ADVERTISEMENT

ಶಿಡ್ಲಘಟ್ಟ: ಸಮರ್ಪಕ ನಿರ್ವಹಣೆ ಇಲ್ಲದೇ ಕುಡಿವ ನೀರಿನ ಅಭಾವ

ಶಿಡ್ಲಘಟ್ಟ ನಗರದಲ್ಲಿ ನಿಷ್ಖ್ರಿಯಗೊಂಡ ನೀರಿನ ಸರಬರಾಜು ವ್ಯವಸ್ಥೆ

ಡಿ.ಜಿ.ಮಲ್ಲಿಕಾರ್ಜುನ
Published 15 ಏಪ್ರಿಲ್ 2024, 5:32 IST
Last Updated 15 ಏಪ್ರಿಲ್ 2024, 5:32 IST
ಶಿಡ್ಲಘಟ್ಟದ ನಗರಸಭೆಯ ಏಕೈಕ ನೀರಿನ ಟ್ಯಾಂಕರ್
ಶಿಡ್ಲಘಟ್ಟದ ನಗರಸಭೆಯ ಏಕೈಕ ನೀರಿನ ಟ್ಯಾಂಕರ್   

ಶಿಡ್ಲಘಟ್ಟ: ನೀರೇನೋ ಸಾಕಷ್ಟಿದೆ ಆದರೂ ಕುಡಿಯುವ ನೀರಿಗೆ ತತ್ವಾರ ಎಂಬ ಸ್ಥಿತಿ ಶಿಡ್ಲಘಟ್ಟ ನಗರದಲ್ಲಿ ಸೃಷ್ಟಿಯಾಗಿದೆ.

ನಗರಸಭೆಯ ಕೊಳವೆ ಬಾವಿಗಳಲ್ಲಿ ಸಾಕಷ್ಟು ನೀರಿದ್ದರೂ, ನಗರದಲ್ಲಿ ನೀರಿನ ಸಮಸ್ಯೆ ತಲೆದೋರಿರುವುದಕ್ಕೆ ಮುಖ್ಯ ಕಾರಣ ನಗರಸಭೆಯಿಂದ ಕೊಳವೆಬಾವಿ ಮೋಟಾರ್‌ ದುರಸ್ತಿ ಸಮರ್ಪಕವಾಗಿ ನಡೆಯದಿರುವುದು.

ನಗರದಲ್ಲಿ ನಗರಸಭೆಯ 129 ಕೊಳವೆ ಬಾವಿಗಳಿವೆ. ಅವುಗಳಲ್ಲಿ 22 ಕೊಳವೆ ಬಾವಿಗಳು ಹಲವು ಕಾರಣಗಳಿಂದ ನಿಷ್ಕ್ರಿಯವಾಗಿದೆ. ಉಳಿದಂತೆ 107 ಕೊಳವೆಬಾವಿಗಳಲ್ಲಿ ನೀರಿದ್ದರೂ, ಕುಡಿಯುವ ನೀರನ್ನು ಸಾರ್ವಜನಿಕರಿಗೆ ವಿತರಿಸಲಾಗುತ್ತಿಲ್ಲ.

ADVERTISEMENT

ಈ ಹಿಂದೆ ಕೊಳವೆ ಬಾವಿಗಳ ಪಂಪು ಮೋಟಾರ್ ದುರಸ್ತಿಯಾದರೆ ಕನಿಷ್ಠ ಐದಾರು ತಿಂಗಳು ಸಮಸ್ಯೆ ಇರುತ್ತಿರಲಿಲ್ಲ. ಆದರೆ ಈಗ ಪ್ರತಿ ವಾರವೂ ಮೋಟಾರ್ ಕೆಟ್ಟು ನಿಲ್ಲುತ್ತಿವೆ. ಈ ಹಿಂದೆ ನಗರಸಭೆಯ ಮೋಟಾರ್ ದುರಸ್ತಿ ಮಾಡಿಕೊಡುತ್ತಿದ್ದ ದೇವರಾಜ್ ತಮಗೆ ನಗರಸಭೆ ಇನ್ನೂ ₹23 ಲಕ್ಷ ಪಾವತಿಸಬೇಕಿದೆ ಎನ್ನುತ್ತಾರೆ.

ಕೇಬಲ್ ಪಂಪುಪ್‌ ಮೋಟಾರ್‌ಗಳು ಎಲ್ಲವೂ ಹಳೆಯದಾಗಿದ್ದು, ಸಂಪೂರ್ಣವಾಗಿ ಬದಲಾಯಿಸಬೇಕಿದೆ ಎಂಬುದಾಗಿ ಈ ಸಮಸ್ಯೆಯ ಮೂಲ ಕೆದಕಿದಾಗ ತಿಳಿದುಬರುತ್ತದೆ. ದುರಸ್ತಿ ಮಾಡುವ ಫಯಾಜ್ ಕೂಡ ತನಗೆ ಸರಿಯಾಗಿ ಹಣ ನೀಡುತ್ತಿಲ್ಲವೆಂದು ದೂರುತ್ತಾರೆ. ಈಗಾಗಲೇ ನಗರಸಭೆ ಸುಮಾರು ನಾಲ್ಕು ಕೋಟಿ ಸಾಲದಲ್ಲಿದೆ. ಕಂದಾಯಗಳು ಕೆಲವು ಭಾಗಗಳಿಂದ ಮಾತ್ರ ವಸೂಲಾಗುತ್ತದೆ. ಉಳಿದಂತೆ ಕೆಲವೆಡೆ ಆಗುತ್ತಲೇ ಇಲ್ಲ.

ಒಂದೆಡೆ ನಗರಸಭೆಯಲ್ಲಿ ಹಣವಿಲ್ಲ, ಮತ್ತೊಂದೆಡೆ ಆಗಿಂದಾಗ್ಗೆ ಕೆಡುತ್ತಿರುವ ಪಂಪ್‌ ಮೋಟಾರ್‌ಗಳು. ಹಣ ನೀಡದೆ ದುರಸ್ತಿ ಹೇಗೆ ಮಾಡುವುದು ಎನ್ನುವ ರಿಪೇರಿದಾರರು ಮುಂದೆ ಬರುತ್ತಿಲ್ಲ. ಒಟ್ಟಾರೆ ನೀರಿದೆ, ಆದರೆ ಯಾರಿಗೂ ಕೊಡಲು ಆಗದು ಎನ್ನುವ ಪರಿಸ್ಥಿತಿಯಲ್ಲಿದೆ ನಗರಸಭೆ.

ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಕೆಲವು ನಗರಸಭೆಯ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಅವರು ಸಭೆ ನಡೆಸಿ ನೀರಿನ ಕುರಿತಾಗಿ ಮೊದಲ ಆದ್ಯತೆ ಇರಲಿ ಎಂದು ಸೂಚಿಸಿದ್ದರು.

‘ದುರಸ್ತಿಯಾದ ಕೊಳವೆ ಬಾವಿಯ ಪಂಪ್‌ ಮೋಟಾರ್‌ ಕನಿಷ್ಠ ಒಂದು ತಿಂಗಳಾದರೂ ಸರಿಯಾಗಿ ಕೆಲಸ ಮಾಡಬೇಕು. ನಗರದ ಮಯೂರ ವೃತ್ತದಲ್ಲಿನ ಕೊಳವೆಬಾವಿಯ ಪಂಪ್‌ ಮೋಟಾರ್‌ಅನ್ನು ಒಂದು ವಾರದಲ್ಲಿ ನಾಲ್ಕರಿಂದ ಐದು ಬಾರಿ ಎತ್ತಿದ್ದಾರೆ. ಸಮಸ್ಯೆ ಕಂಡು ಹಿಡಿಯಲು ಆಗುತ್ತಿಲ್ಲವೋ ಅಥವಾ ಬಿಲ್ ಮಾಡಲೆಂದು ಎತ್ತಿ ಇಳಿಸುತ್ತಿದ್ದಾರೊ ಎಂಬ ಅನುಮಾನ ಜನರಲ್ಲಿ ಮೂಡಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಮುರಳಿ.

ನಗರಸಭೆಯ 15ನೇ ಹಣಕಾಸು ಯೋಜನೆಯಡಿ ಐದು ವಾರ್ಡ್‌ಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಆರು ತಿಂಗಳ ಹಿಂದೆ ಕೊರೆಸಿದ್ದ ಈ ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿದೆಯಾದರೂ ಇದುವರೆಗೂ ಪಂಪ್‌ ಮೋಟಾರ್‌ ಅಳವಡಿಕೆಯಾಗಿಲ್ಲ. ಈ ಬಾರಿ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗುತ್ತದೆ ಎಂದು ತಿಳಿದಿದ್ದರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ನಗರಸಭೆ ಕಾರ್ಯವೈಖರಿಯ ಬಗ್ಗೆ ಜನರು ಬೇಸರ ವ್ಯಕ್ತಪಡಿಸುತ್ತಾರೆ.

‘ಕೊಳವೆ ಬಾವಿಯೊಳಗೆ ದುರಸ್ತಿ ಮಾಡಿ ಮೋಟರ್‌ಗಳನ್ನು ಬಿಡುತ್ತಿಲ್ಲ, ರಿಪೇರಿ ಮಾಡಿಸಲು ವಾಹನವನ್ನು ಕಳಿಸುತ್ತಿಲ್ಲ. ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ನೀರು ಬರದೇ ಜನರು ನಮಗೆ ಹಿಡಿಶಾಪ ಹಾಕುತ್ತಿದ್ದಾರೆ’ ಎಂದು ಕೆಲವು ನಗರಸಭೆ ಸದಸ್ಯರು ತಮ್ಮ ನೋವನ್ನು ವ್ಯಕ್ತಪಡಿಸುತ್ತಾರೆ.

ಖಾಸಗಿ ಕೊಳವೆ ಬಾವಿಗಳಿಂದ ನೀರು: ಖಾಸಗಿ ಕೊಳವೆ ಬಾವಿಗಳಿಗೆ ತಿಂಗಳಿಗೆ ಇಂತಿಷ್ಟು ನಿಗದಿ ಮಾಡಿರುವ ಹಣವನ್ನು ಮೊದಲು ಕೊಡಿ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದರು. ಆದರೂ ಈ ಹಣ ಸಂದಾಯವಾಗದ ಕಾರಣ ಖಾಸಗಿ ಕೊಳವೆ ಬಾವಿ ಮಾಲೀಕರು ನಗರಸಭೆಗೆ ತಮ್ಮ ಕೊಳವೆ ಬಾವಿಯನ್ನು ನಗರಸಭೆಯವರಿಗೆ ನೀಡಲು ಒಪ್ಪುತ್ತಿಲ್ಲ.

‘ಶಿಡ್ಲಘಟ್ಟದ ನಗರಸಭೆಯ ಕೊಳವೆಬಾವಿಗಳಲ್ಲಿ ನೀರಿಲ್ಲವಾದಲ್ಲಿ ನೀವು ಖಾಸಗಿ ಕೊಳವೆ ಬಾವಿಗಳನ್ನು ಕೇಳಿ. ನಿಮ್ಮ ಕೊಳವೆ ಬಾವಿಗಳಲ್ಲಿಯೇ ಬೇಕಾದಷ್ಟು ನೀರಿದೆ. ಅದನ್ನು ಸಮರ್ಪಕವಾಗಿ ಹಂಚಿಕೆ ಮಾಡಿಕೊಳ್ಳದೆಯೇ ಖಾಸಗಿ ಕೊಳವೆ ಬಾವಿಯನ್ನು ಕೇಳುವುದು ಯಾಕೆ?. ಅದರದ್ದೂ ಸಾಕಷ್ಟು ಹಣ ಬಾಕಿ ಉಳಿಸಿಕೊಂಡಿದೆ. ನಿಮ್ಮ ಕೊಳವೆ ಬಾವಿಗಳನ್ನು ಹಾಳು ಮಾಡಿರುವುದಲ್ಲದೇ ನಮ್ಮದನ್ನೂ ಹಾಳು ಮಾಡುತ್ತೀರಾ’ ಎಂದು ಖಾಸಗಿ ಕೊಳವೆ ಬಾವಿ ಮಾಲೀಕ ಮಂಜುನಾಥ್ ನಗರಸಭೆಯ ಅಧಿಕಾರಿಗಳತ್ತ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಶಿಡ್ಲಘಟ್ಟದಲ್ಲಿ ಕೆಟ್ಟುಹೋದ ಕೊಳವೆಬಾವಿಯ ಪಂಪು ಮೋಟಾರ್ ಮೇಲಕ್ಕೆಳೆಯುತ್ತಿರುವುದು

ಕೊಳವೆಬಾವಿ ದುರಸ್ತಿ ಮಾಡುವ ಕಾರ್ಯಕ್ಕಿಂತ ಕೆಟ್ಟು ಹೋಗುತ್ತಿರುವ ಪ್ರಮಾಣವೇ ಹೆಚ್ಚಿದೆ. ನಗರಸಭೆಯ ಟ್ಯಾಂಕರನ್ನು ಕಳಿಸಿಕೊಡಿ ನೀರಿಗೆ ನಾನು ಹಣ ಕೊಡುತ್ತೇನೆಂದರೆ ಇರುವ ಒಂದು ಟ್ಯಾಂಕರಿನ ಹತ್ತು ಸಮಸ್ಯೆಗಳನ್ನು ಹೇಳುತ್ತಾರೆ

-ಎಲ್.ಅನಿಲ್ ಕುಮಾರ್ ನಗರಸಭಾ ಸದಸ್ಯ

ಒಂದೇ ನೀರಿನ ಟ್ಯಾಂಕರ್

ಇಷ್ಟು ದೊಡ್ಡ ನಗರಸಭೆಯಲ್ಲಿರುವುದು ಒಂದೇ ಒಂದು ನೀರಿನ ಟ್ಯಾಂಕರ್. ಅದು ಮುಂದಕ್ಕೂ ಹೋಗುವುದಿಲ್ಲ ಹಿಂದಕ್ಕೂ ಚಲಿಸುವುದಿಲ್ಲ ಎಂಬ ಸ್ಥಿತಿಯಲ್ಲಿದೆ. ಅದರ ಸಮಸ್ಯೆಗಳೊಂದಿಗೆ ನೀರನ್ನು ಹಾಕಲು ಅರ್ಧ ದಿನ ಬೇಕಾಗುತ್ತದೆ. ಈ ದುಸ್ಥಿತಿಯಲ್ಲಿರುವ ಒಂದೇ ಒಂದು ಟ್ಯಾಂಕರ್‌ನಿಂದ ಎಷ್ಟು ವಾರ್ಡ್‌ಗೆ ಎಷ್ಟು ನೀರು ಹಾಕಿಸಲು ಸಾಧ್ಯವಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.