ADVERTISEMENT

ರೈತರ ಮೇಲಿನ ಮೊಕದ್ದಮೆ ಹಿಂಪಡೆಯಿರಿ: ಮಾಜಿ ಸಂಸದ ಎಸ್.ಮುನಿಸ್ವಾಮಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 5:04 IST
Last Updated 2 ಆಗಸ್ಟ್ 2025, 5:04 IST
ಚಿಂತಾಮಣಿಯಲ್ಲಿ ಶುಕ್ರವಾರ ಬಿಜೆಪಿ ಮತ್ತು ಜೆಡಿಎಸ್ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿದರು
ಚಿಂತಾಮಣಿಯಲ್ಲಿ ಶುಕ್ರವಾರ ಬಿಜೆಪಿ ಮತ್ತು ಜೆಡಿಎಸ್ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿದರು   

ಚಿಂತಾಮಣಿ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ದಿನಕ್ಕೊಂದು ಭ್ರಷ್ಟಾಚಾರದ ಅವಾಂತರ, ವಿವಿಧ ನಿಗಮಗಳ ಹಣವನ್ನು ನುಂಗಿ ನೀರು ಕುಡಿಯುತ್ತಿದೆ’ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದರು.

ತಿಮ್ಮಸಂದ್ರದಲ್ಲಿ ಶುಕ್ರವಾರ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಕಾಂಗ್ರೆಸ್ ಸರ್ಕಾರ ಒಂದು ಕೋಮಿನ ಬೆಂಬಲದಿಂದ ಜಯಗಳಿಸಿದ್ದೇವೆ ಎಂಬ ಭ್ರಮೆಯಲ್ಲಿ ಮುಳುಗಿದೆ. ಒಂದು ಕೋಮನ್ನು ಮೆರೆಸುತ್ತಿದೆ. ಉಗ್ರವಾದಿಗಳಿಗೆ ಬೆಂಬಲ ನೀಡುತ್ತಿರುವವರನ್ನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯು ಬ್ರದರ್ಸ್, ಅಮಾಯಕರು, ಲೋಕಜ್ಞಾನ ಇಲ್ಲದವರು ಎಂದು ಹೇಳುತ್ತಿದ್ದಾರೆ. ಎನ್‌ಐಎ ಅಧಿಕಾರಿಗಳು ರಾತ್ರೋರಾತ್ರಿ ಆಗಮಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ಆಶ್ರಯ ಪಡೆದಿರುವ ಉಗ್ರಗಾಮಿಗಳನ್ನು ಹಾಗೂ ಅವರಿಗೆ ಬೆಂಬಲ ನೀಡುತ್ತಿರುವವರನ್ನು ಬಂಧಿಸಿ ಕರೆದೊಯ್ಯುತ್ತಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ಸಚಿವ ಜಮೀರ್ ಅಹ್ಮದ್ ಖಾನ್ ಅವರಿಂದ ವಕ್ಫ್ ಜಮೀನು ವಿವಾದ ಬುಗಿಲೆದ್ದಿತು. ನೂರಾರು ವರ್ಷಗಳಿಂದ ರೈತರು ಉಳುಮೆ ಮಾಡುತ್ತಿದ್ದ ಜಮೀನುಗಳನ್ನು ವಕ್ಫ್ ಸೇರಿದ್ದು ಎಂದು ಅಧಿಕಾರಿಗಳ ಮೂಲಕ ವಶಪಡಿಸಿಕೊಳ್ಳಲು ಆರಂಭಿಸಿದರು. ರೈತರು ಪ್ರತಿಭಟನೆಗೆ ಇಳಿದಾಗ ಎಚ್ಚೆತ್ತುಕೊಂಡ ಸಿದ್ದರಾಮಯ್ಯ ರೈತರ ಯಾವುದೇ ಜಮೀನು ವಶಪಡಿಸಿಕೊಳ್ಳುವುದಿಲ್ಲ. ರೈತರ ಮೇಲೆ ದಾಖಲಿಸಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯಲಾಗುವುದು ಎಂದು ಭರವಸೆ ನೀಡಿದ್ದರೂ ರಾಜಕೀಯ ಕಾರಣಗಳಿಂದ ಅಮಾಯಕರ ಮೇಲಿನ ದೌರ್ಜನ್ಯ ದಬ್ಬಾಳಿಕೆ ಮುಂದುವರೆದಿದೆ’ ಎಂದು ಆರೋಪಿಸಿದರು.

ತಿಮ್ಮಸಂದ್ರದಲ್ಲಿ ವಕ್ಫ್ ಜಮೀನಿನ ವಿವಾದದಲ್ಲಿ 92 ವರ್ಷದ ವೃದ್ಧನ ಮೇಲೆ, 87 ಮತ್ತು 82 ವರ್ಷದ ವೃದ್ಧರ ಮೇಲೆ ಹಾಗೂ ಬುದ್ದಿಮಾಂದ್ಯರ ಮೇಲೆ ರಾಜಕೀಯ ಒತ್ತಡಗಳಿಂದ ಪೊಲೀಸ್ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ. ಕೂಡಲೇ ಮೊಕದ್ದಮೆ ಹಿಂತೆಗೆದುಕೊಂಡು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಹೋರಾಟ ರೂಪಿಸಲಾಗುವುದು ಎಂದರು.

ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿ ಮಾತನಾಡಿ, ‘ಕ್ಷೇತ್ರದಲ್ಲಿ ರಾಜಕೀಯ ದೌರ್ಜನ್ಯ, ದಬ್ಬಾಳಿಕೆ ಅತಿಯಾಗಿದೆ. ತಿಮ್ಮಸಂದ್ರ ವಕ್ಫ್ ಜಮೀನಿನ ವಿಷಯದಲ್ಲಿ ಕಳೆದ 18 ತಿಂಗಳಿಂದ ಮನೆಯಿಂದ ಹೊರಬರಲಾಗದೆ ಹಾಸಿಗೆ ಮೇಲೆ ಇರುವ ವ್ಯಕ್ತಿಯ ಮೇಲೆ ಮೊಕದ್ದಮೆ ದಾಖಲಿಸಿದ್ದಾರೆ. ಮೇಲ್ನೋಟಕ್ಕೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ರಾಜಕೀಯವಾಗಿ ಮಣಿಸಲು ಪೊಲೀಸ್ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಆರೋಪಿಸಿದರು.

ವೇಣುಗೋಪಾಲ್, ಸ್ಥಳೀಯ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.