ADVERTISEMENT

ಚಿಂತಾಮಣಿ | 90 ಗ್ರಾಮಗಳಲ್ಲಿ ನೀರಿನ ಸಮಸ್ಯೆ

ತಾಲ್ಲೂಕಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ನೀರಿನ ಹಾಹಾಕಾರ, 122 ಗ್ರಾಮಗಳು ಸಮಸ್ಯೆ ಉದ್ಬವ ನಿರೀಕ್ಷೆ

ಎಂ.ರಾಮಕೃಷ್ಣಪ್ಪ
Published 24 ಏಪ್ರಿಲ್ 2020, 19:45 IST
Last Updated 24 ಏಪ್ರಿಲ್ 2020, 19:45 IST
ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಗ್ರಾಮದಲ್ಲಿ ಉಚಿತ ನೀರು ಸರಬರಾಜಿಗಾಗಿ ಮುಗಿಬಿದ್ದಿದ್ದ ಜನರು
ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಗ್ರಾಮದಲ್ಲಿ ಉಚಿತ ನೀರು ಸರಬರಾಜಿಗಾಗಿ ಮುಗಿಬಿದ್ದಿದ್ದ ಜನರು   

ಚಿಂತಾಮಣಿ: ಬೇಸಿಗೆಯ ಬಿಸಿಲಿನ ತಾಪ, ಜತೆಗೆ ಸದಾ ಬರಗಾಲದ ಹಣೆಪಟ್ಟಿಯನ್ನು ಹೊತ್ತ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಬವಣೆ ತೀವ್ರಗೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನರು ನೀರಿಗಾಗಿ ಪರದಾಡುತ್ತಿದ್ದಾರೆ.

ಕೊರೊನಾ ಲಾಕ್ ಡೌನ್ ನಿಂದ ಜನರು ಮನೆಯಲ್ಲೇ ಇರುವುದರಿಂದ ನೀರಿನ ಅವಶ್ಯಕತೆಯೂ ಅಧಿಕವಾಗಿದೆ. ಪ್ರಾಣಿ, ಪಕ್ಷಿ, ಜಾನುವಾರುಗಳು ನೀರಿಗಾಗಿ ಅಲೆದಾಡುತ್ತಿವೆ. ಹಿಂದೆಂದೂ ಕಾಣದಂತಹ ತತ್ವಾರ ಕುಡಿಯುವ ನೀರಿಗೆ ಈ ಬಾರಿ ಎದುರಾಗಿದೆ.

ಒಂದು ಗ್ರಾಮದಲ್ಲಿ ಸಮಸ್ಯೆ ಬಗೆಹರಿಸಿದರೆ ಮತ್ತೊಂದು ಗ್ರಾಮದಲ್ಲಿ ಸಮಸ್ಯೆ ಭುಗಿಲೇಳುತ್ತಿದೆ. ತಾಲ್ಲೂಕಿನಲ್ಲಿ ನೀರಿಗಾಗಿ ನದಿ, ನಾಲೆಗಳು ಸೇರಿದಂತೆ ಯಾವುದೇ ನೈಸರ್ಗಿಕ ಮೂಲಗಳಿಲ್ಲ. ಮಳೆಯ ಕೊರತೆಯಿಂದ ಕೆರೆ, ಕುಂಟೆಗಳು ಬತ್ತಿಹೋಗಿವೆ. ಕೇವಲ ಕೊಳವೆ ಬಾವಿಗಳು ಮಾತ್ರ ನೀರಿನ ಮೂಲಗಳಾಗಿವೆ.

ADVERTISEMENT

1500 ಅಡಿಗಳು ಕೊರೆದೂ ನೀರು ಸಿಗುತ್ತಿಲ್ಲ, ಲಕ್ಷಾಂತರ ರೂ ಖರ್ಚು ಮಾಡಿ ಕೊರೆದ ಬಾವಿಗಳು ಕೆಲವೇ ತಿಂಗಳುಗಳಲ್ಲಿ ಒಣಗುತ್ತಿವೆ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

’ತಾಲ್ಲೂಕಿನಲ್ಲಿ ಒಟ್ಟು 422 ಗ್ರಾಮಗಳಿವೆ. ಪ್ರಸ್ತುತ 90 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. 30 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 60 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ನೀರು ಸರಬರಾಜು ಮಾಡಲಾಗುತ್ತಿದೆ‘ ಎಂದು ಗ್ರಾಮೀಣ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯ ಎಇಇ ವೆಂಕಟರಮಣಪ್ಪ ತಿಳಿಸಿದರು.

’ಸುಮಾರು 122 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ. ಕೊಳವೆ ಬಾವಿಗಳು ವಿಫಲವಾಗುತ್ತಿರುವ ಕಾರಣ ನೀರಿಗಾಗಿ ಟ್ಯಾಂಕರ್ ಮತ್ತು ಖಾಸಗಿ ಕೊಳವೆ ಬಾವಿಗಳಿಗೆ ಮೋರೆ ಹೋಗಲಾಗುತ್ತಿದೆ. ಪ್ರತಿ ಟ್ಯಾಂಕರ್ ₹ 600, ಖಾಸಗಿ ಕೊಳವೆಬಾವಿಗೆ ತಿಂಗಳಿಗೆ ₹18 ಸಾವಿರ ಬಾಡಿಗೆ ಪಾವತಿಸಲಾಗುತ್ತಿದೆ. ನಿತ್ಯ 100 ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ‘ ಎಂದು ಹೇಳಿದರು.

ಗ್ರಾಮಗಳಲ್ಲಿ ಜನರ ನೀರಿನ ಸಮಸ್ಯೆ ಪರಿಹರಿಸಲು ಟ್ಯಾಂಕರ್ ವ್ಯವಸ್ಥೆ ಮಾಡಿದರೂ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ. ಟ್ಯಾಂಕರ್‌ ನೀರಿನ ವಿಚಾರದಲ್ಲಿ ರಾಮನ ಲೆಕ್ಕ, ಕೃಷ್ಣನ ಲೆಕ್ಕ ಜೋರಾಗಿ ನಡೆಯುತ್ತಿದೆ. ಅಧಿಕಾರಿಗಳು, ಗುತ್ತಿಗೆದಾರರು ಲೆಕ್ಕ ಲೆಕ್ಕ ಹೇಳಿ ವಂಚಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಅಂಕಿ ಅಂಶಗಳು..

422:ತಾಲ್ಲೂಕಿನಲ್ಲಿ ಹಳ್ಳಿಗಳು
90:ನೀರಿನ ಸಮಸ್ಯೆ ಉಳ್ಳ ಹಳ್ಳಿಗಳು
30:ಟ್ಯಾಂಕರ್ ನೀರು ಪೂರೈಕೆ ಗ್ರಾಮಗಳು
60:ಬಾಡಿಗೆ ಪಡೆದ ಖಾಸಗಿ ಕೊಳವೆಬಾವಿಗಳು
₹600:ಒಂದು ಟ್ಯಾಂಕರ್ ನೀರಿನ ದರ
₹18,000:ಖಾಸಗಿ ಕೊಳವೆಬಾವಿ ಮಾಸಿಕ ಬಾಡಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.