ADVERTISEMENT

ಮಾದರಿ ಶಾಲೆಗಾಗಿ ಗ್ರಾಮಸ್ಥರ ಸಹಕಾರ ಅಗತ್ಯ

ದೇವಸ್ಥಾನ ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ರಂಗಮಂದಿರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 14:17 IST
Last Updated 24 ಫೆಬ್ರುವರಿ 2020, 14:17 IST
ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್ ರಂಗಮಂದಿರವನ್ನು ಉದ್ಘಾಟಿಸಿದರು.
ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್ ರಂಗಮಂದಿರವನ್ನು ಉದ್ಘಾಟಿಸಿದರು.   

ಚಿಕ್ಕಬಳ್ಳಾಪುರ: ‘ಪ್ರತಿ ಗ್ರಾಮದಲ್ಲೂ ಗ್ರಾಮಸ್ಥರು ಪಕ್ಷಾತೀತವಾಗಿ ಸರ್ಕಾರಿ ಶಾಲೆಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದರೆ, ಖಂಡಿತ ಸರ್ಕಾರಿ ಶಾಲೆಗಳನ್ನು ಮತ್ತಷ್ಟು ಸದೃಢವಾಗಿ ಸಮಾಜಕ್ಕೆ ಮಾದರಿಯಾಗುವ ರೀತಿ ರೂಪಿಸಲು ಸಾಧ್ಯವಿದೆ’ ಎಂದು ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್ ಹೇಳಿದರು.

ತಾಲ್ಲೂಕಿನ ದೇವಸ್ಥಾನ ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ರಂಗಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇವಸ್ಥಾನ ಹೊಸಹಳ್ಳಿ ಗ್ರಾಮಸ್ಥರು ಸರ್ಕಾರದ ಅನುದಾನವನ್ನು ಪಡೆಯದೇ ದಾನಿಗಳಿಂದ ಸಂಗ್ರಹಿಸಿದ ಹಣದಿಂದ ವಿನೂತನವಾಗಿ ರಂಗಮಂದಿರವನ್ನು ನಿರ್ಮಿಸಿರುವುದು ಶ್ಲಾಘನೀಯ. ಈ ಶಾಲೆಯ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡುತ್ತಿದೆ. ಉತ್ತಮ ಪರಿಸರ ಉಳ್ಳ ಆವರಣ ರೂಪಿಸಿ ಪರಿಸರ ಮಿತ್ರ ಪ್ರಶಸ್ತಿಗೆ ಕೂಡ ಭಾಜನವಾಗುವ ಮೂಲಕ ಇತರ ಶಾಲೆಗಳಿಗೆ ಮಾದರಿಯಾಗಿದೆ’ ಎಂದು ತಿಳಿಸಿದರು.

ADVERTISEMENT

‘ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಅಧಿಕವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ಮತ್ತಷ್ಟು ಸದೃಢವಾಗಿ ಬೆಳೆಸಿ ಸಮಾಜಕ್ಕೆ ಮಾದರಿಯನ್ನಾಗಿಸುವಲ್ಲಿ ಶಿಕ್ಷಕರು, ಮಕ್ಕಳು ಹಾಗೂ ಗ್ರಾಮಸ್ಥರು ಸಹಕಾರ ಅಗತ್ಯವಿದೆ. ಇಂತಹ ಕಾರ್ಯಗಳು ಹೆಚ್ಚೆಚ್ಚು ನಡೆಯಬೇಕಿದೆ’ ಎಂದರು.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮುನಿರಾಜು, ಜೀವನ್ ಆಸ್ಪತ್ರೆಯ ಮುಖ್ಯಸ್ಥ ಡಾ.ಐ.ಎಸ್.ರಾವ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣ ಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ರಾಮಶೇಷಪ್ಪ, ಅರಸನಹಳ್ಳಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ವೆಂಕಟೇಶ್, ಮುಖ್ಯ ಶಿಕ್ಷಕ ಶಾಂತಮೂರ್ತಿ, ಶಿಕ್ಷಕರಾದ ಬಿ.ಸಿ.ಮಂಜುಳ ಪ್ರಕಾಶ್ ಹನುಮಂತ ರೆಡ್ಡಿ, ಮುಖಂಡರಾದ ಸಂತೋಷ್, ರಾಮಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.