಿಎಸ್‌ಐ, ನಗರ ಠಾಣೆ

ವಾಹನ ನಿಲುಗಡೆಗೆ ಸ್ಥಳವಿಲ್ಲ

ಜನನಿಬಿಡ  ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ವಾಹನ ನಿಲುಗಡೆ ಪ್ರದೇಶಗಳ ಕೊರತೆಯು ರಸ್ತೆಗಳಲ್ಲಿ ವಾಹನಗಳು ನಿಲ್ಲುವಂತೆ ಮಾಡಿದೆ. ಅವ್ಯವಸ್ಥೆಯು ಸಂಚಾರ ದಟ್ಟಣೆಯನ್ನು ಹೆಚ್ಚಿಸುತ್ತಿದೆ.  

ಮಂಜುನಾಥ್, ವಕೀಲ, ಗೌರಿಬಿದೂರು

ಪರಿಶೀಲಿಸಿ ಅನುಮತಿ ನೀಡಿ

ವಾಣಿಜ್ಯ ಕಟ್ಟಡಗಳ ಮಾಲೀಕರು ವಾಹನ ನಿಲುಗಡೆಗೆ ಜಾಗ ಮೀಸಲಿಟ್ಟಿಲ್ಲ.  ನಗರಸಭೆ ಅಧಿಕಾರಿಗಳು ಪರವಾನಗಿ ನೀಡುವ ಸಂದರ್ಭದಲ್ಲಿಯೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿರುವುದನ್ನು ಕಡ್ಡಾಯವಾಗಿ ಪರಿಶೀಲಿಸಿ ಅನುಮತಿ ನೀಡಬೇಕು.

ಅಂಜಿನಪ್ಪ, ವಾಹನ ಸವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.